ADVERTISEMENT

`ಸರ್' ಜಡೇಜ ಬಗ್ಗೆ ದೋನಿ ತಮಾಷೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಬಗ್ಗೆ ಇಂಟರ್‌ನೆಟ್‌ನಲ್ಲಿ ಈಗಾಗಲೇ ಸಾಕಷ್ಟು ತಮಾಷೆ ಮಾತುಗಳು ಹರಿದಾಡುತ್ತಿವೆ. ಅವರನ್ನು `ಸರ್' ಎಂದು ಸಂಬೋಧಿಸಿ ಹಲವು ತಮಾಷೆಗಳನ್ನು ಸೃಷ್ಟಿಸಲಾಗಿದೆ. ನಾಯಕ ಮಹೇಂದ್ರ ಸಿಂಗ್ ದೋನಿ ಟ್ವಿಟರ್‌ನಲ್ಲಿ ಬರೆದಿರುವ ಜೋಕ್‌ಗಳೂ ಈಗ ಅವುಗಳ ಸಾಲಿಗೆ ಸೇರಿಕೊಂಡಿವೆ.

ಶನಿವಾರ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವಿಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಕೊನೆಯ ಎಸೆತದಲ್ಲಿ ಎರಡು ರನ್‌ಗಳು ಬೇಕಿದ್ದವು. ಆರ್‌ಪಿ ಸಿಂಗ್ ಅವರ ಎಸೆತ ನೋಬಾಲ್ ಆದ ಕಾರಣ ದೋನಿ ಬಳಗ ಗೆಲುವು ತನ್ನದಾಗಿಸಿಕೊಂಡಿತ್ತು. ಈ ಕುರಿತು ದೋನಿ ಜಯ ತಂದುಕೊಟ್ಟ ಜಡೇಜ ಅವರ ಬ್ಯಾಟಿಂಗ್‌ನ್ನು ನೆನಪಿಸಿಕೊಂಡು ಟ್ವಿಟರ್‌ನಲ್ಲಿ ತಮಾಷೆ ಹರಿಯಬಿಟ್ಟಿದ್ದಾರೆ. `ಒಂದು ಎಸೆತದಿಂದ ಎರಡು ರನ್‌ಗಳು ಬೇಕು ಎಂದಾದರೆ, ಸರ್ ರವೀಂದ್ರ ಜಡೇಜ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಬೇಕು. ಅವರು ಮತ್ತೂ ಒಂದು ಎಸೆತ ಬಾಕಿ ಇರುವಂತೆಯೇ ಎರಡು ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಡುತ್ತಾರೆ..!' ಎಂದು ಜೋಕ್ ಮಾಡಿದ್ದಾರೆ.

ಜಡೇಜ ಬಗ್ಗೆ ದೋನಿ ಬರೆದಿರುವ ಕೆಲವು ಜೋಕ್‌ಗಳು ಹೀಗಿವೆ:
`ಅಂತರರಾಷ್ಟ್ರೀಯ ಸರಣಿಗಳಲ್ಲಿ ಹೆಚ್ಚಾಗಿ ಕೇವಲ ಒಂದು ಟ್ವೆಂಟಿ-20 ಪಂದ್ಯ ಮಾತ್ರ ಆಯೋಜಿಸುವುದರಿಂದ ಸರ್ ಜಡೇಜ ಬೇಸರಗೊಂಡಿದ್ದರು. ಹೀಗಾಗಿ ಬಿಸಿಸಿಐ ಐಪಿಎಲ್ ಆಯೋಜಿಸಿದೆ. ಇದಕ್ಕಾಗಿ ಎಲ್ಲ ಅಭಿಮಾನಿಗಳೂ ಸರ್ ರವೀಂದ್ರ ಜಡೇಜ ಅವರಿಗೆ ಧನ್ಯವಾದ ಹೇಳಿ'

`ಸರ್ ಜಡೇಜ ಜೀಪ್ ಚಾಲನೆ ಮಾಡುವಾಗ, ಜೀಪ್ ನಿಂತಲ್ಲೇ ನಿಂತಿರುತ್ತದೆ. ಆದರೆ ರಸ್ತೆಯೇ ಚಲಿಸುತ್ತದೆ... ಅವರು ಯಾವಾಗ ಬ್ಯಾಟಿಂಗ್‌ಗೆ ಬರುತ್ತಾರೋ, ಆಗ ಇಡೀ ಪೆವಿಲಿಯನ್ನೇ ವಿಕೆಟ್ ಬಳಿ ಬರುತ್ತದೆ..!'

`ಸರ್ ಜಡೇಜ ಕ್ಯಾಚ್ ಪಡೆಯಲು ಓಡುವುದಿಲ್ಲ. ಬದಲಿಗೆ ಚೆಂಡೇ ಅವರನ್ನು ಹುಡುಕಿಕೊಂಡು ಬಂದು ಅವರ ಕೈಯಲ್ಲಿ ನಿಲ್ಲುತ್ತದೆ..!'

`ಅಭ್ಯಾಸ ಮಾಡಲಿಕ್ಕಾಗಿ ಮಧ್ಯಾಹ್ನ ಮೂರು ಗಂಟೆಗೆ ಅವರು ಹೊರಡುತ್ತಾರೆ. ಆದರೆ, ಅವರು ಅಭ್ಯಾಸ ಮಾಡಲಿ ಎಂದು ಕ್ರೀಡಾಂಗಣವೇ ಹತ್ತಿರ ಬರುತ್ತದೆ..!'

`ಸರ್ ಜಡೇಜ ತಪ್ಪು ಮಾಡಿದರೆ ಅದು ಸಂಶೋಧನೆಯಾಗುತ್ತದೆ. ದಿನಂಪ್ರತಿ ಇಂತಹ ಸಾಕಷ್ಟು ಸಂಶೋಧನೆಗಳು ನಡೆಯುತ್ತವೆ. ಎಲ್ಲದಕ್ಕೂ ಪೇಟೆಂಟ್ ಸಿಗಬೇಕಷ್ಟೇ..!' ಎಂದು ದೋನಿ ಟ್ವೀಟ್ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ದೋನಿ ಸೂಪರ್‌ಸ್ಟಾರ್ ರಜನೀಕಾಂತ್ ಅವರನ್ನು ಉಲ್ಲೇಖಿಸಿ, `ರಜನಿ ಸರ್‌ಗೆ ವಯಸ್ಸಾಗುತ್ತಿರುವುದನ್ನು ಭಗವಂತ ಅರ್ಥ ಮಾಡಿಕೊಂಡ. ಹೀಗಾಗಿ ಸರ್ ರವೀಂದ್ರ ಜಡೇಜ ಅವರನ್ನು ಸೃಷ್ಟಿಸಿದ..!' ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದರು.

`ಸರ್ ಎಂದರೆ ಬೇಸರವಿಲ್ಲ': ತಮ್ಮ ಹೆಸರಿನ ಜೊತೆ ಸರ್ ಪದವಿಯೂ ಸೇರಿಕೊಂಡಿದ್ದಕ್ಕೆ ಬೇಸರವಿಲ್ಲ ಎಂದು ಜಡೇಜಾ ಹೇಳಿದ್ದಾರೆ. ಚೆನ್ನೈನಲ್ಲಿ ಶನಿವಾರ ನಡೆದ ಪಂದ್ಯದ ಬಳಿಕ ಮಾತನಾಡಿದ ಅವರು, `ಇದು ಕೇವಲ ತಮಾಷೆಯಾಗಿದ್ದು, ನಾವ್ಯಾರೂ ಗಂಭೀರವಾಗಿ ತೆಗೆದುಕೊಂಡಿಲ್ಲ. ನಾನು `ಸರ್' ಪದವಿ ಪಡೆಯುವಷ್ಟು ದೊಡ್ಡವನಲ್ಲ ಎಂದು ಭಾವಿಸಿದ್ದೇನೆ. ಆದರೆ ಹಾಗೆ ಕರೆಯುವುದರಲ್ಲಿ ಎಲ್ಲರೂ ಸಂತಸ ಪಡುವುದಾದರೆ, ನನಗೇನೂ ಸಮಸ್ಯೆಯಿಲ್ಲ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.