ಮುಂಬೈ: ಕ್ರಿಕೆಟ್‌ನ ಇತಿಹಾಸದಲ್ಲಿ ಸಾಕಷ್ಟು ರೋಚಕ ಪಂದ್ಯಗಳು ನಡೆದಿವೆ. ಎಷ್ಟೋ ಆಟಗಾರರ ವಿದಾಯ ಪಂದ್ಯಗಳು ಮುಗಿದುಹೋಗಿವೆ. ಆದರೆ ಯಾವುದೇ ಪಂದ್ಯ ಕೂಡಾ ಅಭಿಮಾನಿಗಳ ಕುತೂಹಲವನ್ನು ಈ ರೀತಿಯಲ್ಲಿ ಹಿಡಿದಿಟ್ಟ ಬೇರೆ ಉದಾಹರಣೆ ಕ್ರಿಕೆಟ್ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ.
ಹೌದು, ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ವಿದಾಯ ಪಂದ್ಯ ಸೃಷ್ಟಿಸಿರುವ ‘ಕ್ರೇಜ್’ ಅಪಾರವಾದದ್ದು. ಕೆಲವರು ಇದನ್ನು ‘ಶತಮಾನದ ಪಂದ್ಯ’ ಎಂದೇ ಬಿಂಬಿಸತೊಡಗಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಎರಡನೇ ಕ್ರಿಕೆಟ್ ಪಂದ್ಯ ಸಚಿನ್ ಪಾಲಿಗೆ 200 ನೇ ಟೆಸ್ಟ್ ಹಾಗೂ ವೃತ್ತಿಜೀವನದ ಕಟ್ಟಕಡೆಯ ಪಂದ್ಯ ಎನಿಸಿಕೊಂಡಿದೆ. 200ನೇ ಟೆಸ್ಟ್ ಬಳಿಕ ನಿವೃತ್ತಿಯಾಗುವುದಾಗಿ ಮುಂಬೈಕರ್ ಈ ಮುನ್ನವೇ ಪ್ರಕಟಿಸಿದ್ದರು.
ಆದ್ದರಿಂದ ಸಚಿನ್ ಅಭಿಮಾನಿಗಳಿಗೆ ಇದು ಕೇವಲ ಒಂದು ಕ್ರಿಕೆಟ್ ಪಂದ್ಯವಾಗಿ ಉಳಿದುಕೊಂಡಿಲ್ಲ. ಐತಿಹಾಸಿಕ ಹಾಗೂ ಭಾವುಕ ಕ್ಷಣ ಎನಿಸಲಿದೆ. 24 ವರ್ಷಗಳ ಕಾಲ ಕ್ರಿಕೆಟ್ ವಿಶ್ವದ ಮೇರು ಮಂದಾರವಾಗಿ ಮೆರೆದಾಡಿದ ನೆಚ್ಚಿನ ಆಟಗಾರನ ಬ್ಯಾಟಿಂಗ್ ಕೊನೆಯ ಬಾರಿ ನೋಡುವ ಅವಕಾಶ ಇದಾಗಿದೆ.
ಈ ಪಂದ್ಯದ ಪ್ರತಿಯೊಂದು ಕ್ಷಣಗಳೂ ಸಚಿನ್ ಅಭಿಮಾನಿಗಳ ಪಾಲಿಗೆ ಮಹತ್ವದ್ದು. ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಭಾರತದ ಇತರ ಹತ್ತು ಆಟಗಾರರ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದೇ ರೀತಿ ಎದುರಾಳಿ ವೆಸ್ಟ್‌್ ಇಂಡೀಸ್ ಆಟಗಾರರ ಬಗ್ಗೆಯೂ ಯಾರೂ ಚಿಂತಿಸುತ್ತಿಲ್ಲ. ಎಲ್ಲರ ಮನಸ್ಸಿನಲ್ಲಿರುವುದು ಒಂದು ಹೆಸರು ಮಾತ್ರ, ಅದು ಸಚಿನ್.
ಪಂದ್ಯವಲ್ಲ, ಉತ್ಸವ...!:
ಈ ಪಂದ್ಯವನ್ನು ಒಂದು ಉತ್ಸವವನ್ನಾಗಿ ಬದಲಾಯಿಸಲು ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸಕಲ ಸಿದ್ಧತೆಯನ್ನೂ ನಡೆಸಿದೆ.
ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಸಚಿನ್ 199ನೇ ಟೆಸ್ಟ್‌್ ಪಂದ್ಯವನ್ನು ಸ್ಮರಣೀಯವನ್ನಾಗಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ಸಾಕಷ್ಟು ಪರಿಶ್ರಮಪಟ್ಟಿತ್ತು. ಇದೀಗ ಎಂಸಿಎ ಅದಕ್ಕಿಂತಲೂ ಮಿಗಿಲಾದ ಸಿದ್ದತೆಗಳನ್ನು ಮಾಡಿದೆ. ಪಂದ್ಯದ ಆರಂಭಕ್ಕಾಗಿ ಕ್ಷಣಗಣನೆ ಶುರುವಾಗಿದೆ.
ಮುಂಬೈ ಮಹಾನಗರಿ ಸಚಿನ್ ಜಪದಲ್ಲಿ ನಿರತವಾಗಿರುವಂತೆ ಭಾಸವಾಗುತ್ತಿದೆ. ಅರಬ್ಬಿ ಸಮುದ್ರದ ಕಡೆಯಿಂದ ಬೀಸುತ್ತಿರುವ ತಂಗಾಳಿ, ವಾಂಖೆಡೆಯ ಹಸಿರು ಹಾಸು ಒಳಗೊಂಡಂತೆ ಎಲ್ಲೆಡೆಯೂ ತುಂಬಿ ನಿಂತಿರುವುದು ಸಚಿನ್ ಮಾತ್ರ. ಅಂತರರಾಷ್ಟ್ರೀಯ ಕ್ರಿಕೆಟ್ ಜೊತೆಗಿನ ತಮ್ಮ 24 ವರ್ಷಗಳ ಸುದೀರ್ಘ ಅವಧಿಯ ನಂಟನ್ನು ಕೊನೆಗೊಳಿಸಲು ಸಚಿನ್ ಮಾನಸಿಕವಾಗಿ ತಯಾರಾಗಿದ್ದಾರೆ.
ಸಚಿನ್ ಅವರ ಪೋಸ್ಟರ್, ಕಟೌಟ್‌ಗಳನ್ನು ನಿಲ್ಲಿಸಿ ವಾಂಖೆಡೆ ಕ್ರೀಡಾಂಗಣವನ್ನು ಅಲಂಕರಿಸುವ ಕೆಲಸ ಮಂಗಳವಾರ ಭರದಿಂದ ಸಾಗಿತ್ತು. ಸಚಿನ್ ಟೆಸ್ಟ್ ಜೀವನದಲ್ಲಿ ಗಳಿಸಿದ ಶತಕಗಳ ಕುರಿತ ಮಾಹಿತಿಯನ್ನು ಬೃಹತ್ ಪೋಸ್ಟರ್‌ಗಳಲ್ಲಿ ನೀಡಲಾಗಿದೆ. ಅವರ 51 ಟೆಸ್ಟ್ ಶತಕಗಳು ಹಾಗೂ ಪ್ರತಿ ಗಳಿಸಿದ ಸ್ಕೋರ್‌ಗಳ ವಿವರಗಳು ಅದರಲ್ಲಿವೆ.
ಕೊನೆಯ ಪಂದ್ಯವನ್ನಾಡುತ್ತಿರುವ ಸಚಿನ್‌ಗೆ ಯಾವ ರೀತಿಯ ಲ್ಲೆಲ್ಲಾ ಗೌರವ ನೀಡಲು ಸಾಧ್ಯವೋ, ಅಂತಹ ಎಲ್ಲ ಕೆಲಸಗಳನ್ನು ಎಂಸಿಎ ಮಾಡಿದೆ. ಮುಂಬೈ ಕ್ರಿಕೆಟ್ ಸಂಸ್ಥೆ ಸೋಮವಾರ ಸಚಿನ್ ಅವರನ್ನು ಸನ್ಮಾನಿಸಿತ್ತು. ಸಚಿನ್ ಕೊನೆಯ ಪಂದ್ಯ ವೀಕ್ಷಿಸಲು ಕ್ರೀಡೆ ಒಳಗೊಂಡಂತೆ ವಿವಿಧ ವಲಯಗಳ ಗಣ್ಯರು ಆಗಮಿಸಲಿದ್ದಾರೆ. ಮಗನ ಆಟವನ್ನು ನೋಡಲು ತಾಯಿ ರಜನಿ ಕೂಡಾ ಕ್ರೀಡಾಂಗಣಕ್ಕೆ ಬರಲಿದ್ದಾರೆ. ಸಚಿನ್ ಅವರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ರಜನಿ ಇದುವರೆಗೆ ಕ್ರೀಡಾಂಗಣದಲ್ಲಿ ಕುಳಿತು ವೀಕ್ಷಿಸಿಲ್ಲ.
ಒಟ್ಟಿನಲ್ಲಿ ವಾಂಖೆಡೆ ಕ್ರೀಡಾಂಗಣ ಪಂದ್ಯದ ಐದು ದಿನಗಳ ಕಾಲವೂ ಚಟುವಟಿಕೆಯ ಕೇಂದ್ರ ಎನಿಸಿಕೊಳ್ಳಲಿದೆ. ಮುಂಬೈ ಮಾತ್ರವಲ್ಲ, ಕ್ರಿಕೆಟ್ ಜಗತ್ತಿನ ಚಿತ್ತ ಮರೀನ್ ಡ್ರೈವ್‌ನ ಪಕ್ಕ ಪವಡಿಸಿರುವ ಕ್ರೀಡಾಂಗಣದತ್ತ ನೆಡಲಿದೆ. ಎರಡು ವರ್ಷಗಳ ಹಿಂದೆ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಈ ಕ್ರೀಡಾಂಗಣ ಇದೀಗ ಮತ್ತೊಂದು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲು ಸಜ್ಜಾಗಿದೆ.
ಪಂದ್ಯಕ್ಕಾಗಿ ತಯಾರಿಯಲ್ಲಿ ತೊಡಗಿರುವ ಪ್ರತಿಯೊಬ್ಬರ ಮುಖದಲ್ಲೂ ಸಂತಸದ ಜೊತೆ ಭಾವುಕತೆ ಎದ್ದು ಕಾಣುತ್ತಿದೆ. ಇನ್ನು ಮುಂದೆ ಸಚಿನ್ ಬ್ಯಾಟಿಂಗ್ ಸೊಬಗನ್ನು ಸವಿಯಲು ಇಲ್ಲವಲ್ಲ ಎಂಬ ದುಃಖ ಎಲ್ಲರ ಮನಸ್ಸಿನ ಮೂಲೆಯಲ್ಲಿದೆ. ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಪಂದ್ಯದ ಎಲ್ಲ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ವಾಂಖೇಡೆ ಕ್ರೀಡಾಂಗಣದ ಕೌಂಟರ್ ಗಳಲ್ಲಿ ಟಿಕೆಟ್ ಮಾರಾಟಕ್ಕೆ ಎಂಸಿಎ ಮುಂದಾಗಿಲ್ಲ. ಅಭಿಮಾನಿಗಳು ಟಿಕೆಟ್‌ಗೆ ಮುಗಿ ಬೀಳುವ ಭಯದಿಂದ ಎಂಸಿಎ ಆನ್‌ಲೈನ್‌ನಲ್ಲಿ ಮಾತ್ರ ಮಾರಾಟಕ್ಕಿಟ್ಟಿತ್ತು.
ಕೌಂಟರ್‌ಗಳಲ್ಲಿ ಟಿಕೆಟ್ ಮಾರಾಟಕ್ಕೆ ಇಡದೇ ಇರುವುದು ಹಲವರ ಕೋಪಕ್ಕೆ ಕಾರಣವಾಗಿದೆ. ಇದೇ ಕಾರಣ ಸೋಮವಾರ ಕ್ರೀಡಾಂಗಣದ ಬಳಿ ಪ್ರತಿಭಟನೆ ಕೂಡಾ ನಡೆದಿತ್ತು. ಮಂಗಳವಾರ ಕೂಡಾ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಕ್ರೀಡಾಂಗಣದ ಹೊರ ಭಾಗದಲ್ಲಿ ನೆರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.