ADVERTISEMENT

ಸೈನಾ ಶುಭಾರಂಭ

ಇಂಡೋನೆಷ್ಯಾ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST
ಸೈನಾ ಶುಭಾರಂಭ
ಸೈನಾ ಶುಭಾರಂಭ   

ಜಕಾರ್ತ: ಮೂರು ಬಾರಿಯ ಚಾಂಪಿಯನ್ ಸೈನಾ ನೆಹ್ವಾಲ್ ಮಂಗಳ ವಾರ ಆರಂಭವಾದ  ಇಂಡೋನೆಷ್ಯಾ ಸೂಪರ್ ಸರಣಿ ಪ್ರೀಮಿಯರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ  ಶುಭಾರಂಭ ಮಾಡಿದರು.

ಮಹಿಳೆಯರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ  ಸೈನಾ 17–21, 21–18, 21–12 ರಿಂದ ಥಾಯ್ಲೆಂಡ್‌ನ ರಾಚನಾಕ್ ಇಂಟನಾನ್ ವಿರುದ್ಧ ಜಯಿಸಿದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ  ಕಂಚಿನ ಪದಕ ಗಳಿಸಿದ್ದ  ಸೈನಾ ಮತ್ತು ಥಾಯ್ಲೆಂಡ್‌ನ ಅಗ್ರಕ್ರಮಾಂಕದ ಆಟಗಾರ್ತಿ ರಾಚನಾಕ್ ಅವರು ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ  ಆಟವಾಡಿದರು. 7–5ರಿಂದ ಸೈನಾ ಮುಂದಿದ್ದರು. ಆ ಹಂತದವರೆಗೂ ಸಮಬಲದ ಹೋರಾಟ ನಡೆದಿತ್ತು. ಆದರೆ ನಂತರದ ಹಂತದಲ್ಲಿ  ರಚಾನಕ್ ಚುರುಕಿನ ಆಟವಾಡಿದರು. ನೆಟ್‌ ಬಳಿಯ ಡ್ರಾಪ್‌ಗಳ ಮೂಲಕ ಸೈನಾ ಅವರಿಗೆ ಸವಾಲೊಡ್ಡಿದರು.

ಇದರಿಂದಾಗಿ ಭಾರತದ ಆಟಗಾರ್ತಿ ಹಿನ್ನಡೆ ಅನುಭವಿಸಿದರು.  ಆದರೆ, ಎರಡನೇ ಗೇಮ್‌ನಲ್ಲಿ ಪುಟಿದೆದ್ದ ಸೈನಾ ಅವರು ಮಿಂಚಿನ ವೇಗದ ಸ್ಮ್ಯಾಷ್‌ಗಳ ಮೂಲಕ ಥಾಯ್ಲೆಂಡ್ ಆಟಗಾರ್ತಿಯ ಬೆವರಿಳಿಸಿದರು.  ರೋಚಕ ಹಣಾಹಣಿ ಕಂಡ ಗೇಮ್‌ನಲ್ಲಿ ಸೈನಾ ಅವರ ಛಲದ ಆಟವೇ ಮೇಲುಗೈ ಸಾಧಿಸಿತು.

ADVERTISEMENT

ಮೂರನೇ ಗೇಮ್‌ನಲ್ಲಿ  ರಚಾನಕ್ ತುಸು ಬಳಲಿದಂತೆ ಕಂಡುಬಂದರು. ಗೇಮ್‌ನ ಆರಂಭದಿಂದಲೂ ಸೈನಾ ಪ್ರಾಬಲ್ಯ ಸಾಧಿಸಿದರು.  ಅದರಿಂದಾಗಿ ರಚಾನಕ್ ಕೇವಲ 12 ಅಂಕಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಎರಡನೇ ಸುತ್ತಿನಲ್ಲಿ ಸೈನಾ ಅವರು  ಥಾಯ್ಲೆಂಡ್‌ನ ನಿಶಾನ್ ಜಿಂದಾಪೊಲ್  ಅವರನ್ನು ಎದುರಿಸುವರು.

ಅಶ್ವಿನಿ–ಸುಮೀತ್‌ಗೆ ಸೋಲು: ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮೀತ್ ರೆಡ್ಡಿ ಮತ್ತು ಆಶ್ವಿನಿ ಪೊನ್ನಪ್ಪ ಜೋಡಿಯು ನಿರಾಸೆ ಅನುಭವಿಸಿತು.
ಇಂಡೋನೆಷ್ಯಾದ ಇರ್ಫಾನ್ ಫದಿಲಾ ಮತ್ತು ವೇನಿ ಅಂಗರೈನಿ 21–12,  21–9ರಿಂದ ಸುಮೀತ್ ರೆಡ್ಡಿ– ಅಶ್ವಿನಿ ಜೋಡಿಗೆ ಸೋಲುಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.