ADVERTISEMENT

ಹ್ಯಾಟ್ರಿಕ್‌ ಪ್ರಶಸ್ತಿಗೆ ಒಂದೇ ಹೆಜ್ಜೆ

ವಿಜಯ ಹಜಾರೆ: ಉತ್ತಪ್ಪ ಶತಕ, ವಿನಯ್‌ ಮಿಂಚು, ಕರ್ನಾಟಕಕ್ಕೆ 21 ರನ್‌ ಜಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 19:30 IST
Last Updated 14 ಮಾರ್ಚ್ 2014, 19:30 IST

ಕೋಲ್ಕತ್ತ (ಪಿಟಿಐ): ವಿಜಯ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಜಾರ್ಖಂಡ್‌ ತಂಡವನ್ನು 21 ರನ್‌ಗಳಿಂದ ಮಣಿಸಿರುವ ರಣಜಿ ಹಾಗೂ ಇರಾನಿ ಕಪ್‌ ಚಾಂಪಿಯನ್‌ ಕರ್ನಾಟಕ ತಂಡ ದೇಶಿಯ ಋತುವಿನಲ್ಲಿ ಹ್ಯಾಟ್ರಿಕ್‌ ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ದಿಟ್ಟ ಹೆಜ್ಜೆ ಹಾಕಿದೆ.

ಜಾಧವಪುರ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಕರ್ನಾಟಕ ತಂಡ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆಯಿತು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಅನುಭವಿ ರಾಬಿನ್‌ ಉತ್ತಪ್ಪ ಅವರ ಶತಕದ ನೆರವಿನಿಂದ ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 323 ರನ್ ಕಲೆ ಹಾಕಿತು.

ಸವಾಲಿನ ಗುರಿಯಿದ್ದರೂ ಪ್ರಬಲ ಹೋರಾಟ ತೋರಿದ ಸೌರಭ್‌ ತಿವಾರಿ ಸಾರಥ್ಯದ ಜಾರ್ಖಂಡ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 302 ಗಳಿಸಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಕೊನೆಯಲ್ಲಿ ಚುರುಕಿನ ದಾಳಿ ನಡೆಸಿದ ವೇಗಿಗಳಾದ ನಾಯಕ ಮತ್ತು ಅಭಿಮನ್ಯು ಮಿಥುನ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಉತ್ತಪ್ಪ ಅಬ್ಬರ: ಗುಜರಾತ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶತಕ ಗಳಿಸಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಉತ್ತಪ್ಪ ಮಹತ್ವದ ಸೆಮಿಫೈನಲ್‌ನಲ್ಲಿಯೂ ಆರ್ಭಟಿಸಿದರು.

ಮೂರೂವರೆ ಗಂಟೆಗೂ ಹೆಚ್ಚು ಕಾಲ ಕ್ರೀಸ್‌ನಲ್ಲಿದ್ದ ಉತ್ತಪ್ಪ 135 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ ಒಳಗೊಂಡಂತೆ 133 ರನ್‌ ಕಲೆ ಹಾಕಿದರು. ಲಿಸ್ಟ್‌ ‘ಎ’ ಪಂದ್ಯದಲ್ಲಿ ಗಳಿಸಿದ 14 ಶತಕ ಇದಾಗಿದೆ.

ಉತ್ತಪ್ಪ ಆಟಕ್ಕೆ ತಕ್ಕ ಬೆಂಬಲ ನೀಡಿದ ಮಯಂಕ್‌ ಅಗರವಾಲ್‌ (66, 99ನಿಮಿಷ, 67ಎಸೆತ, 9ಬೌಂಡರಿ) ಮೊದಲ ವಿಕೆಟ್‌ಗೆ 137 ರನ್‌ ಕಲೆ ಹಾಕಿ ಗಟ್ಟಿ ಬುನಾದಿ ನಿರ್ಮಿಸಿದರು. ಹಿಂದಿನ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಕೆ.ಎಲ್‌. ರಾಹುಲ್‌ (67, 106ನಿ., 72ಎ., 5ಬೌಂ., ) ವೈಫಲ್ಯದಿಂದ ಹೊರ ಬಂದರು.

ಅನುಭವಿ ಉತ್ತಪ್ಪ ಮತ್ತು ಭವಿಷ್ಯದ ತಾರೆ ರಾಹುಲ್‌ ಎರಡನೇ ವಿಕೆಟ್‌ಗೆ 128 ರನ್‌ ಸೇರಿಸಿದರು. ರಾಹುಲ್‌ ಶುಕ್ಲಾ ಎಸೆತದಲ್ಲಿ ಬೌಲ್ಡ್‌ ಆದ ಕೆ.ಎಲ್‌. ರಾಹುಲ್‌ ಪೆವಿಲಿಯನ್ ಸೇರಿದರು. ಈ ವೇಳೆ ಕರ್ನಾಟಕ 47.1 ಓವರ್‌ಗಳಲ್ಲಿ 296 ರನ್‌ ಕಲೆ ಹಾಕಿತ್ತು. ಕೊನೆಯ 17 ಎಸೆತಗಳಲ್ಲಿ 27 ರನ್‌ ಗಳಿಸಿ ಮನೀಷ್‌ ಪಾಂಡೆ, ಕರುಣ್‌ ನಾಯರ್‌ ಮತ್ತು ವಿನಯ್‌ ವಿಕೆಟ್‌ ಕಳೆದುಕೊಂಡಿತು.

ಆರಂಭದಲ್ಲಿ ವಿಕೆಟ್‌ ಪಡೆಯಲು ಸಾಕಷ್ಟು ಪರದಾಡಿದರೂ, ಕೊನೆಯಲ್ಲಿ ಮೂರು ವಿಕೆಟ್‌ ಉರುಳಿಸಿದ ರಾಹುಲ್‌ ಶುಕ್ಲಾ (59ಕ್ಕೆ3) ಜಾರ್ಖಂಡ್‌ನ ಯಶಸ್ಸಿ ಬೌಲರ್ ಎನಿಸಿದರು.

ಉತ್ತಮ ಆರಂಭ, ದಿಢೀರ್‌ ಕುಸಿತ: ಜಾರ್ಖಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಇಶಾಂಕ್‌ ಜಗ್ಗಿ (141, 179ನಿ., 121ಎ., 16ಬೌಂ., 4 ಸಿ.,) ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಹೋರಾಟ ನಡೆಸಿದರಾದರೂ ಉಳಿದ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಲಭಿಸಲಿಲ್ಲ.

ವಿನಯ್‌ ಮಿಂಚಿನ ಬೌಲಿಂಗ್‌: ನಾಯಕ ವಿನಯ್‌ ಈ ಸಲದ ದೇಶಿಯ ಋತುವಿನಲ್ಲಿ ಚುರುಕಿನ ದಾಳಿಯನ್ನು ಮುಂದುವರಿಸಿದ್ದಾರೆ.
ಹತ್ತು ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ಚೊಚ್ಚಲ ಪ್ರಥಮ ದರ್ಜೆ ಪಂದ್ಯ ಆಡಿದ್ದ ವಿನಯ್‌ ಜಾರ್ಖಂಡ್‌ ಎದುರು ನಾಲ್ಕು ವಿಕೆಟ್‌ ಉರುಳಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಐದು ವಿಕೆಟ್‌ ಕಬಳಿಸಿದ್ದರು. ಪ್ರಥಮ ದರ್ಜೆ ಮತ್ತು ಲಿಸ್ಟ್‌ ‘ಎ’ ಪಂದ್ಯಗಳೂ ಸೇರಿದಂತೆ ಹಿಂದಿನ 11 ಪಂದ್ಯಗಳಿಂದ ಅವರು ಒಟ್ಟು 54 ವಿಕೆಟ್ ಕಬಳಿಸಿದ್ದಾರೆ.
 

ADVERTISEMENT

ಉತ್ತಮ ಆರಂಭ ಪಡೆದ ತಿವಾರಿ ಬಳಗಕ್ಕೆ ವಿನಯ್‌ ದಾಳಿ ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಇನ್ನೊಬ್ಬ ವೇಗಿ ಅಭಿಮನ್ಯು ಮಿಥುನ್‌ (52ಕ್ಕೆ3) ಮತ್ತು ಶರತ್‌ ಒಂದು ವಿಕೆಟ್‌ ಉರುಳಿಸಿ ಗೆಲುವು ತಂದುಕೊಟ್ಟರು.

ವಿಕೆಟ್‌ ಕೀಪರ್‌ ಸಿ.ಎಂ. ಗೌತಮ್‌ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯದ ಕಾರಣ ಉತ್ತಪ್ಪ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ನಿಭಾಯಿಸಿದರು. ಕುನಾಲ್‌ ಕಪೂರ್‌ ಲಿಸ್ಟ್‌ ‘ಎ’ ಪಂದ್ಯಕ್ಕೆ ಪದಾರ್ಪಣೆ ಮಾಡಿದರು. ಆದರೆ,     ಅವರಿಗೆ ಬ್ಯಾಟ್‌ ಮಾಡಲು ಅವಕಾಶ ಸಿಗಲಿಲ್ಲ.

ರೈಲ್ವೇಸ್‌ ಎದುರು ಫೈನಲ್
ವಿಜಯ ಹಜಾರೆ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ರೈಲ್ವೇಸ್‌ ಎದುರು ಪೈಪೋಟಿ ನಡೆಸಲಿದೆ. ಈ ಪಂದ್ಯ ಭಾನುವಾರ ನಡೆಯಲಿದೆ. ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ರೈಲ್ವೇಸ್‌ ತಂಡ ಬಂಗಾಳದ ಎದುರು ಐದು ವಿಕೆಟ್‌ಗಳ ಗೆಲುವು ಸಾಧಿಸಿತು.


ಸಂಕ್ಷಿಪ್ತ ಸ್ಕೋರು: ಬಂಗಾಳ 47.4 ಓವರ್‌ಗಳಲ್ಲಿ 185 (ಶ್ರೀವತ್ಸ ಗೋಸ್ವಾಮಿ 38, ಮನೋಜ್‌ ತಿವಾರಿ 61, ಸಯಾನ್‌ ಮಂಡಲ್‌ 28; ಚಂದ್ರಪಾಲ್ ಸೈನಿ 25ಕ್ಕೆ3, ಆಶಿಶ್‌ ಯಾದವ್‌ 25ಕ್ಕೆ2).ರೈಲ್ವೇಸ್‌ 38.2 ಓವರ್‌ಗಳಲ್ಲಿ 5 ವಿಕೆಟ್‌ಗೆ 188 (ಅಮಿತ್‌ ಪೌಣಿಕರ್ 83, ಶಿವಕಾಂತ್‌ ಶುಕ್ಲಾ ಔಟಾಗದೆ 56; ವಿ. ಪ್ರತಾಪ್‌ ಸಿಂಗ್‌ 54ಕ್ಕೆ3). ಫಲಿತಾಂಶ: ರೈಲ್ವೇಸ್‌ಗೆ 5 ವಿಕೆಟ್‌ ಜಯ ಹಾಗೂ ಫೈನಲ್‌ ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.