ADVERTISEMENT

ಸೂಪರ್ ಕಿಂಗ್ಸ್‌ಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ಪಂದ್ಯವನ್ನಾಡಲಿರುವ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರು ಭಾನುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು 	-ಪಿಟಿಐ ಚಿತ್ರ
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಮವಾರ ಪಂದ್ಯವನ್ನಾಡಲಿರುವ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರು ಭಾನುವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದರು -ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ಸತತ ಎರಡು ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಟ್ವೆಂಟಿ-20 ಟೂರ್ನಿಯ ಪಂದ್ಯದಲ್ಲಿ ಸೋಮವಾರ ರಾಜಸ್ತಾನ ರಾಯಲ್ಸ್ ವಿರುದ್ಧ ಪೈಪೋಟಿ ನಡೆಸಲಿದೆ.

ಮಹೇಂದ್ರ ಸಿಂಗ್ ದೋನಿ ಬಳಗ ಈ ಹಿಂದಿನ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಮಣಿಸಿತ್ತು. ರವೀಂದ್ರ ಜಡೇಜ ತಮ್ಮ ಆಲ್‌ರೌಂಡ್ ಆಟದ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದ್ದರಿಂದ ಈ ಪಂದ್ಯದಲ್ಲೂ ಎಲ್ಲರ ಗಮನ ಜಡೇಜ ಮೇಲೆ ನೆಟ್ಟಿದೆ.

ಜಡೇಜ ಅಲ್ಲದೆ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿರುವ ಮೈಕ್ ಹಸ್ಸಿ ಕೂಡಾ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್‌ಗೆ ಹೆಚ್ಚಿನ ಬಲ ನೀಡಿದ್ದಾರೆ. ಆಸ್ಟ್ರೇಲಿಯಾದ ಈ ಅನುಭವಿ ಆಟಗಾರ ತಂಡಕ್ಕೆ ಅಬ್ಬರದ ಆರಂಭ ನೀಡುತ್ತಿಲ್ಲವಾದರೂ ಇನಿಂಗ್ಸ್‌ಗೆ ಸ್ಥಿರತೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರಣ ಬಳಿಕ ಆಗಮಿಸುವ ಬ್ಯಾಟ್ಸ್‌ಮನ್‌ಗಳಿಗೆ ಒತ್ತಡವಿಲ್ಲದೆ ಆಡಲು ಸಾಧ್ಯವಾಗುತ್ತಿದೆ.

ಮುರಳಿ ವಿಜಯ್ ಮತ್ತು ಸುರೇಶ್ ರೈನಾ ಲಯ ಕಂಡುಕೊಳ್ಳಲು ವಿಫಲವಾಗಿರುವುದು ಮಾತ್ರ ಸೂಪರ್ ಕಿಂಗ್ಸ್ ತಂಡದ ಆತಂಕಕ್ಕೆ ಕಾರಣ. ಇಂದಿನ ಪಂದ್ಯದಲ್ಲಿ ಇವರಲ್ಲೊಬ್ಬರು ದೊಡ್ಡ ಮೊತ್ತ ಪೇರಿಸುವರು ಎಂಬ ವಿಶ್ವಾಸದಲ್ಲಿ ದೋನಿ ಇದ್ದಾರೆ.

ಈ ಹಿಂದಿನ ಪಂದ್ಯಗಳಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಹಾಗೂ ನೈಟ್ ರೈಡರ್ಸ್ ಎದುರು ಜಯ ಸಾಧಿಸಿರುವ ಸೂಪರ್ ಕಿಂಗ್ಸ್ ಇದೀಗ ತವರು ಅಂಗಳ ಎನಿಸಿರುವ ಚಿದಂಬರಂ ಕ್ರೀಡಾಂಗಣದಲ್ಲಿ `ಹ್ಯಾಟ್ರಿಕ್' ಗೆಲುವಿನ ನಿರೀಕ್ಷೆಯಲ್ಲಿದೆ.

ಪ್ರಬಲ ಪೈಪೋಟಿ ನೀಡುವ ಸಾಧ್ಯತೆ: ಈ ಪಂದ್ಯದಲ್ಲಿ ಸೂಪರ್ ಕಿಂಗ್ಸ್ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆಯಾದರೂ, ರಾಯಲ್ಸ್ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದೆ.

ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ಸ್ ಶನಿವಾರ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಎದುರು ಸೋಲು ಅನುಭವಿಸಿತ್ತು. ಬ್ಯಾಟ್ಸ್‌ಮನ್‌ಗಳ ವೈಫಲ್ಯ ಈ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದ್ದರಿಂದ ಇಂದಿನ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಬ್ಯಾಟ್ಸ್‌ಮನ್‌ಗಳು ಮಿಂಚುವುದು ಅಗತ್ಯ.

`ಇದುವರೆಗೆ ಶ್ರೇಷ್ಠ ಪ್ರದರ್ಶನ ನೀಡಲು ಆಗಿಲ್ಲ. ಮುಂದಿನ ಪಂದ್ಯಗಳಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವ ವಿಶ್ವಾಸವಿದೆ'ಎಂದು ಆರ್‌ಸಿಬಿ ವಿರುದ್ಧದ ಪಂದ್ಯದ ಬಳಿಕ ದ್ರಾವಿಡ್ ಪ್ರತಿಕ್ರಿಯಿಸಿದ್ದರು.

ರಾಯಲ್ಸ್ ತಂಡ ಯಾವುದೇ ಒಂದಿಬ್ಬರು ಆಟಗಾರರನ್ನು ಮಾತ್ರ ಅವಲಂಬಿಸಿಲ್ಲ. ಇದು ಈ ಹಿಂದಿನ ಪಂದ್ಯಗಳಲ್ಲಿ ಸಾಬೀತಾಗಿದೆ. ಎಲ್ಲ ಆಟಗಾರರೂ ಗೆಲುವಿಗಾಗಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ಆಲ್‌ರೌಂಡರ್ ಶೇನ್ ವಾಟ್ಸನ್‌ಗೆ ಇನ್ನೂ ನೈಜ ಆಟ ತೋರಲು ಸಾಧ್ಯವಾಗದೇ ಇರುವುದು ಮಾತ್ರ ತಂಡದ ಚಿಂತೆಗೆ ಕಾರಣ. 

ದ್ರಾವಿಡ್ ಅಲ್ಲದೆ ಅಜಿಂಕ್ಯ ರಹಾನೆ, ಸಿದ್ಧಾರ್ಥ್ ತ್ರಿವೇದಿ ಮತ್ತು ಎಸ್. ಶ್ರೀಶಾಂತ್ ಇದುವರೆಗೆ ನಿರಾಸೆ ಉಂಟುಮಾಡಿಲ್ಲ. ಮಾಜಿ ಚಾಂಪಿಯನ್‌ಗಳ ನಡುವಿನ ಹೋರಾಟವನ್ನು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.