ADVERTISEMENT

ಸೋಮ್‌ಗೆ ಸವಾಲು

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 19:00 IST
Last Updated 15 ಸೆಪ್ಟೆಂಬರ್ 2011, 19:00 IST

ಟೋಕಿಯೊ (ಐಎಎನ್‌ಎಸ್/ಪಿಟಿಐ): ಭಾರತದ ಅಗ್ರ ಶ್ರೇಯಾಂಕದ ಹಾಗೂ ವಿಶ್ವದ 65ನೇ ಶ್ರೇಯಾಂಕ ಹೊಂದಿರುವ ಸೋಮದೇವ್ ದೇವವರ್ಮನ್ ಇಲ್ಲಿ ಶುಕ್ರವಾರ ಶುರುವಾಗಲಿರುವ ಜಪಾನ್ ವಿರುದ್ಧದ ಡೇವಿಸ್ ಕಪ್ ಟೂರ್ನಿಯ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಪ್ರಬಲ ಸವಾಲು ಎದುರಿಸಬೇಕಿದೆ.

ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಸೋಮದೇವ್ ಮೊದಲ ಸಿಂಗಲ್ಸ್‌ನಲ್ಲಿ ಜಪಾನ್‌ನ ಯುಯಿಚಿ ಸುಗಿತಾ ಅವರ ಸವಾಲನ್ನು ಎದುರಿಸಲಿದ್ದಾರೆ. ಶುಕ್ರವಾರ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ರೋಹನ್ ಬೋಪಣ್ಣ-ಜಪಾನ್‌ನ ಅಗ್ರ ಶ್ರೇಯಾಂಕದ ಕೈ ನಿಷಿಕೋರಿ ವಿರುದ್ಧ ಆಡಲಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ಮಹೇಶ್ ಭೂಪತಿ ಜೊತೆ ಕಣಕ್ಕಿಳಿಯಬೇಕಿದ್ದ ಲಿಯಾಂಡರ್ ಬದಲು ಯುವ ಆಟಗಾರ ವಿಷ್ಣುವರ್ಧನ ಆಡಲಿದ್ದಾರೆ. ಅಮೆರಿಕ ಓಪನ್ ಟೆನಿಸ್ ಟೂರ್ನಿಯ ವೇಳೆ ಪೇಸ್ ಗಾಯಗೊಂಡಿದ್ದಾರೆ.

`ಭೂಪತಿ ಜೊತೆಗೆ ವಿಷ್ಣುವರ್ಧನ್ ಡಬಲ್ಸ್ ವಿಭಾಗದಲ್ಲಿ ಆಡಲಿದ್ದಾರೆ. ಅತ್ಯುತ್ತಮವಾಗಿ ಆಡುವ ಕೌಶಲವನ್ನು ಆವರು ಹೊಂದಿದ್ದಾರೆ~ ಎಂದು ಆಟವಾಡದ ನಾಯಕ ಎಸ್.ಪಿ. ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಆರಂಭದ ದಿನ ಭಾರತದ ಸ್ಪರ್ಧಿಗಳು ಹೇಗೆ ಪ್ರದರ್ಶನ ನೀಡುತ್ತಾರೆ ಎನ್ನುವ ಕುತೂಹಲವಿದೆ. ಆದರೆ ಜಪಾನ್‌ನ ಸ್ಪರ್ಧಿಗಳು ಪ್ರಭಾವಿ ಎನ್ನುವುದನ್ನು ಮರೆಯುವಂತಿಲ್ಲ~ ಎಂದು ಸಿಂಗ್ ಹೇಳಿದ್ದಾರೆ.

ವೇಳಾ ಪಟ್ಟಿ ಇಂತಿದೆ:
ಶುಕ್ರವಾರ: ಮೊದಲ ಸಿಂಗಲ್ಸ್: ಸೋಮದೇವ್ ದೇವವರ್ಮನ್-ಯುಯಿಚಿ ಸುಗಿತಾ, ಎರಡನೇ ಸಿಂಗಲ್ಸ್: ರೋಹನ್ ಬೋಪಣ್ಣ- ಕೈ ನಿಷಿಕೋರಿ.

ಶನಿವಾರ: ಡಬಲ್ಸ್ ವಿಭಾಗ: ಮಹೇಶ್ ಭೂಪತಿ-ವಿಷ್ಣು ವರ್ಧನ ಹಾಗೂ ನಿಷಿಕೋರಿ-ಗೊ ಸೋಯಿದಾ.
ಭಾನುವಾರ: ರಿವರ್ಸ್ ಸಿಂಗಲ್ಸ್‌ನಲ್ಲಿ ನಿಷಿಕೋರಿ-ಸೋಮದೇವ್ ದೇವವರ್ಮನ್ ಹಾಗೂ ಯುಯಿಚಿ ಸುಗಿತಾ. ಐದನೇ ಸುತ್ತು: ರೋಹನ್ ಬೋಪಣ್ಣ-ಸುಗಿತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.