ADVERTISEMENT

140 ಹೋವಿಟ್ಜರ್ ಫಿರಂಗಿ ಖರೀದಿ: ಡಿಆರ್‌ಡಿಒಗೆ ಸೇನೆ ಖರೀದಿ ಆದೇಶ

​ಪ್ರಜಾವಾಣಿ ವಾರ್ತೆ
Published 10 ಜೂನ್ 2012, 19:30 IST
Last Updated 10 ಜೂನ್ 2012, 19:30 IST

ನವದೆಹಲಿ (ಪಿಟಿಐ): ದೇಶದ ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಡಿಆರ್‌ಡಿಒ (ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ) ಅಭಿವೃದ್ಧಿಪಡಿಸಿದ ಸುಮಾರು 140 ಹೋವಿಟ್ಜರ್ ಫಿರಂಗಿಗಳನ್ನು ಖರೀದಿಸಲು ಮುಂದಾಗಿದೆ.

ಡಿಆರ್‌ಡಿಒನ ಪುಣೆ ಮೂಲದ ಶಸ್ತ್ರಾಸ್ತ್ರ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಎಆರ್‌ಡಿಇ)ಯು ಸೇನೆಗಾಗಿ 155 ಮಿ.ಮೀ.ಗಳ 52 ಗುಂಡುಗಳನ್ನು ಹಾಕುವ ಒಳವಿನ್ಯಾಸವಿರುವ ದೇಶೀಯ ಹೋವಿಟ್ಜರ್ ಫಿರಂಗಿಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ.

ಈ ಸಂಬಂಧ ಇತ್ತೀಚೆಗೆ ಡಿಆರ್‌ಡಿಒಗೆ ಖರೀದಿ ಆದೇಶ ನೀಡಿರುವ ಸೇನೆಯು, ಇವುಗಳು ಪ್ರಯೋಗಾತ್ಮಕವಾಗಿ ಸಾಬೀತುಗೊಳ್ಳುವ ಮತ್ತು ಸೇನೆಗೆ ಸೇರಲು ಸಿದ್ಧವಾಗಿರುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಸೇನಾ ಶಸ್ತ್ರಾಸ್ತ್ರಗಳ ತಯಾರಿಕೆ ಕುರಿತು ಪರಿಶೀಲನೆ ನಡೆಸಿದ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರಿಗೂ ಡಿಆರ್‌ಡಿಒಗೆ ಆದೇಶ ನೀಡಿರುವ ಹೋವಿಟ್ಜರ್ ಫಿರಂಗಿಗಳ ಕುರಿತು ಸೇನೆ ವಿವರಿಸಿದೆ. 80ರ ದಶಕದಲ್ಲಿ ಬೊಫೋರ್ಸ್ ಫಿರಂಗಿಗಳ ಖರೀದಿ ವ್ಯವಹಾರದಲ್ಲಿ ನಡೆದ ಅಕ್ರಮ ಬಹಿರಂಗವಾದ ಹಿನ್ನೆಲೆಯಲ್ಲಿ ಕಳೆದ 25 ವರ್ಷಗಳಿಂದ ಒಂದೇ ಒಂದು ಹೋವಿಟ್ಜರ್‌ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿಲ್ಲ. ಈ ಹಿನ್ನೆಲೆಯಲ್ಲಿ ಫಿರಂಗಿ ತಯಾರಿಕಾ ಕಾರ್ಖಾನೆ ಮಂಡಳಿ (ಒಎಫ್‌ಬಿ) ದೇಶೀಯವಾಗಿ ತಯಾರಿಸಿದ ಬೊಫೋರ್ಸ್ ಫಿರಂಗಿಗಳ ಅಭಿವೃದ್ಧಿ ಕುರಿತು ಸಚಿವರಿಗೆ ಸೇನೆ ಮಾಹಿತಿ ನೀಡಿತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.