ಲಂಡನ್: ಉಸೇನ್ ಬೋಲ್ಟ್ `ಜೀವಂತ ದಂತಕತೆ~ ಎನಿಸಿದ್ದಾರೆ. ಲಂಡನ್ ಒಲಿಂಪಿಕ್ಸ್‌ನ ಪುರುಷರ 200 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದುಕೊಂಡ ಜಮೈಕದ ಅಥ್ಲೀಟ್ ಅದ್ವಿತೀಯ ಸಾಧನೆಗೆ ಭಾಜನರಾದರು.
ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಬೋಲ್ಟ್ 19.32 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಭಾನುವಾರ ನಡೆದಿದ್ದ 100 ಮೀ. ಓಟದಲ್ಲೂ ಅವರು ಅಗ್ರಸ್ಥಾನ ಪಡೆದಿದ್ದರು. ಮಾತ್ರವಲ್ಲ, ಇಲ್ಲಿ 200 ಮೀ.ನಲ್ಲೂ ಬಂಗಾರ ಜಯಿಸಿ `ಜೀವಂತ ದಂತಕತೆ~ಯಾಗುವುದು ನನ್ನ ಗುರಿ ಎಂದಿದ್ದರು.
ಬೋಲ್ಟ್ ಬೀಜಿಂಗ್ ಕೂಟದಲ್ಲಿ ಈ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಯಾರೂ ಸತತ ಎರಡು ಕೂಟಗಳಲ್ಲಿ 100 ಹಾಗೂ 200 ಮೀ. ಓಟದಲ್ಲಿ ಚಿನ್ನ ಜಯಿಸಿಲ್ಲ. ಇದೀಗ ಜಮೈಕದ ಅಥ್ಲೀಟ್ ಅದ್ಭುತ ಸಾಧನೆಯ ಮೂಲಕ ಶ್ರೇಷ್ಠ ಕ್ರೀಡಾಳುಗಳ ಸಾಲಿಗೆ ಸೇರಿದ್ದಾರೆ.
ಬೋಲ್ಟ್‌ಗೆ ಪ್ರಬಲ ಪೈಪೋಟಿ ನೀಡಿದ ಜಮೈಕದವರೇ ಆದ ಯೋಹಾನ್ ಬ್ಲೇಕ್ 19.44 ಸೆಕೆಂಡ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು. ಮೂರನೇ ಸ್ಥಾನವೂ ಜಮೈಕಕ್ಕೆ ಒಲಿಯಿತು. ವಾರೆನ್ ವಿಯೆರ್ 19.84 ಸೆಕೆಂಡ್‌ಗಳೊಂದಿಗೆ ಗುರಿ ತಲುಪಿ ಕಂಚು ಗೆದ್ದುಕೊಂಡರು.
ಇದೀಗ ಬೋಲ್ಟ್ ಅವರ ಗಮನ ಮೂರನೇ ಚಿನ್ನದತ್ತ ನೆಟ್ಟಿದೆ. ಶನಿವಾರ ನಡೆಯಲಿರುವ ಪುರುಷರ 4ಷ100 ಮೀ. ಓಟದಲ್ಲಿ ಜಮೈಕ ತಂಡವನ್ನು ಅಗ್ರಸ್ಥಾನದತ್ತ ಕೊಂಡೊಯ್ಯುವುದು ಬೋಲ್ಟ್ ಗುರಿ. ಅದರಲ್ಲಿ ಯಶಸ್ವಿಯಾದರೆ ಬೀಜಿಂಗ್ ಕೂಟದಂತೆ ಲಂಡನ್‌ನಲ್ಲೂ ಸ್ವರ್ಣ `ಟ್ರೆಬಲ್~ ಸಾಧನೆ ಮಾಡಿದಂತಾಗುತ್ತದೆ.
100 ಮೀ. ಓಟದ ಸ್ಪರ್ಧೆಯಂತೆ ಇಲ್ಲೂ ಬೋಲ್ಟ್‌ಗೆ ಬ್ಲೇಕ್ ಅವರಿಂದ ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಲಾಗಿತ್ತು. ಏಳನೇ ಲೇನ್‌ನಲ್ಲಿ ಓಡಿದ ಬೋಲ್ಟ್ ಟ್ರ್ಯಾಕ್‌ನ ತಿರುವಿನಲ್ಲಿ ತಮ್ಮ ಪೂರ್ಣ ವೇಗ ಪಡೆದುಕೊಂಡರು. ಬ್ಲೇಕ್ ನಾಲ್ಕನೇ ಲೇನ್‌ನಲ್ಲಿದ್ದರು. ಇಬ್ಬರೂ ಪಟ್ಟುಬಿಡದೆ ಮುನ್ನುಗ್ಗಿದರು.
ಆದರೆ ಕೊನೆಯ 15 ಮೀ. ಇರುವಂತೆಯೇ ಬೋಲ್ಟ್ ಸ್ಪಷ್ಟ ಮುನ್ನಡೆ ತಮ್ಮದಾಗಿಸಿಕೊಂಡರು. ಅಗ್ರಸ್ಥಾನ ಖಚಿತವಾದ ಬಳಿಕ ಎಡಗೈಯ ತೋರು ಬೆರಳನ್ನು ತುಟಿಗಳ ಮೇಲಿಟ್ಟು ಜಗತ್ತಿಗೆ ತಮ್ಮ `ಸಂದೇಶ~ ರವಾನಿಸಿದರು.
ತನ್ನನ್ನು ಟೀಕಿಸಿದವರಿಗೆ ಆ ಸಂದೇಶದ ಮೂಲಕ ಉತ್ತರ ನೀಡಿದರು. `ನನ್ನ ಸಾಮರ್ಥ್ಯದ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು. ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಈ ಪ್ರದರ್ಶನದ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದೇನೆ~ ಎಂದು ಬಳಿಕ ಬೋಲ್ಟ್ ನುಡಿದರು.
ಅಗ್ರಸ್ಥಾನ ಪಡೆದ ಬೋಲ್ಟ್ ಟ್ರ್ಯಾಕ್‌ನಲ್ಲಿ ಕೆಲಹೊತ್ತು `ಪುಶ್-ಅಪ್~ ನಡೆಸಿದರಲ್ಲದೆ, ಫೋಟೋಗ್ರಾಫರ್ ಒಬ್ಬರ ಕ್ಯಾಮರಾವನ್ನು ತೆಗೆದುಕೊಂಡು ಪ್ರೇಕ್ಷಕರ ಫೋಟೊ ಕ್ಲಿಕ್ಕಿಸಿದರು. ತಮ್ಮ `ಟ್ರೇಡ್ ಮಾರ್ಕ್~ ಶೈಲಿಯಲ್ಲಿ ಗೆಲುವಿನ ಸಂಭ್ರಮ ಆಚರಿಸಿಕೊಂಡರು.
ಬೋಲ್ಟ್ ತೆಗೆದುಕೊಂಡ ಸಮಯ ಮತ್ತು 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಮೈಕಲ್ ಜಾನ್ಸನ್ ಚಿನ್ನ ಗೆಲ್ಲಲು ತೆಗೆದುಕೊಂಡ ಸಮಯ ಒಂದೇ ಆಗಿದೆ. ಅಂದು ಜಾನ್ಸನ್ 19.32 ಸೆ.ಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ಮಾಡಿದ್ದರು. ಬೀಜಿಂಗ್‌ನಲ್ಲಿ 19.30 ಸೆ.ಗಳಲ್ಲಿ ಗುರಿ ತಲುಪಿ ಚಿನ್ನ ಜಯಿಸಿದ್ದ ಬೋಲ್ಟ್ ಈ ವಿಭಾಗದ ವಿಶ್ವದಾಖಲೆಯನ್ನು (19.19) ತಮ್ಮ ಹೆಸರಿನಲ್ಲೇ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.