ಜಕಾರ್ತ (ಪಿಟಿಐ): ಯುವ ಆಟಗಾರ ಬಿ.ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಅಥೆನ್ಸ್ ಒಲಿಂಪಿಕ್ ಚಾಂಪಿಯನ್ ತೌಫಿಕ್ ಹಿದಾಯತ್‌ಗೆ ಆಘಾತ ನೀಡಿದ್ದಾರೆ.
ಇಸ್ಟೋರಾ ಗೆಲೋರಾ ಬಂಗ್ ಕರ್ನೊ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಪ್ರಣೀತ್ 15-21, 21-12, 21-17ರಲ್ಲಿ ಮಾಜಿ ವಿಶ್ವ ಚಾಂಪಿಯನ್ ಇಂಡೊನೇಷ್ಯಾದ ತೌಫಿಕ್ ಅವರನ್ನು ಸೋಲಿಸಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಈ ಹೋರಾಟ 52 ನಿಮಿಷ ನಡೆಯಿತು. 55ನೇ ರ‍್ಯಾಂಕ್‌ನ ಪ್ರಣೀತ್ ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಲೀ ಚೋಂಗ್ ವೀ ಅವರನ್ನು ಎದುರಿಸಲಿದ್ದಾರೆ. ಚೋಂಗ್ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಆದರೆ ಅನುಭವಿ ಆಟಗಾರ ಪಿ.ಕಶ್ಯಪ್ ಸೋಲು ಕಂಡರು. ಅವರು 7-21, 8-21ರಲ್ಲಿ ಜಪಾನ್‌ನ ಶೊ ಸಸಾಕಿ ಎದುರು ಸುಲಭವಾಗಿ ಪರಾಭವಗೊಂಡರು. ಎರಡೂ ಗೇಮ್‌ಗಳಲ್ಲಿ ಪೂರ್ಣ ಪಾರಮ್ಯ ಮೆರೆದ ಜಪಾನ್ ಆಟಗಾರ ಹದಿನಾರರ ಘಟ್ಟ ಪ್ರವೇಶಿಸಿದರು.
ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಕಶ್ಯಪ್ ಎದುರಾಳಿ ಹೇರಿದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾದರು.
ಅಜಯ್ ಜಯರಾಮ್, ಆರ್‌ಎಂವಿ ಗುರುಸಾಯಿದತ್ ಹಾಗೂ ಸೌರವ್ ವರ್ಮ ಕೂಡ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಜಯರಾಮ್ 22-20, 8-21, 21-12ರಲ್ಲಿ ಇಂಡೊನೇಷ್ಯಾದ ರಿಯಾಂಟೊ ಸುಬಗ್ಜಾ ಎದುರು ಗೆದ್ದರು. 49 ನಿಮಿಷ ನಡೆದ ಈ ಹೋರಾಟದಲ್ಲಿ ವಿಶ್ವದ 28ನೇ ರ‍್ಯಾಂಕ್‌ನ ಭಾರತದ ಆಟಗಾರನಿಗೆ ತೀವ್ರ ಪ್ರತಿರೋಧ ಎದುರಾಯಿತು. ಮುಂದಿನ ಪಂದ್ಯದಲ್ಲಿ ಜಯರಾಮ್ 2007ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಸೋನಿ ಡ್ವಿ ಕುಂಕೊರೊ ಎದುರು ಪೈಪೋಟಿ ನಡೆಸಲಿದ್ದಾರೆ.
ಗುರುಸಾಯಿದತ್ 22-20, 21-16ರಲ್ಲಿ ಸ್ಥಳೀಯ ಆಟಗಾರ ಆ್ಯಂಡ್ರೆ ಕುರ್ನಿಯವಾನ್ ಅವರನ್ನು ಮಣಿಸಿದರು. ವರ್ಮ 19-21, 21-14, 21-15ರಲ್ಲಿ ಡೆನ್ಮಾರ್ಕ್‌ನ ಹನ್ಸ್ ಕ್ರಿಸ್ಟಿಯಾನ್ ಎದುರು ಜಯ ಗಳಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್ ಹಾಗೂ ಸಿಕ್ಕಿ ರೆಡ್ಡಿ 12-21, 17-21ರಲ್ಲಿ ಸ್ಥಳೀಯ ಜೋಡಿ ಗೆಬ್ಬಿ ರಿಸ್ಟಿಯಾನಿ ಹಾಗೂ ತಿಯಾರ ರೊಸಾಲಿಯಾ ಎದುರು ಸೋಲು ಕಂಡರು.
ಈ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಈಗಾಗಲೇ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅವರು ಗುರುವಾರ ಸಯ್ಯಾಕ ತಕಾಹಾಶಿ ಎದುರು ಪೈಪೋಟಿ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.