ADVERTISEMENT

ಸಮಸ್ಯೆಗಳ ನಡುವೆಯೂ ಪಾಕ್ ಫೇವರಿಟ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2011, 19:30 IST
Last Updated 21 ಮಾರ್ಚ್ 2011, 19:30 IST
ಸಮಸ್ಯೆಗಳ ನಡುವೆಯೂ ಪಾಕ್ ಫೇವರಿಟ್
ಸಮಸ್ಯೆಗಳ ನಡುವೆಯೂ ಪಾಕ್ ಫೇವರಿಟ್   

ಢಾಕಾ: ಪಾಕಿಸ್ತಾನದ ಪಾಲಿಗೆ ‘ಮಾರ್ಚ್ 23’ ವಿಶೇಷ ದಿನ. ಕಾರಣ ಅಂದು ಆ ದೇಶದ ರಿಪಬ್ಲಿಕ್ ಡೇ. ಜೊತೆಗೆ ಈ ದೇಶದ ಉದಯಕ್ಕಾಗಿ 1940, ಮಾರ್ಚ್ 23ರಂದು ಲಾಹೋರ್‌ನಲ್ಲಿ ನಿರ್ಣಯವೊಂದನ್ನು ಕೈಗೊಳ್ಳಲಾಗಿತ್ತು. ಹಾಗಾಗಿ ಅದನ್ನು ಪ್ರತಿವರ್ಷ ‘ಪಾಕಿಸ್ತಾನ ದಿನ’ವನ್ನಾಗಿ ಆಚರಿಸುತ್ತಾರೆ.

ಈ ವಿಶೇಷ ದಿನ ಶಾಹೀದ್ ಅಫ್ರಿದಿ ಪಡೆಗೆ ಅದೃಷ್ಟ ತರಲಿದೆಯೇ? ಕಾರಣ ಮಾರ್ಚ್ 23ರಂದು (ಬುಧವಾರ) ಪಾಕ್ ಆಟಗಾರರು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಸಲಿದ್ದಾರೆ. ಮಿರ್‌ಪುರದ ಶೇರ್ ಎ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಗೆದ್ದರೆ ಪಾಕ್‌ನಲ್ಲಿ ಸಂಭ್ರಮ ದುಪ್ಪಟ್ಟಾಗಲಿದೆ. ಕಾರಣ ಆ ದಿನ ಆ ದೇಶದಲ್ಲಿ ರಜೆ ಕೂಡ. ಈಗಾಗಲೇ ಆ ದೇಶದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ಸೈಯದ್ ಯೂಸುಫ್ ರಾಜಾ ಗಿಲಾನಿ ತಂಡಕ್ಕೆ ಶುಭ ಕೋರಿದ್ದಾರೆ.

ADVERTISEMENT

ಹಲವು ವಿವಾದಗಳ ಕೇಂದ್ರ ಬಿಂದುವಾಗಿರುವ ಅಫ್ರಿದಿ ಬಳಗ ಈಗ ಒಮ್ಮೆಲೇ ವಿಶ್ವಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಈ ತಂಡದವರು ‘ಎ’ ಗುಂಪಿನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ದಾಖಲಿಸಿದ್ದಾರೆ.

ಈ ಮೂಲಕ ಒಟ್ಟು 10 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ರಾಸ್ ಟೇಲರ್ 0 ಹಾಗೂ 4 ರನ್‌ನಲ್ಲಿದ್ದಾಗ ವಿಕೆಟ್ ಕೀಪರ್ ಕಮ್ರನ್ ಅಕ್ಮಲ್ ಕ್ಯಾಚ್ ಕೈಬಿಟ್ಟಿದ್ದರಿಂದ ಸೋಲಬೇಕಾಯಿತು ಅಷ್ಟೆ.

‘ಆಟಗಾರರಿಗೆ ತಮ್ಮಲ್ಲಿ ಅಪಾರ ನಂಬಿಕೆ ಇದೆ. ಅಂದುಕೊಂಡಿದ್ದನ್ನು ಸಾಧಿಸುವ ಛಲವಿದೆ. ಎಲ್ಲರೂ ಫಿಟ್ ಆಗಿದ್ದಾರೆ’ ಎಂದು ಪಾಕ್ ತಂಡದ ಮ್ಯಾನೇಜರ್ ಇಂತಿಕಾಬ್ ಆಲಾಂ ತಿಳಿಸಿದ್ದಾರೆ.

12 ವರ್ಷಗಳಿಂದ ವಿಶ್ವಕಪ್‌ನಲ್ಲಿ ಅಜೇಯವಾಗುಳಿದು ಸತತ 34 ಗೆಲುವಿನೊಂದಿಗೆ ಬೀಗುತ್ತಿದ್ದ ಹ್ಯಾಟ್ರಿಕ್ ಚಾಂಪಿಯನ್ ಆಸ್ಟ್ರೇಲಿಯಾಕ್ಕೆ ಬ್ರೇಕ್ ಹಾಕಲು ಪಾಕ್ ತಂಡ ಬರಬೇಕಾಯಿತು. ಭದ್ರತೆ ಸಮಸ್ಯೆ ಕಾರಣ ವಿಶ್ವಕಪ್ ಆತಿಥ್ಯವನ್ನು ಪಾಕ್‌ನಿಂದ ಕಿತ್ತುಕೊಳ್ಳಲಾಗಿದೆ. ಈ ಕಾರಣ ಸ್ವದೇಶದಲ್ಲಿ ಆಡಲು ಅವರಿಗೆ ಸಾಧ್ಯವಾಗಿಲ್ಲ. ಆದರೂ ಈಗ ಅವರು ಅಪಾಯಕಾರಿ ಎನಿಸಿದ್ದಾರೆ. ‘ಆಸ್ಟ್ರೇಲಿಯಾ ಎದುರಿನ ಗೆಲುವು ನಮ್ಮಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿದೆ. ಇದು ಕ್ವಾರ್ಟರ್ ಫೈನಲ್ ಹೋರಾಟಕ್ಕೆ ನೆರವಿಗೆ ಬರಲಿದೆ’ ಎಂದೂ ಆಲಾಂ ಹೇಳಿದ್ದಾರೆ.

ಈ ತಂಡವು ಪ್ರತಿಭಾವಂತ ಆಟಗಾರರಾದ ಮೊಹಮ್ಮದ್ ಆಸಿಫ್, ಮೊಹಮ್ಮದ್ ಅಮೇರ್, ಸಲ್ಮಾನ್ ಬಟ್ ಅವರ ಸೇವೆಯಿಂದ ವಂಚಿತವಾಗಿದೆ. ಕಾರಣ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ನಿಷೇಧಕ್ಕೆ ಒಳಗಾಗಿದ್ದಾರೆ. ಆದರೂ ತಂಡ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ತೋರುತ್ತಿದೆ. 

ಈ ವಿಶ್ವಕಪ್‌ನಲ್ಲಿ ಲೆಗ್ ಸ್ಪಿನ್ನರ್ ಅಫ್ರಿದಿ (17) ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ವಿಶ್ವಕಪ್ ಟೂರ್ನಿಯಲ್ಲಿ ಯಾರಿಗೆ ತಂಡದ ಸಾರಥ್ಯ ವಹಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳಲು ಪಾಕ್ ಕ್ರಿಕೆಟ್ ಮಂಡಳಿ ಒಂದು ತಿಂಗಳು ಪರದಾಡಿತ್ತು. ಇದಕ್ಕೆ ಕಾರಣ ಅಫ್ರಿದಿ ಹಾಗೂ ಮಿಸ್ಬಾ ನಡುವಿನ ಪೈಪೋಟಿ.

ಆದರೆ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟಿದ್ದ ನಾಯಕ ಅಫ್ರಿದಿಯನ್ನು ಮುಂದುವರಿಸಲು ಕೊನೆಗೆ ಪಿಸಿಬಿ ತೀರ್ಮಾನಿಸಿತ್ತು. ಅದನ್ನು ಅಫ್ರಿದಿ ಇದುವರೆಗೆ ಸಮರ್ಥಿಸಿಕೊಂಡಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಯುವ ಆಟಗಾರರಾದ ಉಮರ್ ಅಕ್ಮಲ್, ಅಸಾದ್ ಅಶ್ಫಕ್, ಅನುಭವಿಗಳಾದ ಯೂನಿಸ್ ಖಾನ್ ಹಾಗೂ ಮಿಸ್ಬಾ ಉಲ್ ಹಕ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ವೇಗಿ ಉಮರ್ ಗುಲ್ ಪ್ರಭಾವಿ ಬೌಲಿಂಗ್ ದಾಳಿ ನಡೆಸುತ್ತಿದ್ದಾರೆ.

2007ರ ವಿಶ್ವಕಪ್‌ನಲ್ಲಿ ಐರ್ಲೆಂಡ್ ಎದುರು ಸೋತಿದ್ದ ಪಾಕ್ ಮೊದಲ ಸುತ್ತಿನಲ್ಲಿ ಹೊರಬಿದ್ದಿತ್ತು. ಕೋಚ್ ವೂಲ್ಮರ್ ನಿಗೂಢ ಸಾವು ಈ ತಂಡವನ್ನು ಮತ್ತಷ್ಟು ವಿವಾದದಲ್ಲಿ ಸಿಲುಕಿಸಿತ್ತು. ಆದರೆ ಈ ಬಾರಿ ವಿಶ್ವಕಪ್ ಎತ್ತಿ ಹಿಡಿಯಲು ಇನ್ನು ಮೂರು ಯಶಸ್ವಿ ಹೆಜ್ಜೆ ಇಡಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.