ADVERTISEMENT

ಸೆರೆನಾಗೆ ಸಾಟಿಯಾಗದ ಶರಪೋವಾ

ಆಸ್ಟ್ರೇಲಿಯಾ ಟೆನಿಸ್‌: ಸೆಮಿಫೈನಲ್‌ನಲ್ಲಿ ಫೆಡರರ್‌–ಜೊಕೊವಿಚ್‌ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2016, 19:30 IST
Last Updated 26 ಜನವರಿ 2016, 19:30 IST
ಸೆರೆನಾಗೆ ಸಾಟಿಯಾಗದ ಶರಪೋವಾ
ಸೆರೆನಾಗೆ ಸಾಟಿಯಾಗದ ಶರಪೋವಾ   

ಮೆಲ್ಬರ್ನ್‌ (ರಾಯಿಟರ್ಸ್‌/ ಎಎಫ್‌ಪಿ/ ಪಿಟಿಐ):  ಟೆನಿಸ್‌ ಪ್ರಿಯರ ನಿರೀಕ್ಷೆ ಹುಸಿಯಾಗಲಿಲ್ಲ.  ರಷ್ಯಾದ ಬಲಿಷ್ಠ ಆಟಗಾರ್ತಿಯ ಸವಾಲನ್ನು ಸುಲಭವಾಗಿ ಮೆಟ್ಟಿ ನಿಂತ ಅಮೆರಿಕದ ಸೆರೆನಾ ವಿಲಿಯಮ್ಸ್‌ ಈ ಋತುವಿನ ಮೊದಲ ಗ್ರ್ಯಾಂಡ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ನಲ್ಲಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ರಾಡ್‌ ಲೆವರ್‌ ಅರೆನಾದಲ್ಲಿ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪೈಪೋಟಿಯಲ್ಲಿ  ವಿಶ್ವದ ಅಗ್ರಗಣ್ಯ ಆಟಗಾರ್ತಿ ಸೆರೆನಾ      6–4, 6–1ರಲ್ಲಿ ಶರಪೋವಾ ಅವರನ್ನು ಮಣಿಸಿದರು. ಇದರೊಂದಿಗೆ ರಷ್ಯಾದ ಆಟಗಾರ್ತಿ ಎದುರು ಸತತ 18 ಪಂದ್ಯ ಗೆದ್ದ ಶ್ರೇಯ ತಮ್ಮದಾಗಿಸಿಕೊಂಡರು. ವೃತ್ತಿ ಜೀವನದಲ್ಲಿ 21 ಗ್ರ್ಯಾಂಡ್‌ಸ್ಲಾಮ್‌ ಕಿರೀಟ ಮುಡಿಗೇರಿಸಿಕೊಂಡಿರುವ ಸೆರೆನಾ ಇಲ್ಲಿ ಪ್ರಶಸ್ತಿ ಗೆದ್ದು ಸ್ಟೆಫಿ ಗ್ರಾಫ್‌ ಅವರ ದಾಖಲೆಯನ್ನು ಸರಿಗಟ್ಟುವ ವಿಶ್ವಾಸದಲ್ಲಿದ್ದಾರೆ. ಜರ್ಮನಿಯ ಸ್ಟೆಫಿ ಗ್ರಾಫ್‌ ಅವರು ಓಪನ್‌ ಎರಾದಲ್ಲಿ 22 ಗ್ರ್ಯಾಂಡ್‌ಸ್ಲಾಮ್‌ ಪ್ರಶಸ್ತಿ ಗೆದ್ದ ದಾಖಲೆ ಹೊಂದಿದ್ದಾರೆ.

ವಿಶ್ವದ ದಿಗ್ಗಜ ಆಟಗಾರ್ತಿಯರ ಹಣಾಹಣಿಗೆ ವೇದಿಕೆ ಕಲ್ಪಿಸಿದ್ದ ಕ್ವಾರ್ಟರ್‌ ಫೈನಲ್‌ ಹೋರಾಟ ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿತ್ತು. ಹೀಗಾಗಿ ಉಭಯ ಆಟಗಾರ್ತಿಯರೂ ಅಲ್ಪ ಒತ್ತಡದೊಂದಿಗೆ ಕಣಕ್ಕಿಳಿದಿದ್ದರು. ಹಿಂದಿನ ಸೋಲುಗಳಿಗೆ ಮುಯ್ಯಿ ತೀರಿಸಿಕೊಳ್ಳುವ ಗುರಿ ಹೊಂದಿದ್ದ ಶರಪೋವಾ ಮೊದಲ ಸೆಟ್‌ನಲ್ಲಿ ಉತ್ತಮ ಆರಂಭ ಕಂಡರು.

ತಮ್ಮ ಸರ್ವ್‌ ಕಾಪಾಡಿಕೊಂಡ ಅವರು ಮರು ಗೇಮ್‌ನಲ್ಲಿ ಸೆರೆನಾ ಅವರ ಸರ್ವ್‌ ಮುರಿದು 2–0  ಮುನ್ನಡೆ ಸಾಧಿಸಿದರು.
ಮೂರನೇ ಗೇಮ್‌ನಲ್ಲಿ ಸೆರೆನಾ ಆಟ ಕಳೆಗಟ್ಟಿತು. ಅಮೆರಿಕದ ಆಟಗಾರ್ತಿಯ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ  ಶರವೇಗದ ಸರ್ವ್‌ಗಳನ್ನು ರಿಟರ್ನ್‌ ಮಾಡಲು ಶರಪೋವಾ ಪ್ರಯಾಸ ಪಟ್ಟರು.  ತಮ್ಮ ಮಿಂಚಿನ ಆಟದ ಮೂಲಕ ಸತತ ಎರಡು ಗೇಮ್‌ ಗೆದ್ದ ಸೆರೆನಾ 2–2ರಲ್ಲಿ ಸಮಬಲ ಮಾಡಿಕೊಂಡರು. ಇದರಿಂದ ಒತ್ತಡಕ್ಕೆ ಒಳಗಾದ ಶರಪೋವಾ ಐದನೇ ಗೇಮ್‌ ಕೈಚೆಲ್ಲಿ ಹಿನ್ನಡೆ ಅನುಭವಿಸಿದರು.

ಬಳಿಕ  ಅಬ್ಬರಿಸಿದ ರಷ್ಯಾದ ಆಟಗಾರ್ತಿ 3–3ರಲ್ಲಿ ಸಮಬಲ ಮಾಡಿಕೊಂಡರು. ಇದರಿಂದ ಸೆರೆನಾ ವಿಚಲಿತರಾಗಲಿಲ್ಲ. ವಿಶ್ವ ಕ್ರಮಾಂಕಪಟ್ಟಿ ಯಲ್ಲಿ ಅಗ್ರಸ್ಥಾನ ಹೊಂದಿರುವ ಹಿರಿಯ ಆಟಗಾರ್ತಿ (34ವರ್ಷ) ಎಂಬ ಹೆಗ್ಗಳಿಕೆ ಹೊಂದಿರುವ ಅವರು ಬಳಿಕ ಅಂಗಳದಲ್ಲಿ ಮಿಂಚು ಹರಿಸಿದರು. ಸೆರೆನಾ ಅವರ ವೇಗದ ಆಟಕ್ಕೆ ತಲೆದೂಗಿದ ಶರಪೋವಾ 55 ನಿಮಿಷದಲ್ಲಿ ಸೆಟ್‌ ಕೈಚೆಲ್ಲಿದರು.
ಎರಡನೇ ಸೆಟ್‌ನಲ್ಲಿ  ಸೆರೆನಾ ಆಟದ ಸೊಬಗು ಅನಾವರಣಗೊಂಡಿತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟು ಆಡಿದ ಅವರು ಏಕಪಕ್ಷೀಯವಾಗಿ ಸೆಟ್‌ ಜಯಿಸಿ ಸಂಭ್ರಮಿಸಿದರು.

ನಾಲ್ಕರ ಘಟ್ಟದಲ್ಲಿ ಸೆರೆನಾಗೆ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಸವಾಲು ಎದುರಾಗಲಿದೆ. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ  ವಿಶ್ವ ರ್‍ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ರಾಡ್ವಾಂಸ್ಕಾ 6–1, 6–3 ರಲ್ಲಿ ಕಾರ್ಲಾ ಸ್ವಾರೆಜ್‌ ಅವರನ್ನು ಪರಾಭವಗೊಳಿಸಿದರು.

ನೊವಾಕ್‌–ರೋಜರ್‌ ಪೈಪೋಟಿ:  ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ನಿರೀಕ್ಷೆಯಂತೆಯೇ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಉಭಯ ಆಟಗಾರರು ನಾಲ್ಕರ ಘಟ್ಟದಲ್ಲಿ ಮುಖಾಮುಖಿಯಾಗುತ್ತಿದ್ದು ದಿಗ್ಗಜರ ನಡುವಣ ಈ ಹೋರಾಟ ಈಗ ಎಲ್ಲರ ಆಕರ್ಷಣೆ ಎನಿಸಿದೆ.

ಪುರುಷರ ಸಿಂಗಲ್ಸ್‌ ವಿಭಾಗದ ದಿನದ ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ಮೂರನೇ ರ್‍ಯಾಂಕ್‌ನ ಆಟಗಾರ ಫೆಡರರ್‌ 7–6, 6–2, 6–4ರಲ್ಲಿ ಜೆಕ್‌ ಗಣರಾಜ್ಯದ ಥಾಮಸ್‌ ಬರ್ಡಿಕ್‌ ಅವರನ್ನು ಮಣಿಸಿದರು. ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಜೊಕೊವಿಚ್‌ 6–3, 6–2, 6–4ರ ನೇರ ಸೆಟ್‌ಗಳಿಂದ ಜಪಾನ್‌ನ ಕಿ ನಿಶಿಕೋರಿ ವಿರುದ್ಧ ಸುಲಭ ಗೆಲುವು ಗಳಿಸಿದರು.

ದಾಖಲೆ ಸಂಖ್ಯೆಯಲ್ಲಿ ಸೇರಿದ್ದ  ಪ್ರೇಕ್ಷಕರು
ಮೆಲ್ಬರ್ನ್‌ ಪಾರ್ಕ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಎರಡನೇ ಮಂಗಳವಾರ ನಡೆದ ಪಂದ್ಯಗಳನ್ನು ವೀಕ್ಷಿಸಲು ದಾಖಲೆಯ 44, 292 ಮಂದಿ ಪ್ರೇಕ್ಷಕರು ಸೇರಿದ್ದರು.2010ರಲ್ಲಿ ನಡೆದಿದ್ದ ಟೂರ್ನಿಯಲ್ಲಿ 39,857 ಮಂದಿ ಪಂದ್ಯ ವೀಕ್ಷಿಸಿದ್ದು ಇದುವರೆಗಿನ ದಾಖಲೆ.

ಸಾನಿಯಾ–ಪೇಸ್‌ ಮುಖಾಮುಖಿ
ಮಿಶ್ರಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಲಿಯಾಂಡರ್‌ ಪೇಸ್‌ ಮುಖಾಮುಖಿಯಾಗು ತ್ತಿರುವುದು ಈ ಬಾರಿಯ ಟೂರ್ನಿಯ ವಿಶೇಷ. ಮಂಗಳವಾರ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಕ್ರೊವೇಷ್ಯಾದ ಇವಾನ್‌ ದೊಡಿಗ್‌ ಜತೆಗೂಡಿ ಆಡಿದ ಸಾನಿಯಾ 7–5, 6–2ರಲ್ಲಿ ಯರೋಸ್ಲಾವ ಶ್ವೇಡೋವಾ ಮತ್ತು ಐಸಾಮ್‌ ಉಲ್‌ ಹಕ್‌ ಖುರೇಷಿ ಅವರನ್ನು ಪರಾಭವಗೊಳಿಸಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಪೇಸ್‌ ಮತ್ತು ಸ್ವಿಟ್ಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್‌ ಜೋಡಿ 6–1, 6–2ರಲ್ಲಿ ಸ್ಲೊವಾನೆ ಸ್ಟೀಫನ್ಸ್‌ ಮತ್ತು ಜೀನ್‌ ಜೂಲಿಯನ್‌ ರೋಜರ್‌ ಎದುರು ಗೆದ್ದರು.

ಸೆಮಿಗೆ ಸಾನಿಯಾ ಜೋಡಿ:  ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ  ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್‌ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.     ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ವಿಶ್ವದ ಅಗ್ರಗಣ್ಯ ಜೋಡಿಯು 6–2, 4–6,   6–1ರಲ್ಲಿ  ಅನಾ ಲೆನಾ ಗ್ರೊಯೆನ್‌ಫೆಲ್ಡ್‌ ಮತ್ತು ಕೊಕೊ ವಂಡೆವೆಘೆ ಅವರನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.