ADVERTISEMENT

ಹಿಂದೆ ಸರಿದ ವೋಜ್ನಿಯಾಕಿ

ಏಜೆನ್ಸೀಸ್
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST
ಡೆನ್ಮಾರ್ಕ್‌ನ ಕರೊಲಿನಾ ವೋಜ್ನಿಯಾಕಿ ಆಟದ ಶೈಲಿ –ರಾಯಿಟರ್ಸ್ ಚಿತ್ರ
ಡೆನ್ಮಾರ್ಕ್‌ನ ಕರೊಲಿನಾ ವೋಜ್ನಿಯಾಕಿ ಆಟದ ಶೈಲಿ –ರಾಯಿಟರ್ಸ್ ಚಿತ್ರ   

ಹಾಂಕಾಂಗ್‌: ಹಾಲಿ ಚಾಂಪಿಯನ್ ಕರೊಲಿನಾ ವೋಜ್ನಿಯಾಕಿ ಮತ್ತು ವಿಶ್ವ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಎಲಿನಾ ಸ್ವಿಟೋಲಿನಾ ಹಾಂಕಾಂಗ್ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಗಾಯಗೊಂಡು ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಮೂರನೇ ಶ್ರೇಯಾಂಕದ ವೋಜ್ನಿಯಾಕಿ ಎರಡನೇ ಸುತ್ತಿನ ಪಂದ್ಯದಲ್ಲಿ ಲಿಜೆಟ್ಟೆ ಕಬೆರಾ ವಿರುದ್ಧದ ಪಂದ್ಯ ಆರಂಭಕ್ಕೂ ಮೊದಲೇ ಹಿಂದೆ ಸರಿಯುವುದಾಗಿ ಘೋಷಿಸಿದರು.

‘ಅಭ್ಯಾಸದ ವೇಳೆ ಗಾಯಗೊಂಡಿದ್ದೆ. ಈ ಪಂದ್ಯಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದೆ. ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಬೇಕಾಯಿತು. ಇಲ್ಲಿ ಪಂದ್ಯ ನೋಡಲು ಬಂದಿರುವ ಎಲ್ಲರಿಗೂ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ವೋಜ್ನಿಯಾಕಿ ಹೇಳಿದರು.

ADVERTISEMENT

ಉಕ್ರೇನ್‌ನ ಆಟಗಾರ್ತಿ ಸ್ವಿಟೋಲಿನಾ ಕೂಡ ಆಡುವ ಮೊದಲೇ ನಿಕೋಲ್‌ ಗಿಬ್ಬಸ್ ವಿರುದ್ಧದ ಪಂದ್ಯದಿಂದ ಹಿಂದೆ ಸರಿದರು. ‘ಬೀಜಿಂಗ್‌ನಲ್ಲಿ ನಾನು ಗಾಯಗೊಂಡಿದ್ದೆ. ದೀರ್ಘವಾದ ರ‍್ಯಾಲಿಗಳನ್ನು ಆಡುವಾಗ ಕಾಲಿನಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ.

ವೀನಸ್‌ ವಿಲಿಯಮ್ಸ್ ಕೂಡ ಸೋಲು ಕಂಡಿದ್ದರಿಂದ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಪ್ರಮುಖ ಆಟಗಾರ್ತಿಯರು ಹೊರಬಿದ್ದಿದ್ದಾರೆ.

ಅಮೆರಿಕದ ಜೆನ್ನಿಫರ್ ಬಾರ್ಡಿ 6–3, 6–4ರಲ್ಲಿ ಚೀನಾದ ಎಂಟನೇ ಶ್ರೇಯಾಂಕದ ಆಟಗಾರ್ತಿ ಜಾಂಗ್ ಶುಯಿ ಎದುರು ಗೆದ್ದಿದ್ದಾರೆ. ಕ್ವಾರ್ಟರ್‌ನಲ್ಲಿ ಬಾರ್ಡಿ ಅವರು ಗಿಬ್ಬಸ್ ವಿರುದ್ಧ ಆಡಲಿದ್ದಾರೆ.

ಟೂರ್ನಿಯಲ್ಲಿ ಸವಾಲು ಕಾಯ್ದುಕೊಂಡಿರುವ ಏಕೈಕ ಚೀನಾದ ಆಟಗಾರ್ತಿ ವಾಂಗ್‌ ಕ್ಸಿಯಾಂಗ್ 6–4, 6–4ರಲ್ಲಿ ಲೂಕ್ಸಿನಾ ಕುಮ್‌ಕುಮ್ ಮೇಲೆ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.