ADVERTISEMENT

ಸಮಬಲದ ಪೈಪೋಟಿ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ಚೆನ್ನೈ (ಪಿಟಿಐ): ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಗುರುವಾರ ಪರಸ್ಪರ ಎದುರಾಗಲಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ತಂಡಗಳು ಏಳು ಪಂದ್ಯಗಳನ್ನಾಡಿದ್ದು, ತಲಾ 10 ಪಾಯಿಂಟ್ ಕಲೆಹಾಕಿವೆ. ಆದರೆ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ದೋನಿ ಬಳಗ ಎರಡನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ತಂಡ ಬ್ಯಾಟಿಂಗ್‌ನಲ್ಲಿ ಮಿಂಚದೇ ಇರುವುದರಿಂದ ಉತ್ತಮ ರನ್‌ರೇಟ್ ಹೊಂದಿಲ್ಲ.

ಆದ್ದರಿಂದ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳು ಅಬ್ಬರದ ಆಟ ತೋರುವುದು ಅಗತ್ಯ. ಮಹೇಂದ್ರ ಸಿಂಗ್ ದೋನಿ ನೇತೃತ್ವದ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಶಕ್ತಿ ಏನೆಂಬುದು ಎಲ್ಲರಿಗೂ ತಿಳಿದಿದೆ.

ಈ ಹಿಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ನೀಡಿದ್ದ 186 ರನ್‌ಗಳ ಗುರಿಯನ್ನು ಬೆನ್ನಟ್ಟಿ ಗೆಲುವು ಪಡೆಯುವಲ್ಲಿ ಸೂಪರ್ ಕಿಂಗ್ಸ್ ಯಶಸ್ವಿಯಾಗಿತ್ತು. ತಂಡದಲ್ಲಿ ಹೆಚ್ಚಿನ ಆಲ್‌ರೌಂಡರ್‌ಗಳು ಇದ್ದಾರೆ. ಈ ಕಾರಣ ಕೊನೆಯ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲಿಷ್ಠವಾಗಿದೆ.
ಆರಂಭ: ರಾತ್ರಿ 8.00ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.