ADVERTISEMENT

ಹೈದರಾಬಾದ್‌ ದಾಳಿಗೆ ಕುಸಿದ ಕರ್ನಾಟಕ

ಅರ್ಧಶತಕ ಗಳಿಸಿದ ಸ್ಟುವರ್ಟ್‌ ಬಿನ್ನಿ: ಮಿಂಚಿದ ಮಹಮದ್ ಸಿರಾಜ್

ನಾಗೇಶ್ ಶೆಣೈ ಪಿ.
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಅರ್ಧಶತಕ ದಾಖಲಿಸಿದ ಸ್ಟುವರ್ಟ್‌ ಬಿನ್ನಿ
ಅರ್ಧಶತಕ ದಾಖಲಿಸಿದ ಸ್ಟುವರ್ಟ್‌ ಬಿನ್ನಿ   

ಶಿವಮೊಗ್ಗ: ಶಿಸ್ತುಬದ್ಧ ಬೌಲಿಂಗ್‌ ದಾಳಿ ಸಂಘಟಿಸಿದ ಹೈದರಾಬಾದ್‌ ತಂಡ, ಮಂಗಳವಾರ ಆರಂಭವಾದ ರಣಜಿ ಟ್ರೋಫಿ ‘ಎ’ ಗುಂಪಿನ ಲೀಗ್‌ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 183 ರನ್‌ಗಳಿಗೆ ಸೀಮಿತಗೊಳಿಸಿ ದಿನದ ಗೌರವ ಪಡೆಯಿತು. ಮಧ್ಯಮ ವೇಗದ ಬೌಲರ್‌ ಮಹಮದ್‌ ಸಿರಾಜ್‌ ನಾಲ್ಕು ವಿಕೆಟ್‌ಗಳೊಡನೆ, ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ಸಂಭ್ರಮವನ್ನು ಆಚರಿಸಿದರು.

ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ  ನಡೆಯುತ್ತಿರುವ ಈ ಪಂದ್ಯದಲ್ಲಿ ಕರ್ನಾಟಕವೂ ಪ್ರತಿಹೋರಾಟ ತೋರಿದೆ. ಚಹ ವಿರಾಮದ ನಂತರ ಇನಿಂಗ್ಸ್‌ ಆರಂಭಿಸಿದ ಪ್ರವಾಸಿ ತಂಡ 3 ವಿಕೆಟ್‌ಗೆ 51 ರನ್‌ಗಳೊಡನೆ ಆಟ ಮುಗಿಸಿದ್ದು, ಬುಧವಾರದ ಆಟ ಕುತೂಹಲಕ್ಕೆ ಕಾರಣವಾಗಿದೆ.

ಸಿರಾಜ್‌ (42ಕ್ಕೆ4) ಅವರಿಗೆ ಉತ್ತಮ ಬೆಂಬಲ ನೀಡಿದ ಇನ್ನೊಬ್ಬ ಮಧ್ಯಮ ವೇಗದ ಬೌಲರ್‌ ರವಿಕಿರಣ್‌ (36ಕ್ಕೆ3), ಆತಿಥೇಯ ತಂಡದ ಬ್ಯಾಟಿಂಗ್‌ ತಾರೆಗಳಾದ ಕೆ.ಎಲ್‌.ರಾಹುಲ್‌ (4) ಮತ್ತು ಕರುಣ್‌ ನಾಯರ್‌ (23) ವಿಕೆಟ್‌ ಪಡೆದರು. ಸ್ಟುವರ್ಟ್‌ ಬಿನ್ನಿ (61, 88 ಎಸೆತ, 8 ಬೌಂಡರಿ) ಪ್ರತಿರೋಧ ತೋರಿ ಉಪಯುಕ್ತ ಅರ್ಧಶತಕ ಗಳಿಸಿದ್ದರಿಂದ ಕರ್ನಾಟಕ ಮುಖಭಂಗದಿಂದ ಪಾರಾಯಿತು.

ADVERTISEMENT

ಟಾಸ್‌ ಗೆದ್ದ ಕರ್ನಾಟಕ ನಿರೀಕ್ಷೆಯಂತೆ ಬ್ಯಾಟ್‌ ಮಾಡಲು ನಿರ್ಧರಿಸಿತು. ಆದರೆ ಬೆಳಗಿನ ತೇವಾಂಶದ ಲಾಭವನ್ನು ಹೈದರಾಬಾದ್‌ ಬೌಲರ್‌ಗಳು ಚೆನ್ನಾಗಿಯೇ ಬಳಸಿಕೊಂಡು, ಕರ್ನಾಟಕಕ್ಕೆ ಆರಂಭದಿಂದಲೇ ಒತ್ತಡ ಹೇರಿದರು. ರವಿಕಿರಣ್ ಮಾಡಿದ ಪಂದ್ಯದ ಮೊದಲ ಓವರ್‌ನ ಎರಡನೇ ಎಸೆತವನ್ನು ಫ್ಲಿಕ್ ಮಾಡಿ ಮಿಡ್‌ ವಿಕೆಟ್‌ ಬೌಂಡರಿಗಟ್ಟಿದ್ದ ಆರ್. ಸಮರ್ಥ್‌ ಒಟ್ಟು 3 ಬೌಂಡರಿಗಳಿದ್ದ 19 ರನ್‌ ಗಳಿಸಿ ಮೊದಲು ನಿರ್ಗಮಿಸಿದರು. ಮೊತ್ತ 26 ಆಗಿದ್ದಾಗ ಯಾರ್ಕರ್‌ ಲೆಂಗ್ತ್ ಎಸೆತವನ್ನು ಆಡುವ ಯತ್ನದಲ್ಲಿ ಎಲ್‌ಬಿಡಬ್ಲ್ಯು ಆದರು. ಕೇವಲ ಎರಡು ಎಸೆತ ಎದುರಿಸಿದ ಮಯಂಕ್ ಅಗರವಾಲ್‌, ಸಿರಾಜ್‌ ಬೌಲಿಂಗ್‌ನಲ್ಲಿ ಚೆಂಡಿನ ಗತಿಯನ್ನು ಅರಿಯದೇ ಬೌಲ್ಡ್‌ ಆದರು.

ಇನ್ನೊಂದೆಡೆ ಬಿಗಿಯಾದ ಬೌಲಿಂಗ್ ಎದುರು ಲಯ ಕಂಡುಕೊಳ್ಳಲು ಪರದಾಡಿದ ರಾಹುಲ್‌ (4; 27 ಎಸೆತ), ರವಿಕಿರಣ್ ಬೌಲಿಂಗ್‌ನಲ್ಲಿ ಒಳಕ್ಕೆ ಹೊರಳಿದ ಚೆಂಡಿಗೆ ವಿಕೆಟ್‌ ಕಳೆದುಕೊಂಡಾಗ ಕರ್ನಾಟಕ ಒತ್ತಡಕ್ಕೆ ಸಿಲುಕಿತು. ಈ ಮೂರೂ ವಿಕೆಟ್‌ಗಳು 26ರ ಮೊತ್ತಕ್ಕೆ ಬಿದ್ದಿದ್ದವು. ಎದುರಾಳಿ ನಾಯಕ ಅಂಬಟಿ ರಾಯುಡು, ಬೌಲರ್‌ಗಳನ್ನು ಸಣ್ಣ ಸ್ಪೆಲ್‌ಗಳಿಗೆ ಬದಲಿಸಿದರು. ಇನ್ನೊಬ್ಬ ವೇಗಿ ಆಶಿಷ್‌ ರೆಡ್ಡಿ ಬೌಲಿಂಗ್‌ನಲ್ಲಿ ಮುಂದೆ ಆಡಲು ಹೋದ ಸಿ.ಎಂ. ಗೌತಮ್ ಚೆಂಡಿನ ಗತಿ ಅಳೆಯುವಲ್ಲಿ ಎಡವಿ ಎಲ್‌ಬಿ ಬಲೆಗೆ ಬಿದ್ದರು.

ಭೋಜನ ವಿರಾಮದ ವೇಳೆಗೆ ತಂಡದ ಮೊತ್ತ 4 ವಿಕೆಟ್‌ಗೆ 81. ಕರುಣ್‌ ನಾಯರ್‌ ಮತ್ತು ಸ್ಟುವರ್ಟ್‌ ಬಿನ್ನಿ 37 ರನ್‌ ಜೊತೆಯಾಟವಾಡಿ ಚೇತರಿಕೆ ನೀಡುವಂತೆ ಕಂಡಿತ್ತು. ಆದರೆ ವಿರಾಮದ ನಂತರ ಕರುಣ್‌ ನಾಯರ್‌ (23, 2 ಬೌಂಡರಿ) ಮತ್ತು  ಆಲ್‌ರೌಂಡರ್ ಶ್ರೇಯಸ್‌ ಗೋಪಾಲ್‌ ಕೂಡ ಬೇಗನೇ ನಿರ್ಗಮಿಸಿದರು. 

ಇನ್ನೊಂದೆಡೆ ಲೆಗ್‌ ಸ್ಪಿನ್ನರ್‌ ಆಕಾಶ್‌ ಭಂಡಾರಿ ಬೌಲಿಂಗ್‌ನಲ್ಲಿ ಎರಡು ರಿವರ್ಸ್‌ ಸ್ವೀಪ್‌ ಸೇರಿದಂತೆ ಕೆಲವು ಬೌಂಡರಿಗಳನ್ನು ಬಾರಿಸಿದ ಬಿನ್ನಿ, ಆಕ್ರಮಣಕಾರಿಯಂತೆ ಕಂಡರು. ಕೆ.ಗೌತಮ್‌ (13) ಜೊತೆ 56 ರನ್‌ಗಳ ಅಮೂಲ್ಯ ಜೊತೆಯಾಟ ಕರ್ನಾಟಕದ ಕುಸಿತವನ್ನು ಕೆಲಕಾಲ ತಡೆ ಹಿಡಿಯಿತು.

ಬಿನ್ನಿ 61 ರನ್‌ ಗಳಿಸಿದ್ದಾಗ ಸಿರಾಜ್‌ ಬೌಲಿಂಗ್‌ನಲ್ಲೇ ಸಂಶಯಾಸ್ಪದ ಎಲ್‌ಬಿ ತೀರ್ಪಿಗೆ ನಿರ್ಗಮಿಸಬೇಕಾಯಿತು. ಎಡಗೈ ಸ್ಪಿನ್ನರ್‌ ಪ್ರಗ್ಯಾನ್‌ ಓಜಾ, ಕರ್ನಾಟಕದ ಕೊನೆಯ ಎರಡು ವಿಕೆಟ್‌ಗಳನ್ನು ಪಡೆದರು.

ಹೈದರಾಬಾದ್ ತಂಡ, ಆರಂಭ ಆಟಗಾರ ತನ್ಮಯ್‌ ಅಗರವಾಲ್‌ (1) ಅವರನ್ನು ರನೌಟ್ ಮೂಲಕ ಬೇಗನೇ ಕಳೆದುಕೊಂಡಿತು. ಅಕ್ಷಿತ್ ರೆಡ್ಡಿ ಮತ್ತು ಕೊಲ್ಲ ಸುಮಂತ್‌ (ಔಟಾಗದೇ 34) ಚೇತರಿಕೆ ನೀಡುವಂತೆ ಕಂಡಾಗ ಆಫ್‌ಸ್ಪಿನ್ನರ್‌ ಕೆ.ಗೌತಮ್‌ ಹೊಡೆತ ನೀಡಿದರು. ಲಾಂಗ್‌ ಆನ್‌ ಮೇಲೆ ಚೆಂಡನ್ನು ಎತ್ತುವ ಭರದಲ್ಲಿ ರೆಡ್ಡಿ (13) ಬದಲಿ ಆಟಗಾರ ಸುಚಿತ್‌ಗೆ ಕ್ಯಾಚ್‌ ನೀಡಿದರು. ನಾಯಕ ಅಂಬಟಿ ರಾಯುಡು ‘ಸ್ವೀಪ್‌’  ಯತ್ನದಲ್ಲಿ ಎಡವಿ ‘ಬೌಲ್ಡ್‌’ ಆದರು.

ಹೈದರಾಬಾದ್‌ ಬೌಲಿಂಗ್‌– ಬಿನ್ನಿ ಪ್ರಶಂಸೆ

‘ಪಿಚ್‌ಗೆ ಹೊಂದಿಕೊಳ್ಳಲು ಊಟದ ಮೊದಲಿನ ಅವಧಿಯನ್ನು ಎಚ್ಚರಿಕೆಯಿಂದ ಆಡಿದೆ. ನಂತರ ಉತ್ತಮ ಹೊಡೆತಗಳನ್ನು ಪ್ರಯೋಗಿಸಲು ಸಾಧ್ಯವಾಯಿತು’ ಎಂದು ಕರ್ನಾಟಕ ತಂಡದ ಬ್ಯಾಟ್ಸ್‌ಮನ್‌ ಸ್ಟುವರ್ಟ್‌ ಬಿನ್ನಿ ಹೇಳಿದರು.

ಮಂಗಳವಾರ ದಿನದಾಟದ ನಂತರ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಮೊದಲ ದಿನದ ಶ್ರೇಯ ಹೈದರಾಬಾದ್‌ ಬೌಲರ್‌ಗಳಿಗೆ ಸಲ್ಲಬೇಕು. ಅವರು ಆರಂಭದ ಒಂದು ಗಂಟೆಯ ವೇಳೆಯ ತೇವಾಂಶದ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡರು. ಕರಾರುವಾಕ್‌ ದಾಳಿ ಮೂಲಕ ನಮಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಲಿಲ್ಲ’ ಎಂದು ವಿಶ್ಲೇಷಿಸಿದರು. ಆದರೆ ಪಿಚ್‌ ಬ್ಯಾಟ್ಸ್‌ಮನ್ನರಿಗೂ ಅನುಕೂಲವಾಗಿದೆ ಎಂದು ಕರ್ನಾಟಕದ ಪರ ಏಕೈಕ ಅರ್ಧಶತಕ ಗಳಿಸಿದ ಬಿನ್ನಿ ಹೇಳಿದರು.

ಹೈದರಾಬಾದ್‌ ತಂಡದ ಯಶಸ್ವಿ ಬೌಲರ್‌ ಮಹಮದ್‌ ಸಿರಾಜ್‌, ಒಟ್ಟಾರೆ ಬೌಲಿಂಗ್ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಭಾರತ ತಂಡಕ್ಕೆ ಆಯ್ಕೆಯಾಗಿದ್ದು, ಇಂದಿನ ಸಾಧನೆಗೆ ನೆರವು ನೀಡಿದೆ ಎನ್ನುವುದನ್ನು ಅವರು ಒಪ್ಪಿಕೊಂಡರು.

‘ರನೌಟ್‌ ಮತ್ತು ದೊಡ್ಡ ಹೊಡೆತದ ಯತ್ನದಲ್ಲಿ ನಮ್ಮ ಇಬ್ಬರು ಆಟಗಾರರು ನಿರ್ಗಮಿಸಬೇಕಾಯಿತು. ಆದರೆ ಬುಧವಾರ ಮೊದಲ ಅವಧಿಯ ಆಟ ನಮ್ಮ ಪಾಲಿಗೆ ಮಹತ್ವದ್ದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.