ADVERTISEMENT

ಸಾನಿಯಾ ಮಿರ್ಜಾಗೆ ಏಳನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2012, 19:30 IST
Last Updated 30 ಜನವರಿ 2012, 19:30 IST
ಸಾನಿಯಾ ಮಿರ್ಜಾಗೆ ಏಳನೇ ಸ್ಥಾನ
ಸಾನಿಯಾ ಮಿರ್ಜಾಗೆ ಏಳನೇ ಸ್ಥಾನ   

ನವದೆಹಲಿ (ಪಿಟಿಐ): ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಮಹಿಳಾ ವಿಭಾಗದ ಡಬಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಸಾನಿಯಾ ಮಿರ್ಜಾ ಡಬ್ಲ್ಯುಟಿಎ  ರ‌್ಯಾಂಕಿಂಗ್ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾರೆ.

ಇದು ಸಾನಿಯಾ ವೃತ್ತಿ ಜೀವನದ ಶ್ರೇಷ್ಠ ಸಾಧನೆಯು ಹೌದು. ಈ ಮೊದಲು ಹೈದರಾಬಾದ್‌ನ ಆಟಗಾರ್ತಿ 11ನೇ ಸ್ಥಾನದಲ್ಲಿದ್ದರು. 2012ರ ಜೂನ್ 21ರ ತನಕ ಈ ಆಟಗಾರ್ತಿ ಅಗ್ರ ಹತ್ತರೊಳಗೆ ಸ್ಥಾನ ಉಳಿಸಿಕೊಂಡರೆ, ಲಂಡನ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಳ್ಳಲಿದ್ದಾರೆ.

ಆದರೆ, ಭಾರತದ ಆಟಗಾರ್ತಿ ಸಿಂಗಲ್ಸ್‌ನಲ್ಲಿ ಕುಸಿತ ಕಂಡಿದ್ದಾರೆ. ಈ ಮೊದಲು 106ನೇ ಸ್ಥಾನದಲ್ಲಿದ್ದರು. ಈಗ 111ನೇ ಸ್ಥಾನಕ್ಕೆ ಇಳಿದಿದ್ದಾರೆ. ಸಿಂಗಲ್ಸ್‌ನಲ್ಲಿ ಮೊದಲ 64 ಸ್ಥಾನಗಳನ್ನು ಹೊಂದಿರುವ ಆಟಗಾರರು ನೇರವಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.

ಜೂನ್ ವೇಳೆಗೆ ಸಾನಿಯಾ 64ರ ಒಳಗೆ ಸ್ಥಾನ ಪಡೆಯದೇ ಹೋದರೆ `ವೈಲ್ಡ್‌ಕಾರ್ಡ್~ ಪ್ರವೇಶ ನೀಡುವಂತೆ ಒಲಿಂಪಿಕ್ಸ್ ಸಂಘಟಕರಿಗೆ ಕೋರಲಾಗುವುದು ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ತಿಳಿಸಿದೆ.

ಆಸ್ಟ್ರೇಲಿಯಾ ಓಪನ್ ಟೂರ್ನಿಯ ಡಬಲ್ಸ್‌ನಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಪೆಪನಿಕ್ ಜೊತೆಗೂಡಿ ಚಾಂಪಿಯನ್ ಆದ ಲಿಯಾಂಡರ್ ಪೇಸ್ ಎಟಿಪಿ ರ‌್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ರಷ್ಯಾದ ಎಲೆನಾ ವೆಸ್ನಿನಾ ಜೊತೆ ಸೇರಿ ಪೇಸ್ ರನ್ನರ್ ಅಪ್ ಸ್ಥಾನ ಪಡೆದಿದ್ದರು.

ಹೊಸ ಜೊತೆಗಾರ ಮಹೇಶ್ ಭೂಪತಿ ಜೊತೆ ಕಣಕ್ಕಿಳಿದಿದ್ದ ರೋಹನ್ ಬೋಪಣ್ಣ ಡಬಲ್ಸ್ ವಿಭಾಗದಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಈ ಜೋಡಿ ವರ್ಷದ ಮೊದಲ ಗ್ರ್ಯಾನ್ ಪ್ರಿ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿತ್ತು. ಭೂಪತಿ ಈ ಮೊದಲು ಎಂಟನೇ ಸ್ಥಾನದಲ್ಲಿದ್ದರು. ಈಗ 16ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಸೋಮದೇವ್ ದೇವವರ್ಮನ್ 86ನೇ ಸ್ಥಾನದಿಂದ ಇಳಿಕೆ ಕಂಡು 90ನೇ ಸ್ಥಾನ ಹೊಂದಿದ್ದಾರೆ. ಭುಜದ ನೋವಿನ ಕಾರಣದಿಂದ ಚೆನ್ನೈ ಓಪನ್ ಹಾಗೂ ಆಸ್ಟ್ರೇಲಿಯಾ ಓಪನ್‌ನಲ್ಲಿ ಈ ಆಟಗಾರ ಪಾಲ್ಗೊಂಡಿಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.