ADVERTISEMENT

ಸೆಮಿಫೈನಲ್‌ಗೆ ಭಾರತ, ದ. ಆಫ್ರಿಕಾ, ಇಂಗ್ಲೆಂಡ್, ಆಸೀಸ್!

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 9:35 IST
Last Updated 14 ಜನವರಿ 2011, 9:35 IST

ದುಬೈ (ಪಿಟಿಐ): ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಬಾರಿಯ ವಿಶ್ವಕಪ್ ಕ್ರಿಕೆಟ್‌ನಲ್ಲಿ ಸೆಮಿಫೈನಲ್ ತಲುಪುತ್ತವೆಂದು ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಪಾಲ್ ಕಾಲಿಂಗ್‌ವುಡ್ ಭವಿಷ್ಯ ನುಡಿದಿದ್ದಾರೆ.

‘ಇಂಗ್ಲೆಂಡ್‌ನ ಈಗಿನ ಪ್ರದರ್ಶನವನ್ನು ಗಮನಿಸಿದಾಗ ಅದಕ್ಕೆ ನಾಲ್ಕರ ಘಟ್ಟದಲ್ಲಿ ಸ್ಥಾನ ಸಿಗುವುದರಲ್ಲಿ ಅನುಮಾನವಿಲ್ಲ. ಭಾರತವಂತೂ ತನ್ನ ನಾಡಿನಲ್ಲಿ ಆಡುವಾಗ ಬ್ಯಾಟಿಂಗ್‌ನಲ್ಲಿ ಭಾರಿ ಬಲವನ್ನು ತೋರುತ್ತದೆ. ಅಷ್ಟೇ ಅಲ್ಲ ಅದರ ವಿರುದ್ಧ ಆಡುವ ಯಾವುದೇ ತಂಡಕ್ಕೂ ಬೌಲಿಂಗ್ ದಾಳಿಯನ್ನು ಎದುರಿಸುವುದು ದೊಡ್ಡ ಸವಾಲಾಗಲಿದೆ. ಆದ್ದರಿಂದ ಆತಿಥೇಯ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತಕ್ಕೂ ಒಂದು ಸ್ಥಾನ ಮೀಸಲು’ ಎಂದು ಐಸಿಸಿ ಕ್ರಿಕೆಟ್ ವರ್ಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಆಸ್ಟ್ರೇಲಿಯಾ ಮೇಲು ನೋಟಕ್ಕೆ ದುರ್ಬಲವಾಗಿ ಕಾಣಿಸಬಹುದು. ಸದ್ಯಕ್ಕೆ ಅದು ಅನೇಕ ಸಮಸ್ಯೆಗಳ ುಳಿಯಲ್ಲಿದೆ. ಆದರೂ ಯಾವುದೇ ಸಂದರ್ಭದಲ್ಲಿ ಕಾಂಗರೂಗಳ ನಾಡಿನ ಪಡೆಯನ್ನು ಕಡೆಗಣಿಸುವುದು ಕಷ್ಟ. ವಿಶ್ವಕಪ್ ಇತಿಹಾಸದಲ್ಲಿ ಈ ತಂಡದವರು ಉತ್ತಮ ದಾಖಲೆಯನ್ನೂ ಹೊಂದಿದ್ದಾರೆ’ ಎಂದ ಅವರು ‘ಸೆಮಿಫೈನಲ್ ತಲುಪುವು ತಂಡಗಳ ಪಟ್ಟಿಯಲ್ಲಿ ಕೊನೆಯದಾಗಿ ದಕ್ಷಿಣ ಆಫ್ರಿಕಾವನ್ನು ಸೇರಿಸಲು ಇಷ್ಟಪಡುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.