ADVERTISEMENT

ಹೈಕೋರ್ಟ್‌ ಮೆಟ್ಟಿಲೇರಲು ಶ್ರೀಶಾಂತ್‌ ನಿರ್ಧಾರ

ಸ್ಪಾಟ್‌ ಫಿಕ್ಸಿಂಗ್‌: ನಿಷೇಧ ಶಿಕ್ಷೆಯ ಹಿಂದೆ ಶ್ರೀನಿವಾಸನ್‌ ಕೈವಾಡ; ರೆಬೆಕ್ಕಾ ಆರೋಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಕೊಚ್ಚಿ (ಐಎಎನ್‌ಎಸ್‌): ಐಪಿಎಲ್ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದಲ್ಲಿ ತಪ್ಪಿತಸ್ಥರಾಗಿ ಬಿಸಿಸಿಐ ಶಿಸ್ತು ಸಮಿತಿಯಿಂದ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಕೇರಳದ ವೇಗಿ ಎಸ್‌. ಶ್ರೀಶಾಂತ್‌ ಹೈಕೋರ್ಟ್‌ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.

ಶ್ರೀಶಾಂತ್‌ ವಕೀಲರಾದ ಜಾನ್‌ ರೆಬೆಕ್ಕಾ ಭಾನುವಾರ ವಾಹಿನಿಯೊಂದರ ಜೊತೆ ಮಾತನಾಡಿದ್ದು, ಈ ವಿಷಯ ತಿಳಿಸಿದ್ದಾರೆ. ಜೊತೆಗೆ ‘ಶ್ರೀಶಾಂತ್‌ಗೆ ಆಜೀವ ನಿಷೇಧ ಶಿಕ್ಷೆ ಹೇರಿರುವ ಹಿಂದೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಪಿತೂರಿ ಅಡಗಿದೆ’ ಎಂದು ಆರೋಪಿಸಿದ್ದಾರೆ.

‘ಬಿಸಿಸಿಐ ಶಿಸ್ತು ಸಮಿತಿ ಏಕವ್ಯಕ್ತಿ ತನಿಖಾ ಆಯೋಗ ನೀಡಿರುವ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಂಡಿದೆ. ಆಯೋಗ ದೆಹಲಿ ಪೊಲೀಸರು ನೀಡಿರುವ ಕೆಲ ಕಾಗದಗಳನ್ನಷ್ಟೇ ಪರಿಶೀಲಿಸಿ ಅವಸರದ ನಿರ್ಧಾರ ತೆಗೆದುಕೊಂಡಿದೆ. ಈ ಪ್ರಕರಣದ ಕುರಿತು ನ್ಯಾಯಾಲಯ ತೀರ್ಪು ನೀಡುವ ತನಕವಾದರೂ ಬಿಸಿಸಿಐ ಸಮಾಧಾನದಿಂದ ಕಾಯಬೇಕಿತ್ತು’ ಎಂದು ಅವರು ಹೇಳಿದ್ದಾರೆ.

ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಹಾಗೂ ಭದ್ರತಾ ಘಟಕದ ಮುಖ್ಯಸ್ಥ ರವಿ ಸವಾನಿ ನೇತೃತ್ವದ ಆಯೋಗ ಶಿಸ್ತು ಸಮಿತಿಗೆ ವರದಿ ಸಲ್ಲಿಸಿತ್ತು. ಬಿಸಿಸಿಐ ಉಪಾಧ್ಯಕ್ಷರಾದ ಅರುಣ್‌ ಜೇಟ್ಲಿ  ಮತ್ತು ನಿರಂಜನ್ ಷಾ ಅವರು ವರದಿ ಅಧ್ಯಯನ ನಡೆಸಿ ಶುಕ್ರವಾರ ನಡೆದ ಸಭೆಯಲ್ಲಿ ಆಜೀವ ನಿಷೇಧ ಹೇರುವ ನಿರ್ಧಾರ ಕೈಗೊಂಡಿದ್ದರು.

ರಾಜಸ್ತಾನ ರಾಯಲ್ಸ್‌ ತಂಡದ ಶ್ರೀಶಾಂತ್‌ ಮತ್ತು ಅಂಕಿತ್‌ ಚವಾಣ್‌ಗೆ ಈ ಶಿಕ್ಷೆ ಹೇರಲಾಗಿದೆ. ಅಜಿತ್‌ ಚಾಂಡಿಲ ಬಗ್ಗೆ ವಿಚಾರಣೆ ನಡೆಯುತ್ತಿದೆ. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣ ಬಯಲಾದಾಗ ಮೇ 16ರಂದು ದೆಹಲಿ ಪೋಲಿಸರು ಈ ಮೂವರೂ ಆಟಗಾರರನ್ನು ಬಂಧಿಸಿದ್ದರು. ಶ್ರೀಶಾಂತ್‌ ಒಂದು ತಿಂಗಳು ತಿಹಾರ್ ಜೈಲಿನಲ್ಲಿದ್ದರು.

ಅನಿರೀಕ್ಷಿತವಾಗಿತ್ತು:  ಬಿಸಿಸಿಐ ತೀರ್ಮಾನದ ಬಗ್ಗೆ ಮಾತನಾಡಿದ ಶ್ರೀಶಾಂತ್‌ ‘ಕ್ರಿಕೆಟ್‌ ಮಂಡಳಿ ಈ ರೀತಿಯ ತೀರ್ಮಾನ ಕೈಗೊಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದೊಂದು ಅನಿರೀಕ್ಷಿತವಾಗಿತ್ತು. ಇದು ನನಗೆ ಸಾಕಷ್ಟು ನೋವುಂಟು ಮಾಡಿದೆ. ಅಕ್ಟೋಬರ್ 7ರಂದು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದರು.

ಅಸಹಜ ನ್ಯಾಯ (ನವದೆಹಲಿ ವರದಿ, ಪಿಟಿಐ): ‘ಶ್ರೀಶಾಂತ್‌ ವಿರುದ್ಧ ಬಿಸಿಸಿಐ ತೆಗೆದುಕೊಂಡಿರುವ ಕ್ರಮ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿದೆ. ಆಟಗಾರರ ಮೇಲೆ  ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಬಿಸಿಸಿಐ ಈ ತೀರ್ಮಾನ ತೆಗೆದುಕೊಂಡಿದ್ದು ಸರಿಯಲ್ಲ’ ಎಂದು ರೆಬೆಕ್ಕಾ ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.