ADVERTISEMENT

ಸಹಾರಾ ಜೊತೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಸಹಾರಾ ಇಂಡಿಯಾ ಹಿಂದೆ ಸರಿದಿರುವ ಕಾರಣ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಲ್ಪ ಒತ್ತಡಕ್ಕೆ ಸಿಲುಕಿದೆ. ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಸಹಾರಾ ಜೊತೆಗೆ ತಳೆದಿದ್ದ ಬಿಗಿ ನಿಲುವಿನಲ್ಲಿ ಬದಲಾವಣೆ ತಂದಿದ್ದು, ಮಾತುಕತೆಗೆ ಸಜ್ಜಾಗಿದೆ.

ಸಹಾರಾ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ನಿರ್ಧಾರ ಶನಿವಾರ ಕೈಗೊಂಡಿತ್ತು. ಇದೀಗ ಎರಡು ದಿನಗಳ ಬಳಿಕ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಸಹಾರಾ ಜೊತೆ ಮಾತುಕತೆಗೆ ಸಿದ್ಧ ಎಂದು ಮಂಡಳಿಯ ಅಧ್ಯಕ್ಷ ಎನ್. ಶ್ರೀನಿವಾಸನ್ ಹೇಳಿದ್ದಾರೆ. ಅದೇ ರೀತಿ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

`ಇದೀಗ ತಲೆದೋರಿರುವ ಬಿಕ್ಕಟ್ಟನ್ನು ಬಗೆಹರಿಸಲು ಸಹಾರಾ ಜೊತೆ ಮಾತುಕತೆಗೆ ನಾವು ಸಿದ್ಧ. ಮಾತುಕತೆ ನಡೆಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಸಹಾರಾ ಇದುವರೆಗೆ ನೀಡಿದ ನೆರವನ್ನು ನಾವು ಮೆಚ್ಚುತ್ತೇವೆ. ಐಪಿಎಲ್‌ನಲ್ಲಿ ತಮಗೆ ಅನ್ಯಾಯ ಉಂಟಾಗಿದೆ ಎಂಬ ಕಾರಣ ಸಹಾರಾ ಈ ಹೆಜ್ಜೆಯಿಟ್ಟಿದೆ. ಮಂಡಳಿಗೆ ಸಹಾರಾ ಜೊತೆ ಉತ್ತಮ ಸಂಬಂಧವಿದ್ದು, ಸಮಸ್ಯೆಯನ್ನು ಬಗೆಹರಿಸುತ್ತೇವೆ~ ಎಂದು ಶ್ರೀನಿವಾಸನ್ ಸೋಮವಾರ ಹೇಳಿದರು.

ಮಾತುಕತೆಗೆ ಉತ್ಸುಕರಾಗಿದ್ದೀರಾ ಎಂಬ ಪ್ರಶ್ನೆಗೆ ಶ್ರೀನಿವಾಸನ್, `ವೈಯಕ್ತಿಕವಾಗಿ ನಾನು ಮಾತಕತೆ ನಡೆಸಲು ಸಿದ್ಧ. ಬಿಸಿಸಿಐ ಕೂಡಾ ಸಿದ್ಧವಿದೆ. ಅವರಿಗೂ ಕೆಲವೊಂದು ಕೊರತೆ ಉಂಟಾಗಿರಬಹುದು. ಆದರೆ ಇದ್ದಕ್ಕಿದ್ದಂತೆ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ಸ್ಪಷ್ಟ ಕಾರಣ ಇರಲಿಲ್ಲ~ ಎಂದರು. `ಸಹಾರಾ ಹಾಗೂ ಬಿಸಿಸಿಐ ಜೊತೆಗಿನ ಸಂಬಂಧ ಏರುಪೇರಿನಿಂದ ಕೂಡಿರುವುದು ನಿಜ. ಆದರೆ ಇಬ್ಬರೂ ಮಾತುಕತೆ ನಡೆಸಿದರೆ ಹಲವು ಭಿನ್ನಾಭಿಪ್ರಾಯಗಳು ಬಗೆಹರಿಯಬಹುದು. ಮಾತುಕತೆಯ ವೇಳೆ ಏನೆಲ್ಲಾ ವಿಷಯ ಚರ್ಚೆಗೆ ಬರಲಿವೆ ಎಂಬುದನ್ನು ಈಗಲೇ ನಿರ್ಧರಿಸುವುದು ಕಷ್ಟ~ ಎಂದು ನುಡಿದರು.

ಐಪಿಎಲ್‌ಗೆ (ಪುಣೆ ವಾರಿಯರ್ಸ್ ತಂಡಕ್ಕೆ) ಸಂಬಂಧಿಸಿದಂತೆ ಸಹಾರಾ ಇಂಡಿಯಾ ಮುಂದಿಟ್ಟಿರುವ ಬೇಡಿಕೆ ಈಡೇರಿಸಲು ಬಿಸಿಸಿಐ ಸಿದ್ಧವಿದೆಯೇ ಎಂದು ಕೇಳಿದಾಗ, `ಐಪಿಎಲ್‌ಗೆ ಸಂಬಂಧಪಟ್ಟ ವಿಷಯಗಳನ್ನು ಲೀಗ್‌ನ ಆಡಳಿತ ಮಂಡಳಿ ನೋಡಿಕೊಳ್ಳಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.