ADVERTISEMENT

`ಹಿಂದಿನ ನಿರಾಸೆ ಮರುಕಳಿಸದು'

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 19:59 IST
Last Updated 3 ಏಪ್ರಿಲ್ 2013, 19:59 IST
ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಬುಧವಾರ ಇಂಡೊನೇಷ್ಯಾ ಆಟಗಾರರು ಅಭ್ಯಾಸ ನಡೆಸಿದ ಕ್ಷಣ -ಪ್ರಜಾವಾಣಿ ಚಿತ್ರ
ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಬುಧವಾರ ಇಂಡೊನೇಷ್ಯಾ ಆಟಗಾರರು ಅಭ್ಯಾಸ ನಡೆಸಿದ ಕ್ಷಣ -ಪ್ರಜಾವಾಣಿ ಚಿತ್ರ   

ಬೆಂಗಳೂರು: `ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಅನುಭವಿ ಆಟಗಾರರ ಬಲದೊಂದಿಗೆ ಭಾರತ ಕಣಕ್ಕಿಳಿದಿರಲಿಲ್ಲ. ಆದರೆ, ಈಗ ಎಲ್ಲಾ ಆಟಗಾರರು ತಂಡಕ್ಕೆ ಮರಳಿದ್ದಾರೆ. ಆದ್ದರಿಂದ ಹಿಂದೆ ಕಾಡಿದ ನಿರಾಸೆ ಮರುಕಳಿಸುವುದಿಲ್ಲ' ಎಂದು ಭಾರತ ತಂಡದ ಆಟವಾಡದ ನಾಯಕ ಶಿವಪ್ರಕಾಶ್ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಏಷ್ಯಾ ಓಸೀನಿಯಾ ಗುಂಪು-1ರ ಕೊರಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 1-4ರಲ್ಲಿ ಸೋಲು ಕಂಡಿತ್ತು. ಡೇವಿಸ್ ಕಪ್‌ನಲ್ಲಿ ತವರಿನ ನೆಲದಲ್ಲಿ ಈ ರೀತಿಯ ಹೀನಾಯ ಸೋಲು ಏಳು ವರ್ಷಗಳ ಹಿಂದೆ ಎದುರಾಗಿತ್ತು. 2005ರಲ್ಲಿ ಭಾರತ ತಂಡ 1-3ರಲ್ಲಿ ಸ್ವೀಡನ್ ಎದುರು ನಿರಾಸೆ ಅನುಭವಿಸಿತ್ತು.

`ಹಿಂದೆ ಅನುಭವಿಸಿದ ನಿರಾಸೆಯನ್ನು ಈಗ ನೆನಪು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಇನ್ನೊಂದು ಡೇವಿಸ್ ಕಪ್ ಎದುರಿಗಿದೆ. ಅದರ ಬಗ್ಗೆಯಷ್ಟೇ ನಮ್ಮ ಯೋಚನೆ' ಎಂದೂ ಅವರು ನುಡಿದರು.

ಶುಕ್ರವಾರ (ನಾಳೆ) ಇಂಡೊನೇಷ್ಯಾ ವಿರುದ್ಧದ ಡೇವಿಸ್ ಕಪ್ ಪಂದ್ಯ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅವರು ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದರು.

`ಸೋಮದೇವ್ ದೇವವರ್ಮನ್, ಯೂಕಿ ಭಾಂಬ್ರಿ, ಸನಮ್ ಸಿಂಗ್ ಎಲ್ಲರೂ ಯುವ ಆಟಗಾರರೇ ಇದ್ದಾರೆ. ರಾಮ್ ಕುಮಾರ್ ಮತ್ತು ಅರ್ಜುನ್ ಖಾಡೆ ಕೂಡಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದು ಭಾರತದಲ್ಲಿ ಟೆನಿಸ್ ಇನ್ನಷ್ಟು ಎತ್ತರಕ್ಕೇರಲು ಸಹಾಯವಾಗುತ್ತದೆ. ವಿಶ್ವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಇಂಡೊನೇಷ್ಯಾದ ಕ್ರಿಸ್ಪೋಫರ್ ರುಂಗ್ಟಕ್ 251ನೇ ಸ್ಥಾನದಲ್ಲಿದ್ದಾರೆ. ಈ ಆಟಗಾರನನ್ನು ಸನಮ್ ಹಾಗೂ ಯೂಕಿ ಇಬ್ಬರೂ ಹಿಂದಿನ ಟೂರ್ನಿಗಳಲ್ಲಿ ಸೋಲಿಸಿದ್ದಾರೆ. ಇದೊಂದು ಸಕಾರಾತ್ಮಕ ಅಂಶ' ಎಂದು ಮಿಶ್ರಾ ಒತ್ತಿ ಹೇಳಿದರು.

ಕಳೆದ ವರ್ಷ ಗಾಯದ ಕಾರಣದಿಂದ ಬಹುತೇಕ ಟೂರ್ನಿಗಳಲ್ಲಿ ಪಾಲ್ಗೊಳ್ಳದ ಸೋಮದೇವ್ ಈಗ ಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಈ ಆಟಗಾರನ ಬಗ್ಗೆಯೂ ಮಿಶ್ರಾ ಸಂತಸ ವ್ಯಕ್ತಪಡಿಸಿದ್ದಾರೆ.

`ಸೋಮ್ ಈ ವರ್ಷದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂಡೊನೇಷ್ಯಾದ ವಿರುದ್ಧವೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸವಿದೆ' ಎಂದು ಅವರು ನುಡಿದರು.

ವೈಯಕ್ತಿಕ ಕೆಲಸದ ನಿಮಿತ್ತ ಲಿಯಾಂಡರ್ ಪೇಸ್ ಮುಂಬೈಗೆ ತೆರಳಿದ್ದಾರೆ. ಅವರು ಗುರುವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಅಚ್ಚರಿಯ ಫಲಿತಾಂಶದ ವಿಶ್ವಾಸ:
`ಭಾರತದ ಪ್ರಮುಖ ಆಟಗಾರರು ತಂಡಕ್ಕೆ ವಾಪಸ್ಸಾಗಿದ್ದಾರೆ. ಆದ್ದರಿಂದ ಆ ತಂಡ ಬಲಿಷ್ಠವಾಗಿದೆ. ಆದರೂ ನಾವು ಅಚ್ಚರಿಯ ಫಲಿತಾಂಶ ನೀಡಿ ಭಾರತಕ್ಕೆ ಆಘಾತ ನೀಡುತ್ತೇವೆ' ಎಂದು ಇಂಡೊನೇಷ್ಯಾದ ಆಟವಾಡದ ನಾಯಕ ಹೆಂಡ್ರಿ ಸುಸಿಲೊ ಪ್ರಮೊನೊ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳಲ್ಲಿ ಯಾರನ್ನು ಆಡಿಸಬೇಕು ಎನ್ನುವುದರ ಬಗ್ಗೆ ಇಂಡೊನೇಷ್ಯಾ ಇನ್ನೂ ತೀರ್ಮಾನಿಸಿಲ್ಲ. ಪಂದ್ಯ ಆರಂಭವಾಗಲು ಒಂದು ಗಂಟೆ ಇರುವಾಗ ತಂಡವನ್ನು ಅಂತಿಮಗೊಳಿಸುವ ಲೆಕ್ಕಾಚಾರ ಹೊಂದಿದೆ.

`ನನ್ನ ತಂಡ ನನ್ನಿಂದ ಸಾಕಷ್ಟು ನಿರೀಕ್ಷೆ ಹೊಂದಿದೆ. ಈ ಬಗ್ಗೆ ನಾನೇನೂ ಹೇಳಲಾರೆ. ಆಡಿ ತೋರಿಸುವೆ' ಎಂದು ಇಂಡೊನೇಷ್ಯಾದ ಅಗ್ರ ರರ‍್ಯಾಂಕಿಂಗ್ ನ ಆಟಗಾರ ಕ್ರಿಸ್ಟೋಫರ್ ಹೇಳಿದರು.

`ಭಾರತದಲ್ಲಿ ಹೋದ ವರ್ಷ ನಾಲ್ಕು ಟೂರ್ನಿಗಳಲ್ಲಿ ಆಡಿದ್ದೇನೆ. ನಮ್ಮ ದೇಶದಲ್ಲಿ ಬ್ಯಾಡ್ಮಿಂಟನ್ ಹೆಚ್ಚು ಖ್ಯಾತಿ. ಆದರೆ, ನನ್ನ ಕುಟುಂಬದವರು ಟೆನಿಸ್ ಆಡುತ್ತಿದ್ದ ಕಾರಣ ಈ ಕ್ರೀಡೆಯತ್ತ ಮುಖ ಮಾಡಿದೆ. ನನ್ನ ತಾಯಿ ಕೂಡಾ ಟೆನಿಸ್ ಆಟಗಾರ್ತಿ. ನಮ್ಮ ಕುಟುಂಬದವರಿಗೆ ಕ್ರೀಡೆಯ ಬಗ್ಗೆ ತುಂಬಾ ಪ್ರೀತಿಯಿದೆ' ಎಂದು ಅವರು  ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.