ADVERTISEMENT

`ಸುಳ್ಳು ಹೇಳಲು ಪೊಲೀಸರು ಒತ್ತಾಯಿಸಿದ್ದರು'

ಕುಂದ್ರಾ ಅವರನ್ನು ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿಸಲು ಯೋಜನೆ: ಗೋಯೆಂಕಾ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ನವದೆಹಲಿ (ಪಿಟಿಐ/ಐಎಎನ್‌ಎಸ್): `ರಾಜಸ್ತಾನ ರಾಯಲ್ಸ್ ಫ್ರಾಂಚೈಸ್‌ನ ರಾಜ್ ಕುಂದ್ರಾ ಅವರನ್ನು ಬೆಟ್ಟಿಂಗ್ ಪ್ರಕರಣದಲ್ಲಿ ಸಿಲುಕಿಸಲು ಸುಳ್ಳು ಹೇಳುವಂತೆ ದೆಹಲಿ ಪೊಲೀಸರು ನನ್ನನ್ನು ಒತ್ತಾಯಿಸಿದ್ದರು' ಎಂದು ಉದ್ಯಮಿ ಉಮೇಶ್ ಗೋಯೆಂಕಾ ನ್ಯಾಯಾಲಯದಲ್ಲಿ ತಿಳಿಸಿದ್ದಾರೆ.

`ಕುಂದ್ರಾ ಹೆಸರನ್ನು ಹೇಳುವಂತೆ ಪೊಲೀಸರು ನನಗೆ ಮಾನಸಿಕ ಹಿಂಸೆ ನೀಡಿದರು. ಮೋಕಾ ಪ್ರಕರಣದಡಿ ಮೊಕದ್ದಮೆ ದಾಖಲಿಸುವುದಾಗಿ ಬೆದರಿಕೆ ಹಾಕಿದರು. ಅವರ ಕಿರುಕುಳದಿಂದ ಪಾರಾಗಲು ಗೆಳೆಯ ಕುಂದ್ರಾ ಬೆಟ್ಟಿಂಗ್‌ನಲ್ಲಿ ತೊಡಗಿದ್ದಾರೆ ಎಂದು ಮ್ಯಾಜಿಸ್ಟ್ರೇಟ್ ಎದುರು ಈ ಹಿಂದೆ ಸುಳ್ಳು ಸಾಕ್ಷಿ ನುಡಿಯಬೇಕಾಯಿತು. ಭಯದಿಂದಾಗಿ ನಾನು ಈ ರೀತಿ ಮಾಡಿದೆ.

ಖಂಡಿತ ಸ್ವಇಚ್ಛೆಯಿಂದ ಈ ವಿಷಯ ತಿಳಿಸಿಲ್ಲ. ಪೊಲೀಸರು ಸೂಚಿಸಿದಂತೆ ನಡೆದುಕೊಂಡಿದ್ದೇನೆ ಅಷ್ಟೆ' ಎಂದು ಕುಂದ್ರಾ ಅವರ ಉದ್ಯಮ ಪಾಲುದಾರರಾಗಿರುವ ಗೋಯೆಂಕಾ ನುಡಿದಿದ್ದಾರೆ.

`ಜೂನ್ ಎರಡರಂದು ಪೊಲೀಸರು ಅಹಮದಾಬಾದ್‌ನಿಂದ ನನ್ನನ್ನು ಅಪಹರಿಸಿ ವಿಚಾರಣೆ ನಡೆಸಿದ್ದರು. ಕಾನೂನು ಬಾಹಿರವಾಗಿ ವಶಕ್ಕೆ ಪಡೆದು ಸುಳ್ಳು ಹೇಳುವಂತೆ ಒತ್ತಾಯಿಸಿದ್ದರು' ಎಂದೂ ಅವರು ಹೇಳಿದ್ದಾರೆ.

ಐಪಿಎಲ್ ವೇಳೆ ಕುಂದ್ರಾ ಕೂಡ ಬೆಟ್ಟಿಂಗ್‌ನಲ್ಲಿ ತೊಡಗಿದ್ದರು ಎಂದು ಜೂನ್ ಐದರಂದು ಮ್ಯಾಜಿಸ್ಟ್ರೇಟ್ ಮುಂದೆ ಗೋಯೆಂಕಾ ಸಾಕ್ಷಿ ನುಡಿದಿದ್ದರು. ಆದರೆ ಅವರೀಗ ರಾಗ ಬದಲಾಯಿಸಿದ್ದಾರೆ. ಪೊಲೀಸರು ನೀಡಿರುವ ಕಿರುಕುಳ ವಿಷಯದ ಲಿಖಿತ ಹೇಳಿಕೆ ಅರ್ಜಿಯನ್ನು ಅವರು ತಮ್ಮ ವಕೀಲ ತರುಣ್ ಗೂಂಬರ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಜಾಮೀನು ವಿಚಾರಣೆ ಮುಂದೂಡಿಕೆ: ಈ ಮಧ್ಯೆ, ಕ್ರಿಕೆಟಿಗ ಅಜಿತ್ ಚಾಂಡಿಲ ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮುಂದೂಡಿದೆ. ಜೂನ್ 14ಕ್ಕೆ ಮತ್ತೆ ವಿಚಾರಣೆ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.