ADVERTISEMENT

ಹಸ್ಸಿ ಅನುಪಸ್ಥಿತಿ ಕಾಡದು: ರಿಕಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:40 IST
Last Updated 26 ಫೆಬ್ರುವರಿ 2011, 18:40 IST

 ಮೆಲ್ಬರ್ನ್ (ಪಿಟಿಐ): ಗಾಯಗೊಂಡಿರುವ ಮೈಕ್ ಹಸ್ಸಿ ಅವರನ್ನು ತಂಡ ದಿಂದ ಕೈಬಿಟ್ಟಿರುವುದು ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಪ್ರದರ್ಶ ನದ ಮೇಲೆ ಪರಿಣಾಮ ಬೀರದೆಂದು ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

ಹಸ್ಸಿ ಅನುಪಸ್ಥಿತಿಯು ಕಾಂಗರೂಗಳ ನಾಡಿನ ಪಡೆಯನ್ನು ಕಾಡುತ್ತದೆನ್ನುವ ಮಾಧ್ಯಮಗಳ ಅಭಿಪ್ರಾಯವನ್ನು ತಳ್ಳಿಹಾಕಿದ ಅವರು ‘ಇದೊಂದು ಅನಿವಾರ್ಯ ಪರಿಸ್ಥಿತಿ. ಆಟಗಾರನೊಬ್ಬ ಗಾಯದ ಸಮಸ್ಯೆ ಎದುರಿಸಿದಾಗ ಬದಲಾವಣೆ ಅಗತ್ಯವಾಗುತ್ತದೆ. ಮೈಕ್ ವಿಷಯದಲ್ಲಿಯೂ ಇದೇ ಮಾತು ಅನ್ವಯವಾಗುತ್ತದೆ’ ಎಂದು ಇಲ್ಲಿನ ಆಂಗ್ಲ ದಿನಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಜಿಂಬಾಬ್ವೆ ವಿರುದ್ಧ 91 ರನ್‌ಗಳ ವಿಜಯದೊಂದಿಗೆ ವಿಶ್ವಕಪ್ ಕಾರ್ಯಾಚರಣೆ ಆರಂಭಿಸಿರುವ ಪಾಂಟಿಂಗ್ ಪಡೆಯು ಸತತ ನಾಲ್ಕನೇ ಬಾರಿ ಚಾಂಪಿಯನ್ ಆಗುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ಸಾಧನೆಯ ಮಾರ್ಗದಲ್ಲಿ ಹಸ್ಸಿ ನೆರವು ತಂಡಕ್ಕೆ ಸಿಗುವುದಿಲ್ಲ ಎನ್ನುವುದು ದೊಡ್ಡ ಸಮಸ್ಯೆಯಾಗಿ ಕಾಡದೆಂದು ‘ಪಂಟರ್’ ಖ್ಯಾತಿಯ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ.

ಹಸ್ಸಿ ಅವರಂಥ ಬಲಗೈ ಮಂದಗತಿಯ ಬೌಲರ್ ತಂಡದಲ್ಲಿ ಇಲ್ಲದಿರುವುದು ಆಸ್ಟ್ರೇಲಿಯಾ ಸಂಕಷ್ಟವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಬೌಲಿಂಗ್‌ನಲ್ಲಿ ಮಾತ್ರವಲ್ಲ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಬಲ ನೀಡುವುದಕ್ಕೂ ಕೊರತೆ ಕಾಡುವ ಅಪಾಯವಿದೆ ಎಂದು ಇಲ್ಲಿನ ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ.

ಆದರೆ ಈ ಅಭಿಪ್ರಾಯಗಳನ್ನು ಅಲ್ಲಗಳೆದಿರುವ ಆಸೀಸ್ ತಂಡದ ನಾಯಕ ‘ತಂಡದಲ್ಲಿ ಸಮತೋಲನ ಇದೆ. ಹಸ್ಸಿ ಸ್ಥಾನವನ್ನು ತುಂಬುವುದಕ್ಕೆ ಕೊರತೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.