ADVERTISEMENT

ಸಲ್ಮಾನ್ ಬಟ್‌ಗೆ 10 ವರ್ಷ ನಿಷೇಧ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 18:35 IST
Last Updated 5 ಫೆಬ್ರುವರಿ 2011, 18:35 IST

ದುಬೈ (ಪಿಟಿಐ): ಪಾಕಿಸ್ತಾನದ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಸೇರಿದಂತೆ ಮೂವರು ಕ್ರಿಕೆಟಿಗರ ವಿರುದ್ಧದ ‘ಸ್ಪಾಟ್ ಫಿಕ್ಸಿಂಗ್’ ಆರೋಪ ಸಾಬೀತಾಗಿದ್ದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ವಿಚಾರಣಾ ಆಯೋಗವು ಶನಿವಾರ ಶಿಕ್ಷೆಯನ್ನು ಪ್ರಕಟಿಸಿದೆ.

‘ಸ್ಪಾಟ್ ಫಿಕ್ಸಿಂಗ್’ ಪ್ರಕರಣದಲ್ಲಿ ಮೂವರೂ ತಪ್ಪಿತಸ್ಥರಾಗಿದ್ದರೂ, ತಂಡದ ನಾಯಕರಾಗಿದ್ದುಕೊಂಡು ಬುಕ್ಕಿ ಮಜರ್ ಮಜೀದ್ ನೀಡಿದ ನಿರ್ದೇಶನದಂತೆ ಆಟಗಾರರು ಆಡುವಂತೆ ಮಾಡಿದ ಬಟ್‌ಗೆ ಹತ್ತು ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಆದರೆ ವೇಗದ ಬೌಲರ್‌ಗಳಾದ ಮೊಹಮ್ಮದ್ ಆಸಿಫ್ ಹಾಗೂ ಮೊಹಮ್ಮದ್ ಅಮೇರ್ ಅವರಿಗೆ ಕ್ರಮವಾಗಿ ಏಳು ಹಾಗೂ ಐದು ವರ್ಷ ನಿಷೇಧ ಶಿಕ್ಷೆಯನ್ನು ಆಯೋಗವು ನಿಗದಿ ಮಾಡಿದೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಸಂದರ್ಭದಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಪಾಕ್ ಕ್ರಿಕೆಟಿಗರು ಭಾಗಿಯಾಗಿದ್ದರು ಎನ್ನುವುದು ಐಸಿಸಿ ಸಂಗ್ರಹಿಸಿದ ಸಾಕ್ಷಿಗಳಿಂದ ಖಚಿತವಾಗಿದೆ. ಆಟಗಾರರು ಕೂಡ ತಮ್ಮ ಪರವಾಗಿ ವಾದ ಮಂಡಿಸುವುದಕ್ಕೆ ಅವಕಾಶವನ್ನು ನೀಡಿದ್ದ ಆಯೋಗವು ಜನವರಿ 6ರಂದು ದೋಹಾದಲ್ಲಿ ವಿಚಾರಣೆ ಆರಂಭಿಸಿತ್ತು. ಸತತ ಆರು ದಿನಗಳ ಕಾಲ ದಕ್ಷಿಣ ಆಫ್ರಿಕಾದ ಮಾಜಿ ನ್ಯಾಯಮೂರ್ತಿ ಅಲ್ಬಿ ಸಾಚಸ್ ಹಾಗೂ ಕೀನ್ಯಾದ ಶರದ್ ರಾವ್ ಅವರನ್ನೊಳಗೊಂಡ ಆಯೋಗವು ವಿಚಾರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.