ADVERTISEMENT

ಸೈಕ್ಲಿಂಗ್‌: ಸ್ಟಿಫಾನಿ ಮಾರ್ಟನ್‌ಗೆ ಚಿನ್ನ

ಪಿಟಿಐ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST
ಸೈಕ್ಲಿಂಗ್‌: ಸ್ಟಿಫಾನಿ ಮಾರ್ಟನ್‌ಗೆ ಚಿನ್ನ
ಸೈಕ್ಲಿಂಗ್‌: ಸ್ಟಿಫಾನಿ ಮಾರ್ಟನ್‌ಗೆ ಚಿನ್ನ   

ಗೋಲ್ಡ್‌ ಕೋಸ್ಟ್‌ (ರಾಯಿಟರ್ಸ್‌): ಅಮೋಘ ಸಾಮರ್ಥ್ಯ ತೋರಿದ ಆಸ್ಟ್ರೇಲಿಯಾದ ಸ್ಟಿಫಾನಿ ಮಾರ್ಟನ್‌ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಆ್ಯನಾ ಮಿಯರ್ಸ್‌ ವೆಲೊಡ್ರೊಮ್‌ ನಲ್ಲಿ ಶುಕ್ರವಾರ ನಡೆದ ಮಹಿಳೆಯರ ವೈಯಕ್ತಿಕ ಸ್ಪ್ರಿಂಟ್‌ ವಿಭಾಗದ ಫೈನಲ್‌ ನಲ್ಲಿ ಸ್ಟಿಫಾನಿ ಅವರು ನ್ಯೂಜಿಲೆಂಡ್‌ನ ನತಾಶಾ ಹ್ಯಾನ್‌ಸೆನ್‌ ಅವರನ್ನು ಮಣಿಸಿದರು.

ಇದರೊಂದಿಗೆ ಮಹಿಳೆಯರ ವೈಯಕ್ತಿಕ ಸ್ಪ್ರಿಂಟ್‌ ವಿಭಾಗದಲ್ಲಿ ಎರಡು ಚಿನ್ನ ಜಯಿಸಿದ ಆಸ್ಟ್ರೇಲಿಯಾದ ಮೊದಲ ಸೈಕ್ಲಿಸ್ಟ್‌ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಅವರು 2014ರ ಗ್ಲಾಸ್ಗೊ ಕಾಮನ್‌ವೆಲ್ತ್‌ ಕೂಟದಲ್ಲೂ ಚಿನ್ನಕ್ಕೆ ಮುತ್ತಿಕ್ಕಿದ್ದರು.

ADVERTISEMENT

ಕಾಮನ್‌ವೆಲ್ತ್‌ ಸೈಕ್ಲಿಂಗ್‌ನಲ್ಲಿ ಆಸ್ಟ್ರೇ ಲಿಯಾ ಗೆದ್ದ 100ನೇ ಪದಕ ಇದಾಗಿದೆ. ಆಸ್ಟ್ರೇಲಿಯಾದ ಕಾರ್ಲಾ ಮೆಕ್ಲೊಚ್‌ ಅವರು ಈ ವಿಭಾಗದ ಕಂಚು ತಮ್ಮದಾಗಿಸಿಕೊಂಡರು.

ಮಹಿಳೆಯರ 3000 ಮೀ. ವೈಯಕ್ತಿಕ ಪರ್ಸ್ಯೂಟ್‌ ಫೈನಲ್‌ ನಲ್ಲಿ ಸ್ಕಾಟ್ಲೆಂಡ್‌ನ ಕ್ಯಾಥಿ ಆರ್ಕಿಬಾಲ್ಡ್‌ ಚಿನ್ನ ಗೆದ್ದರು.

ಕ್ಯಾಥಿ ಅವರು ನಿಗದಿತ ದೂರ ಕ್ರಮಿಸಲು 3 ನಿಮಿಷ 26.088 ಸೆಕೆಂಡು ತೆಗೆದು ಕೊಂಡರು.

ಆಸ್ಟ್ರೇಲಿಯಾದ ರೆಬೆಕ್ಕಾ ವಿಯಾಸಾಕ್‌ ಈ ವಿಭಾಗದ ಬೆಳ್ಳಿಗೆ ಕೊರಳೊಡ್ಡಿದರು. ಅವರು 3 ನಿಮಿಷ 27.548 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಆಸ್ಟ್ರೇಲಿಯಾದವರೇ ಆದ ಅನೆಟ್ ಎಡ್ಮಂಡ್‌ಸನ್‌ (3:30.922ಸೆ.) ಕಂಚಿಗೆ ತೃಪ್ತಿಪಟ್ಟರು.

ಟ್ಯಾನ್‌ಫೀಲ್ಡ್‌ಗೆ ಚಿನ್ನ: ಪುರುಷರ 4000 ಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಇಂಗ್ಲೆಂಡ್‌ನ ಚಾರ್ಲಿ ಟ್ಯಾನ್‌ಫೀಲ್ಡ್‌ ಚಿನ್ನದ ಸಾಧನೆ ಮಾಡಿದರು.

ಚಾರ್ಲಿ ಅವರು 4 ನಿಮಿಷ 15.952 ಸೆಕೆಂಡುಗಳಲ್ಲಿ ಗುರಿ ಸೇರಿದರು. ಸ್ಕಾಟ್ಲೆಂಡ್‌ನ ಜಾನ್‌ ಆರ್ಕಿಬಾಲ್ಡ್‌ (4:16.656ಸೆ.) ಬೆಳ್ಳಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಕಂಚು ನ್ಯೂಜಿಲೆಂಡ್‌ನ ಡ್ಯಾಲನ್‌ ಕೆನ್ನೆಟ್‌ (4:18.373ಸೆ.) ಅವರ ಪಾಲಾಯಿತು.

ಪುರುಷರ ಕೀರಿನ್‌ ಫೈನಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಟ್‌ ಗ್ಲೇಜರ್ ಚಿನ್ನ ಗೆದ್ದರು. ವೇಲ್ಸ್‌ನ ಲೆವಿಸ್‌ ಒಲಿವಾ ಮತ್ತು ನ್ಯೂಜಿಲೆಂಡ್‌ನ ಎಡ್ವರ್ಡ್‌ ಡಾಕಿನ್ಸ್‌ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಭಾರತದ ಸ್ಪರ್ಧಿಗಳಿಗೆ ನಿರಾಸೆ: ಭಾರತದ ಸೈಕ್ಲಿಸ್ಟ್‌ಗಳಿಗೆ ಶುಕ್ರವಾರ ನಿರಾಸೆ ಕಾಡಿತು. ದೆಬೊರಾ ಹೆರಾಲ್ಡ್‌ ಅವರು ಮಹಿಳೆಯರ ಸ್ಪ್ರಿಂಟ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲು ವಿಫಲರಾದರು.

ಪ್ರೀ ಕ್ವಾರ್ಟರ್‌ ಫೈನಲ್ ಹೋರಾಟದಲ್ಲಿ ದೆಬೊರಾ, ಆಸ್ಟ್ರೇಲಿಯಾದ ಕಾರ್ಲಾ ಮೆಕ್ಲೊಚ್‌ ವಿರುದ್ಧ ಸೋತರು.

ಅಲೀನಾ ರೆಜಿ ಅವರು ಆಸ್ಟ್ರೇಲಿಯಾದ ಸ್ಟಿಫಾನಿ ಮಾರ್ಟನ್‌ ಎದುರು ಪರಾಭವಗೊಂಡರು.

ದೆಬೊರಾ, ಅರ್ಹತಾ ಸುತ್ತಿನಲ್ಲಿ 16ನೇ ಸ್ಥಾನ ಗಳಿಸಿ ಪ್ರೀ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಅಲೀನಾ ರೆಜಿ 13ನೇಯವರಾಗಿ ಸ್ಪರ್ಧೆ ಮುಗಿಸಿ 16ರ ಘಟ್ಟ ತಲುಪಿದ್ದರು.

ಪುರುಷರ 4000 ಮೀಟರ್ಸ್‌ ವೈಯಕ್ತಿಕ ಪರ್ಸ್ಯೂಟ್‌ ವಿಭಾಗದಲ್ಲಿ ಕಣದಲ್ಲಿದ್ದ ಮಂಜೀತ್‌ ಸಿಂಗ್, ಅರ್ಹತಾ ಸುತ್ತಿನಲ್ಲೇ ಹೊರಬಿದ್ದರು. ಅವರು 24ನೇ ಸ್ಥಾನ ಗಳಿಸಿದರು.

ಸಾಹಿಲ್‌ ಕುಮಾರ್‌, ರಂಜಿತ್‌ ಸಿಂಗ್‌ ಮತ್ತು ಸಾನುರಾಜ್‌ ಸಾನಂದರಾಜ್‌ ಅವರೂ ಅರ್ಹತಾ ಸುತ್ತಿನಲ್ಲೇ ಸೋತರು.

ಶನಿವಾರ ನಡೆಯುವ ಮಹಿಳೆಯರ 500 ಮೀಟರ್ಸ್‌ ಟೈಮ್‌ ಟ್ರಯಲ್‌ ಸ್ಪರ್ಧೆಯಲ್ಲಿ ದೆಬೊರಾ ಮತ್ತು ಅಲೀನಾ ಅವರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.