ADVERTISEMENT

ಹಾಕಿ: ಎಸ್‌ಎಐ ತಂಡಕ್ಕೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಬೆಂಗಳೂರು: ದರ್ಶನ್ ಅವರು ತಂದಿತ್ತ ಎರಡು ಗೋಲುಗಳ ನೆರವಿನಿಂದ ಎಸ್‌ಎಐ ತಂಡದವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ಡಿ.ಎಸ್. ಮೂರ್ತಿ ಮತ್ತು ವಿ. ಕರುಣಾಕರನ್ ಸ್ಮಾರಕ ಹಾಕಿ ಟೂರ್ನಿಯ ಪಂದ್ಯದಲ್ಲಿ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಎಸ್‌ಎಐ 3-1 ಗೋಲುಗಳಿಂದ ಪೋಸ್ಟಲ್ ತಂಡವನ್ನು ಮಣಿಸಿತು. ರಫೀಕ್ ಅವರು 7ನೇ ನಿಮಿಷದಲ್ಲಿ ಗೋಲು ಗಳಿಸಿ ಎಸ್‌ಎಐ ತಂಡದ ಗೋಲಿನ ಖಾತೆ ತೆರೆದರು.

ಬಳಿಕ ದರ್ಶನ್ 22 ಮತ್ತು 38ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ ತಂಡದ ಮುನ್ನಡೆಯನ್ನು 3-0 ಗೆ ಹೆಚ್ಚಿಸಿದರು. ಪೋಸ್ಟಲ್ ತಂಡದ ಏಕೈಕ ಗೋಲನ್ನು ಪ್ರಕಾಶ್ ಅವರು ಪಂದ್ಯದ 56ನೇ ನಿಮಿಷದಲ್ಲಿ ತಂದಿತ್ತರು.

ಪಂದ್ಯದ ಮೊದಲ ನಿಮಿಷದಿಂದಲೇ ಎದುರಾಳಿ ಗೋಲುಪೆಟ್ಟಿಗೆ ಗುರಿಯಾಗಿಸಿ ಆಕ್ರಮಣ ನಡೆಸಿದ ಎಸ್‌ಎಐ ತಂಡದವರು ಕೊನೆಯವರೆಗೂ ಪೂರ್ಣ ಮೇಲುಗೈ ಸಾಧಿಸಿದರು. ಪೋಸ್ಟಲ್ ತಂಡ ಹೊಂದಾಣಿಕೆಯ ಪ್ರದರ್ಶನ ನೀಡಲು ವಿಫಲವಾಯಿತು. ಗೋಲು ಗಳಿಸಲು ನಡೆಸಿದ ಯಾವುದೇ ಪ್ರಯತ್ನಕ್ಕೆ ತಕ್ಕ ಫಲ ಲಭಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.