ADVERTISEMENT

`ಸತತ ಸೋಲು ಆತಂಕಕ್ಕೆ ಕಾರಣ'

ಡೇರ್‌ಡೆವಿಲ್ಸ್ ಗೆಲುವಿನ ಹಾದಿಗೆ ಮರಳಲಿದೆ: ನದೀಮ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 19:59 IST
Last Updated 13 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಇನ್ನೂ ಗೆಲುವಿನ ಖಾತೆ ತೆರೆಯುವಲ್ಲಿ ವಿಫಲವಾಗಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಒತ್ತಡಕ್ಕೆ ಒಳಗಾಗಿದೆ. `ಸತತ ಸೋಲುಗಳು ಎದುರಾಗಿರುವುದು ಆತಂಕಕ್ಕೆ ಕಾರಣವಾಗಿದೆ' ಎಂದು ಈ ತಂಡದ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಹೇಳಿದ್ದಾರೆ.

`ನಾವು ಸತತ ನಾಲ್ಕು ಸೋಲು ಅನುಭವಿಸಿದ್ದೇವೆ. ಇದು ನಿಜವಾಗಿಯೂ ಕಳವಳದ ಸಂಗತಿ. ಆದರೆ ಟ್ವೆಂಟಿ-20ಯಲ್ಲಿ ಏನು ಬೇಕಾದರೂ ನಡೆಯಬಹುದು. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲೂ ನಾವು ಗೆಲುವಿನ ಹಾದಿಯಲ್ಲಿ ಎಡವಿದ್ದೆವು. ಆದರೆ ಈಗ ಎಚ್ಚೆತ್ತುಕೊಳ್ಳುವುದು ಅಗತ್ಯ. ನಾಕೌಟ್ ಹಂತ ಪ್ರವೇಶಿಸಬೇಕಾದರೆ ಗೆಲುವಿನ ಹಾದಿಗೆ ಮರಳಬೇಕಾಗಿದೆ' ಎಂದು ಶುಕ್ರವಾರ ನಡೆದ ಪಂದ್ಯದ ಬಳಿಕ ನದೀಮ್ ಪ್ರತಿಕ್ರಿಯಿಸಿದ್ದಾರೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೇರ್‌ಡೆವಿಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ಮೂರು ವಿಕೆಟ್‌ಗಳ ಸೋಲು ಅನುಭವಿಸಿತ್ತು. ಗೆಲುವಿಗೆ 115 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ್ದ ಸನ್‌ರೈಸರ್ಸ್ ಪರದಾಟ ನಡೆಸಿದರೂ 19.2 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತ್ತು.

`ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಂಡು ಇನ್ನುಳಿದ 12 ಪಂದ್ಯಗಳಲ್ಲಿ ಗೆಲುವು ಪಡೆಯಲು ಪ್ರಯತ್ನಿಸಬೇಕಿದೆ. ಇದಕ್ಕಾಗಿ ಸಂಘಟಿತ ಹೋರಾಟ ನಡೆಸುವುದು ಅನಿವಾರ್ಯ' ಎಂದು ನದೀಮ್ ಆಭಿಪ್ರಾಯಪಟ್ಟಿದ್ದಾರೆ.

`ನಮ್ಮ ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳಿದ್ದಾರೆ. ಯಾರಿಗೂ ಉತ್ತಮ ಪ್ರದರ್ಶನ ತೋರಲು ಆಗುತ್ತಿಲ್ಲ. ಆದರೆ ಇನ್ನು ತಡಮಾಡಬಾರದು. ಎಲ್ಲರೂ ನೈಜ ಸಾಮರ್ಥ್ಯದಿಂದ ಆಡಬೇಕು. ಮುಂದಿನ ಕೆಲವು ಪಂದ್ಯಗಳಲ್ಲಿ ನಮ್ಮಿಂದ ಶ್ರೇಷ್ಠ ಆಟ ಹೊರಹೊಮ್ಮುವುದನ್ನು ನೀವು ನೋಡುವಿರಿ' ಎಂದಿದ್ದಾರೆ.

ವೀರೇಂದ್ರ ಸೆಹ್ವಾಗ್ ಆಗಮನದ ಹೊರತಾಗಿಯೂ ಡೇರ್‌ಡೆವಿಲ್ಸ್ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿತ್ತು. 20 ಓವರ್‌ಗಳಲ್ಲಿ ಎಂಟು ವಿಕೆಟ್ ಕಳೆದುಕೊಂಡು ಕೇವಲ 114 ರನ್ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.