ADVERTISEMENT

ಸೈನಾ ನೆಹ್ವಾಲ್‌ಗೆ ಕಾಡಿದ ನಿರಾಸೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ನವದೆಹಲಿ (ಪಿಟಿಐ): ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಫ್ರೆಂಚ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು. ಈ ಮೂಲಕ ಅಭಿಮಾನಿಗಳ ನಿರಾಸೆಗೆ ಕಾರಣರಾದರು.

ಗುರುವಾರ ನಡೆದ ಪಂದ್ಯದಲ್ಲಿ ಸೈನಾ ಪ್ರಭಾವಿ ಪ್ರತಿರೋಧ ತೋರಿದರಾದರೂ, ಪಂದ್ಯ ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. ನಾಲ್ಕನೇ ಶ್ರೇಯಾಂಕದ ಈ ಆಟಗಾರ್ತಿ 18-21, 29-30ರಲ್ಲಿ ಚೀನಾದ ಕ್ಸುರುಯ್ ಲಿ ಎದುರು ಸೋಲು ಅನುಭವಿಸಿದರು.

ಈ ಮೂಲಕ ಸೈನಾ ಸವಾಲು ಟೂರ್ನಿಯಲ್ಲಿ ಅಂತ್ಯಗೊಂಡಿತು. ಈ ಹೋರಾಟ  48 ನಿಮಿಷಗಳ ಕಾಲ ನಡೆಯಿತು. ಕಳೆದ 15 ದಿನಗಳಲ್ಲಿ ಕಂಡ ಎರಡನೇ ಸೋಲು ಇದಾಗಿದೆ. ಒಂದು ವಾರದ ಹಿಂದೆ ನಡೆದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿಯು ನಿರಾಸೆ ಅನುಭವಿಸಿದ್ದರು.

ಮೊದಲ ಗೇಮ್‌ನಲ್ಲಿ ಇಬ್ಬರೂ ಆಟಗಾರ್ತಿಯರು 18-18ರಲ್ಲಿ ಸಮಬಲ ಸಾಧಿಸಿದರು. ಆದರೆ ಕೊನೆಯಲ್ಲಿ ಚುರುಕಿನ ಆಟವಾಡಿ ಲಿ ಗೆಲುವನ್ನು ತಮ್ಮದಾಗಿಸಿಕೊಂಡರು.

 ಎರಡನೇ ಗೇಮ್‌ನ ಆರಂಭದಲ್ಲಿ ಭಾರತದ ಆಟಗಾರ್ತಿ 9-4ರಲ್ಲಿ ಮುನ್ನಡೆಯಲ್ಲಿದ್ದರು. ಆದರೆ ಅತ್ಯುತ್ತಮ ಸ್ಮಾಷ್ ಸಿಡಿಸಿದ ಕ್ಸುರುಯ್ 10-10ರಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ನಂತರ ಸೈನಾ 13-18ರಲ್ಲಿ ಹಿನ್ನೆಡೆ ಅನುಭವಿಸಿದರು. ಮತ್ತೆ ಲಯ ಕಂಡುಕೊಂಡು 29-29ರಲ್ಲಿ ಸಮಬಲ ಸಾಧಿಸಿ ತಿರುಗೇಟು ನೀಡಿದರು.
ಆದರೆ ರೋಚಕ ಘಟ್ಟದಲ್ಲಿ ಅಂತ್ಯ ಕಂಡ ಪಂದ್ಯದಲ್ಲಿ ಅವರು ನಿರಾಸೆ ಅನುಭವಿಸಿದರು. ಕೊನೆಯ ಒಂದು ಪಾಯಿಂಟ್ ಕಲೆ ಹಾಕಿ ಲಿ ಗೆಲುವನ್ನು ತಮ್ಮ ಮಡಿಲಿಗೆ ಹಾಕಿಕೊಂಡರು.

ಪುರುಷರ ಸಿಂಗಲ್ಸ್‌ನಲ್ಲಿ ಅಜಯ್ ಜಯರಾಮನ್, ನವದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಜೋಡಿ ಮಹಿಳೆಯರ ಡಬಲ್ಸ್‌ನಲ್ಲಿಯು ಸೋಲು ಅನುಭವಿಸಿತು.

ಮೊದಲ ಸುತ್ತಿನಲ್ಲಿ ಭಾರತದ ಗುರುಸಾಯಿದತ್ ಅವರನ್ನು ಮಣಿಸಿದ್ದ ಅಜಯ್ ಎರಡನೇ ಸುತ್ತಿನಲ್ಲಿ 19-21, 14-21ರಲ್ಲಿ ಚೀನಾದ ಆರನೇ ಶ್ರೇಯಾಂಕದ ಜಿನ್ ಚೇನ್ ಎದುರು ನಿರಾಸೆ ಅನುಭವಿಸಿದರು. ಈ ಹೋರಾಟ 46 ನಿಮಿಷಗಳಲ್ಲಿ ಅಂತ್ಯ ಕಂಡಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.