ADVERTISEMENT

ಸಾಂಬಾ ನಾಡಿನಲ್ಲಿ ಕ್ರೀಡಾ ಸಂಭ್ರಮ

31ನೇ ಒಲಿಂಪಿಕ್ಸ್‌ಗೆ ಚಾಲನೆ, ಭಾರತ ಹಾಕಿ ತಂಡದ ಶುಭಾರಂಭ

ಕೆ.ರಾಜೀವ
Published 6 ಆಗಸ್ಟ್ 2016, 19:40 IST
Last Updated 6 ಆಗಸ್ಟ್ 2016, 19:40 IST
ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಗಮನಸೆಳೆದ ದೃಶ್ಯ ವೈಭವ     – ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್
ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಗಮನಸೆಳೆದ ದೃಶ್ಯ ವೈಭವ – ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್   

ರಿಯೊ ಡಿ ಜನೈರೊ: ಪರಿಸರ ರಕ್ಷಣೆಯ ಸಂದೇಶದ ಜತೆಗೆ ಬ್ರೆಜಿಲ್‌ನ ಶ್ರೀಮಂತ ಸಂಸ್ಕೃತಿ, ಸಾಂಬಾ ನೃತ್ಯದ ಸೊಬಗು ಅನಾವರಣಗೊಂಡ ಸಮಾರಂಭದಲ್ಲಿ 31ನೇ ಒಲಿಂಪಿಕ್ಸ್‌ ಕೂಟಕ್ಕೆ ಅಧಿಕೃತ ಚಾಲನೆ ಲಭಿಸಿತು.

ಮರಕಾನಾ ಕ್ರೀಡಾಂಗಣದಲ್ಲಿ ಶುಕ್ರವಾರ ರಾತ್ರಿ (ಭಾರತೀಯ ಕಾಲಮಾನ ಶನಿವಾರ ಬೆಳಿಗ್ಗೆ) ನಾಲ್ಕು ಗಂಟೆಗಳ ಕಾಲ ನಡೆದ ಉದ್ಘಾಟನಾ ಸಮಾರಂಭ ಬ್ರೆಜಿಲ್‌ನ ಇತಿಹಾಸವನ್ನು ಜಗತ್ತಿನ ಮುಂದಿಟ್ಟಿತು.

ಒಲಿಂಪಿಕ್ಸ್‌ನ ಸಿದ್ಧತೆಯ ಹಾದಿಯಲ್ಲಿ ಆರ್ಥಿಕ ಸಮಸ್ಯೆ ಮತ್ತು ರಾಜಕೀಯ ಬಿಕ್ಕಟ್ಟು ಒಳಗೊಂಡಂತೆ ಬ್ರೆಜಿಲ್‌ ಸಾಕಷ್ಟು ತೊಂದರೆಗಳನ್ನು ಎದುರಿಸಿದೆ. ಆದರೆ ಎಲ್ಲ ಅಡೆತಡೆಗಳನ್ನು ದಾಟಿ ಈ ‘ಮಹಾ ಕ್ರೀಡಾಮೇಳ’ವನ್ನು ಯಶಸ್ವಿಯಾಗಿ ಸಂಘಟಿಸಲು ಸಜ್ಜಾಗಿದ್ದೇವೆ ಎಂದು ಆತಿಥೇಯರು ಸಾರಿ ಹೇಳಿದರು.

ಅಥೆನ್ಸ್‌ ಕೂಟದ ಮ್ಯಾರಥಾನ್‌ನಲ್ಲಿ ಕಂಚು ಜಯಿಸಿದ್ದ ಬ್ರೆಜಿಲ್‌ನ ವಾಂಡೆರ್‌ಲೆಯಿ ಡಿ ಲಿಮಾ ಅವರು ಕ್ರೀಡಾಂಗಣದಲ್ಲಿ ‘ಒಲಿಂಪಿಕ್‌ ಕಾಲ್ಡ್ರನ್‌’ ಬೆಳಗಿಸಿದರು.

ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಶೂಟರ್‌ ಅಭಿನವ್‌ ಬಿಂದ್ರಾ ಪಥಸಂಚಲನದಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 17 ದಿನ ನಡೆಯುವ ಕೂಟದಲ್ಲಿ 207 ದೇಶಗಳ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಹಾಕಿ ತಂಡ ಶುಭಾರಂಭ: ಭಾರತ ಪುರುಷರ ಹಾಕಿ ತಂಡದವರು ಶುಭಾರಂಭ ಮಾಡಿದರು. ಶನಿವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಭಾರತ 3–2 ಗೋಲುಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು. ರೂಪಿಂದರ್‌ ಪಾಲ್‌ ಸಿಂಗ್‌ ಎರಡು ಗೋಲುಗಳನ್ನು ಹಾಗೂ ವಿ.ಆರ್‌. ರಘುನಾಥ್‌ ಒಂದು ಗೋಲು ಗಳಿಸಿದರು.

ಪೇಸ್‌– ಬೋಪಣ್ಣ ಹೊರಕ್ಕೆ: ಟೆನಿಸ್‌ನಲ್ಲಿ ಭಾರತದ ಭರವಸೆ ಎನಿಸಿದ್ದ ಲಿಯಾಂಡರ್‌ ಪೇಸ್‌ ಮತ್ತು ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

ಶೂಟಿಂಗ್‌ನಲ್ಲಿ ನಿರಾಸೆ: ಭಾರತದ ಮಹಿಳಾ ಶೂಟರ್‌ಗಳಾದ ಅಪೂರ್ವಿ ಚಾಂಡೇಲಾ ಮತ್ತು ಆಯೋನಿಕಾ ಪಾಲ್‌ ಅವರು ಶನಿವಾರ ನಡೆದ 10 ಮೀಟರ್ಸ್‌ ಏರ್‌ ರೈಫಲ್‌ ವಿಭಾಗದಲ್ಲಿ ಫೈನಲ್‌ ತಲುಪಲು ವಿಫಲರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.