ADVERTISEMENT

ಸೆಮಿಫೈನಲ್‌ಗೆ ಬಾಲಾಜಿ, ಸನಮ್

ಐಟಿಎಫ್: ಫೈನಲ್‌ಗೆ ವಿಜಯ್ ಸುಂದರ್-ಅರುಣ್ ಪ್ರಕಾಶ್ ಜೋಡಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ದಾವಣಗೆರೆ: ಆಕರ್ಷಕ ರಿಟರ್ನ್‌ಗಳ ಮೂಲಕ ಗಮನ ಸೆಳೆದ ಅಗ್ರಶ್ರೇಯಾಂಕದ ಆಟಗಾರ ಭಾರತದ ಎನ್. ಶ್ರೀರಾಮ್ ಬಾಲಾಜಿ ಮತ್ತು ಎರಡನೇ ಶ್ರೇಯಾಂಕ ಪಡೆದಿರುವ ಸನಮ್ ಸಿಂಗ್ ಜಿಎಂಐಟಿ ಐಟಿಎಫ್ ದಾವಣಗೆರೆ ಓಪನ್ ಟೆನಿಸ್ ಟೂರ್ನಿಯ ಸಿಂಗಲ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಅಂತರರಾಷ್ಟ್ರೀಯ ಟೆನಿಸ್ ಫೆಡರೇಷನ್, ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ, ಜಿಲ್ಲಾ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಗರದ ಹೈಸ್ಕೂಲ್ ಮೈದಾನದ ಸಮೀಪದ ಟೆನಿಸ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಶ್ರೀರಾಮ್ ಬಾಲಾಜಿ 6-3, 6-4ರಲ್ಲಿ ಜೆರೊಯನ್ ಬೆನಾರ್ಡ್ ಅವರನ್ನು ಮಣಿಸಿದರು. ಡೇವಿಸ್ ಕಪ್ ಆಟಗಾರ ಸನಮ್ 6-2, 4-6, 6-4ರಲ್ಲಿ  ಮೋಹಿತ್ ಮಯೂರ್ ವಿರುದ್ಧ ಗೆಲುವು ಸಾಧಿಸಿ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಗಮನ ಸೆಳೆದ ಮೋಹಿತ್ ಆಟ: ಆರಂಭದ ದಿನದಿಂದಲೂ ಸೊಗಸಾದ ಆಟ ಪ್ರದರ್ಶಿಸಿದ್ದ ಮೋಹಿತ್ ಅನುಭವಿ ಸನಮ್ ಎದುರು ಸೋಲು ಕಂಡರಾದರೂ, ಸುಲಭವಾಗಿ ಶರಣಾಗಲಿಲ್ಲ. ಮೊದಲ ಸೆಟ್‌ನಲ್ಲಿ ಬೇಗನೆ ನಿರಾಸೆ ಕಂಡರೂ, ಎರಡನೇ ಸೆಟ್‌ನಲ್ಲಿ 6-4ರಲ್ಲಿ ಗೆಲುವು ಸಾಧಿಸಿ ಸನಮ್‌ಗೆ ತಿರುಗೇಟು ನೀಡಿದರು. ಆದ್ದರಿಂದ ಮೂರನೇ ಹಾಗೂ ನಿರ್ಣಾಯಕ ಸೆಟ್‌ನ ಹೋರಾಟ ಸಾಕಷ್ಟು ಕುತೂಹಲದಿಂದ ಕೂಡಿತ್ತು.

ಎರಡನೇ ಸೆಟ್‌ನಲ್ಲಿ ಎದುರಾದ ಸೋಲಿನಂದ ಸನಮ್ ತಕ್ಷಣವೇ ಎಚ್ಚೆತ್ತುಕೊಂಡು ಕೆಲ ಅತ್ಯುತ್ತಮ ಸರ್ವ್‌ಗಳನ್ನು ಮಾಡಿದರು. ಅಂತಿಮ ಸೆಟ್‌ನ ಅಂತ್ಯದಲ್ಲಿ ಚೆಂಡನ್ನು ರಿಟರ್ನ್ ಮಾಡುವ ಭರದಲ್ಲಿ 24 ವರ್ಷದ ಸನಮ್ ಅಂಕಣದಿಂದ ಹೊರ ಸರಿದು ಸ್ಕೋರ್ ಬೋರ್ಡ್ ಬಳಿ ಜಾರಿ ಬಿದ್ದರು. ಅದರ ಬಳಿಕ ಮುಂದಿನ ಹೊಡೆತದಲ್ಲಿಯೇ ಚಂಡಿಗಡದ ಈ ಆಟಗಾರ ಗೆಲುವಿನ ನಗೆ ಬೀರಿದರು.

ಸಿಂಗಲ್ಸ್ ವಿಭಾಗದ ಇತರ ಎಂಟರ ಘಟ್ಟದ ಪಂದ್ಯಗಳಲ್ಲಿ ಹಾಲೆಂಡ್‌ನ ಕೊಲೀನ್ ವಾನ್ ಬೀಮ್ 6-4, 6-3ರಲ್ಲಿ ಭಾರತದ ಜೀವನ್ ನೆಡುಂಚೆಳಿಯನ್ ಮೇಲೂ, ಜರ್ಮನಿಯ ಟಾರ್ಸ್ಟನ್ ವಿಟೋಸ್ಕಾ 6-3, 6-7, 6-4ರಲ್ಲಿ ರಂಜಿತ್  ಮುರುಗೇಶನ್ ಎದುರೂ ಜಯ ಪಡೆದು ನಾಲ್ಕರ ಘಟ್ಟ ಪ್ರವೇಶಿಸಿದರು.
ಪ್ರಶಸ್ತಿ ಹಂತಕ್ಕೆ ವಿಜಯ್-ಅರುಣ್: ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ನಲ್ಲಿ ವಿಜಯ್ ಸುಂದರ್ ಪ್ರಶಾಂತ್ ಹಾಗೂ ಅರುಣ್ ಪ್ರಕಾಶ್ ರಾಜಗೋಪಾಲನ್ ಜೋಡಿ 7-5, 6-2ರಲ್ಲಿ ಮೋಹಿತ್ -ರಾಮಕುಮಾರ್ ವಿರುದ್ಧ ಜಯ ಪಡೆಯಿತು. ಶ್ರೀರಾಮ ಬಾಲಾಜಿ-ಜೀವನ್ 7-6, 1-6 (10-7)ರಲ್ಲಿ ರಂಜಿತ್-ವಿಟೋಸ್ಕಾ ಎದುರು ಜಯ ಪಡೆೆದು ಫೈನಲ್ ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.