ADVERTISEMENT

ಸೆಮಿಗೆ ವೈಎಸ್‌ಎಸ್‌ಸಿ, ವಾಸು ಇಲೆವೆನ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST

ಹುಬ್ಬಳ್ಳಿ: ಸ್ಥಳೀಯ ಯಂಗ್‌ಸ್ಟರ್‌ ಸ್ಪೋರ್ಟ್ಸ್ ಕ್ಲಬ್‌ (ವೈಎಸ್‌ಎಸ್‌ಸಿ), ವಾಸು ಇಲೆವೆನ್‌, ಗದಗದ ಹನುಮಾನ್‌ ಬ್ಲೆಸಿಂಗ್‌ ಹಾಗೂ ಔರಂಗಾಬಾದ್‌ ಸಾಯ್‌ ತಂಡದವರು ಹುಬ್ಬಳ್ಳಿ ಹಾಕಿ ಅಕಾಡೆಮಿ ಆಶ್ರಯದ ಅಂತರರಾಜ್ಯ ಆಹ್ವಾನಿತ ಹಾಕಿ ಟೂರ್ನಿಯ ಸೆಮಿಫೈನಲ್ ಹಂತ ಪ್ರವೇಶಿಸಿದರು.

ಸೆಟ್ಲ್‌ಮೆಂಟ್‌ನ ಹಾಕಿ ಮೈದಾನದಲ್ಲಿ ಶನಿವಾರ ನಡೆದ ಏಕಪಕ್ಷೀಯವಾದ ಪಂದ್ಯದಲ್ಲಿ ಹನುಮಾನ್‌ ಬ್ಲೆಸಿಂಗ್‌ ತಂಡ ಸ್ಥಳೀಯ ಕಿಶೋರ್‌ ಕುಮಾರ್‌ ಸ್ಪೋರ್ಟ್ಸ್‌ ಕ್ಲಬ್‌ (ಕೆಕೆಎಸ್‌ಸಿ) ತಂಡವನ್ನು ಹತ್ತು ಗೋಲುಗಳಿಂದ ಮಣಿಸಿತು. ಲಖನ್‌ ಗಾಡಗೆ (5ನೇ ನಿಮಿಷ), ಅನಿಲ್‌ ಮೋಟಗಾರ (8,10), ಮನೋಹರ ಕಟ್ಟೀಮನಿ (16), ವಿನೋದ್‌ ಕಟ್ಟೀಮನಿ (17, 28), ಪ್ರವೀಣ ಚಪ್ಪರಮನಿ (22,29), ರವಿ ಗೋಕಾಕ್‌ (45,46) ಹಾಗೂ ವಾಸು ಗೋಕಾಕ್‌ (48) ಗದಗ ತಂಡದ ಪರ ಗೋಲು ಹೊಡೆದರೆ, ಕೆಕೆಎಸ್‌ಸಿ ಒಂದು ಗೋಲು ಕೂಡ ಗಳಿಸಲಾಗದೆ ಸೋಲೊಪ್ಪಿಕೊಂಡಿತು.

ಮತ್ತೊಂದು ಪಂದ್ಯದಲ್ಲಿ ವೈಎಸ್ಎಸ್‌ಸಿ ತಂಡ ಇಸ್ಲಾಂಪುರದ ಸುಭದ್ರ ಡಾಂಗೆ ತಂಡವನ್ನು 5–1 ಗೋಲುಗಳಿಂದ ಸೋಲಿಸಿತು. ವೈಎಸ್‌ಎಸ್‌ಸಿ ಪರ ಬಿಜು ಎರಕಲ್‌ (5 ಮತ್ತು 40ನೇ ನಿಮಿಷ), ರಾಘವೇಂದ್ರ ಕೊರವರ (16,25,52) ಗೋಲು ಗಳಿಸಿದರು. ಸುಭದ್ರ ಡಾಂಗೆ ತಂಡಕ್ಕೆ ಉದಯ್‌ ಪಾಟೀಲ (22) ಸಮಾಧಾನಕರ ಗೋಲು ತಂದುಕೊಟ್ಟರು. ಇಸ್ಲಾಂಪುರ ಎಸ್.ಡಿ.ಪಾಟೀಲ ತಂಡ ಮಹಾರಾಷ್ಟ್ರ ಕ್ರೀಡಾ ಮಂಡಳ ವಿರುದ್ಧ 3–1 ಗೋಲುಗಳಿಂದ ಜಯ ಗಳಿಸಿತು.

ಸಂಜೆ ನಡೆದ ಕೊನೆಯ ಲೀಗ್‌ ಪಂದ್ಯದಲ್ಲಿ ವೈಎಸ್‌ಎಸ್‌ಸಿ ತಂಡ ಎಚ್‌ಬಿಎಸ್‌ಸಿ ವಿರುದ್ಧ (1–0) ಜಯ ಸಾಧಿಸಿತು. ಪಂದ್ಯದ ಏಕೈಕ ಗೋಲು ರಾಘವೇಂದ್ರ ಕೊರವರ ಗಳಿಸಿದರು.

ದಿನದ ಮೊದಲ ಪಂದ್ಯದಲ್ಲಿ ಔರಂಗಾಬಾದ್‌ ಸಾಯ್‌ ತಂಡದ ವಿರುದ್ಧ 1–0 ಗೋಲು ಅಂತರದಲ್ಲಿ ಸೋಲು ಕಂಡ ವಾಸು ಇಲೆವೆನ್‌ ಮಧ್ಯಾಹ್ನ ನಡೆದ ನಿರ್ಣಾಯಕ ಪಂದ್ಯದಲ್ಲಿ ಸಿ.ಕೆ.ಸೋಮಣ್ಣ (23) ಹಾಗೂ ಷಣ್ಮುಖಂ (30) ತಂದುಕೊಟ್ಟ ಗೋಲುಗಳ ನೆರವಿನಿಂದ ಕೊಲ್ಹಾಪುರದ ಚಾವಾ ತಂಡವನ್ನು ಸೋಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.