ADVERTISEMENT

14 ವರ್ಷಗಳ ನಂತರ ಸಂತೋಷ್ ಟ್ರೋಫಿ ಗೆದ್ದ ಕೇರಳ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2018, 14:20 IST
Last Updated 1 ಏಪ್ರಿಲ್ 2018, 14:20 IST
ಕೇರಳ ತಂಡ  (ಕೃಪೆ: ಟ್ವಿಟರ್)
ಕೇರಳ ತಂಡ (ಕೃಪೆ: ಟ್ವಿಟರ್)   

ಕೊಲ್ಕತ್ತಾ: 14 ವರ್ಷಗಳ ನಂತರ ಕೇರಳ ಫುಟ್ಬಾಲ್ ತಂಡ ಸಂತೋಷ್ ಟ್ರೋಫಿ ಗೆದ್ದುಕೊಂಡಿದೆ. ಕೊಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಶ್ಚಿಮ ಬಂಗಾಳವನ್ನು ಪರಾಭವಗೊಳಿಸಿ ಕೇರಳ 6ನೇ ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ.

ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ ಎರಡು ಗೋಲು ಬಾರಿಸಿ ಡ್ರಾ ಸಾಧಿಸಿದ್ದವು. ಅನಂತರ ಪೆನಾಲ್ಟಿ ಶೂಟೌಟ್‍ನಲ್ಲಿ ಕೇರಳ 4 ಗೋಲುಗಳನ್ನು ಬಾರಿಸಿ ಗೆಲುವು ತನ್ನದಾಗಿಸಿಕೊಂಡಿದೆ. ಪೆನಾಲ್ಟಿ ಶೂಟೌಟ್‍ನಲ್ಲಿ ಪಶ್ಚಿಮ ಬಂಗಾಳ 2 ಗೋಲು ಬಾರಿಸಿತ್ತು.

ಕೇರಳದ ಗೋಲ್ ಕೀಪರ್ ಮಿಥುನ್ ಅವರ ಉತ್ತಮ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು. ಕೇರಳದ ಪರವಾಗಿ ರಾಹುಲ್ ವಿ ರಾಜ್, ಜಿತಿನ್ ಗೋಪಾಲನ್, ಜಸ್ಟಿನ್, ಸೀಸನ್ ತಲಾ ಒಂದು ಗೋಲು ಬಾರಿಸಿದ್ದಾರೆ.

ADVERTISEMENT

ಪಂದ್ಯದ ಆರಂಭದಲ್ಲಿ ಪಶ್ಚಿಮ ಬಂಗಾಳ ತಂಡ ಉತ್ತಮ ಪ್ರದರ್ಶನ ನೀಡಿತ್ತು. 19 ನಿಮಿಷದಲ್ಲಿ ಜಿತಿನ್ ಎಂ.ಎಸ್  ಗೋಲು ಬಾರಿಸಿ ಕೇರಳದ ಖಾತೆ ತೆರೆದರು. ಸೆಕೆಂಡ್ ಹಾಫ್‍ನಲ್ಲಿ ಎದುರಾಳಿ ತಂಡವೂ ಒಂದು ಗೋಲು ಬಾರಿಸಿತು. ನಿಗದಿತ ಸಮಯದಲ್ಲಿ ಕೇರಳ ಮತ್ತು ಬಂಗಾಳ ತಲಾ ಒಂದು ಗೋಲು ಪಡೆದಿದ್ದರಿಂದ ಪಂದ್ಯ ಎಕ್ಸ್ ಟ್ರಾ ಸಮಯಕ್ಕೆ ಮುಂದುವರಿಯಿತು. ಈ ವೇಳೆ ಬಂಗಾಳದ ರಾಜನ್ ಬರ್ಮನ್‍ಗೆ ಕೆಂಪು ಕಾರ್ಡ್ ಲಭಿಸಿ ಹೊರಗೆ ಹೋದಾಗ ತಂಡದ ಸಂಖ್ಯೆ 10 ಆಯಿತು. ಇನ್ನೇನು ಪಂದ್ಯ ಮುಗಿಯಲು ನಾಲ್ಕು ನಿಮಿಷ ಇರುವಾಗ ಕೇರಳದ ವಿಪಿನ್ ಥಾಮಸ್ ಗೋಲು ಬಾರಿಸಿ 2-1 ಮುನ್ನಡೆ ಸಾಧಿಸಿದರು. ಕ್ಷಣ ಮಾತ್ರದಲ್ಲಿ ಬಂಗಾಳದ ತೀರ್ಥಂಕರ್ ಸರ್ಕಾರ್ ಗೋಲು ಬಾರಿಸಿ ಡ್ರಾ ಮಾಡಿಕೊಂಡರು.

ಪೆನಾಲ್ಟಿ ಶೂಟೌಟ್‍ನಲ್ಲಿ ಬಂಗಾಳ 2 ಗೋಲು ಬಾರಿಸಿದ್ದು, ಕೇರಳ 4 ಗೋಲು ಬಾರಿಸಿ ಸಂತೋಷ್ ಟ್ರೋಫಿ ಗೆದ್ದುಕೊಂಡಿತು.

</p><p>2004ರಲ್ಲಿ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಸೋಲಿಸಿ ಕೇರಳ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ 14 ವರ್ಷಗಳ ಸುದೀರ್ಘ ಕಾಯುವಿಕೆ ನಂತರ ಕೇರಳ ತಂಡ ಸಂತೋಷ್ ಟ್ರೋಫಿ ಗೆದ್ದು ಬೀಗಿದೆ.</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.