ADVERTISEMENT

ಹಾಕಿ: ಭಾರತ ಮಹಿಳಾ ತಂಡಕ್ಕೆ ಸೋಲು; ಜಪಾನ್‌ಗೆ ಕಂಚು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ಓರ್ಡೋಸ್, ಚೀನಾ (ಐಎಎನ್‌ಎಸ್): ಉತ್ತಮ ಪ್ರದರ್ಶನ ನೀಡಿದ ದಕ್ಷಿಣ ಕೊರಿಯಾ ಮಹಿಳಾ ಹಾಕಿ ತಂಡದವರು ಇಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟೂರ್ನಿ  ಪ್ರಶಸ್ತಿಯನ್ನು ಗೆದ್ದುಕೊಂಡರು.

ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ 5-3ಗೋಲುಗಳಿಂದ ಆತಿಥೇಯ ಚೀನಾ ತಂಡವನ್ನು ಮಣಿಸಿ ಚಾಂಪಿಯನ್ ಆಯಿತು. ಆರಂಭದಲ್ಲಿ 2-0ರಲ್ಲಿ ಮುನ್ನಡೆಯಲ್ಲಿದ್ದ ಚೀನಾಕ್ಕೆ ಕೊರಿಯಾ ನಂತರ ತಿರುಗೇಟು ನೀಡಿತು.

ಭಾರತ ತಂಡಕ್ಕೆ ಸೋಲು: ಹೆಚ್ಚುವರಿ ಸಮಯದಲ್ಲಿ ಗಳಿಸಿದ ವಿವಾದಾತ್ಮಕ `ಗೋಲ್ಡನ್~ ಗೋಲಿನ ನೆರವಿನೊಂದಿಗೆ ಜಪಾನ್ ಮಹಿಳಾ ಹಾಕಿ ತಂಡದವರು 3-2ಗೋಲುಗಳಿಂದ ಭಾರತ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು.

ಭಾರತ ಪಂದ್ಯದ ಮೊದಲಾರ್ಧದಲ್ಲಿ 2-0ಗೋಲುಗಳ ಮುನ್ನಡೆ ಸಾಧಿಸಿ ಆರಂಭಿಕ ಪ್ರಭುತ್ವ ಮೆರೆಯಿತು. ಆದರೆ ದ್ವಿತೀಯಾರ್ಧದಲ್ಲಿ ಜಪಾನ್ ಮರು ಹೋರಾಟ ನಡೆಸಿತು.

ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟಿದ್ದು ವಂದನಾ ಕತಾರಯ್. ಈ ಆಟಗಾರ್ತಿ 7ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ನಂತರ ರಾಣಿ ರಾಂಪಾಲ್ ಸಿಕ್ಕ ಅವಕಾಶವನ್ನು ಬಳಸಿಕೊಂಡು 28ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ತಂದಿತ್ತರು.

ಜಪಾನ್‌ನ ರಿಕಾ ಕೊಮಜವಾ ಪೆನಾಲ್ಟಿ ಕಾರ್ನರ್ ಮೂಲಕ 52ನೇ ನಿಮಿಷದಲ್ಲಿ ಗೋಲು ಗಳಿಸಿದರು. ಕೈವೊರಿ ಫೂಜಿಯಾ 63ನೇ ನಿಮಿಷದಲ್ಲಿ ಮತ್ತೊಂದು ಗೋಲು ಕಲೆ ಹಾಕಿ ಪಂದ್ಯಕ್ಕೆ ರೋಚಕ ತಿರುವು ನೀಡಿದರಲ್ಲದೇ, ಸೋಲಿನ ಡವಡೆಯಿಂದ ತಂಡವನ್ನು ಪಾರು ಮಾಡಿದರು.

ನಿಗದಿತ ವೇಳೆಗೆ ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಫಲಿತಾಂಶ ನಿರ್ಧರಿಸಲು ಹೆಚ್ಚುವರಿ ಸಮಯ ನಿಗದಿಪಡಿಸಲಾಯಿತು. ಈ ವೇಳೆ ಜಪಾನ್‌ನ ಮುರುಕಾಮಿ 78ನೇ ನಿಮಿಷದಲ್ಲಿ ಗಳಿಸಿದ ವಿವಾದಾತ್ಮಕ `ಗೋಲ್ಡನ್~ ಗೋಲು ಜಪಾನ್ ತಂಡಕ್ಕೆ ವರವಾಗಿ ಪರಿಣಮಿಸಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.