ADVERTISEMENT

4-0ರಲ್ಲಿ ಗೆಲ್ಲುವುದೇ ಗುರಿ - ವಾರ್ನರ್

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಅಡಿಲೇಡ್ (ಪಿಟಿಐ): `ಭಾರತದ ಬ್ಯಾಟ್ಸ್‌ಮನ್‌ಗಳಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರ ಫಾರ್ಮ್ ನಲ್ಲಿದ್ದಾರೆ. ಉಳಿದವರು ತಡಬಡಾಯಿಸುತ್ತಿದ್ದಾರೆ. ಮುಂದಿನ ಪಂದ್ಯದಲ್ಲಾದರೂ ಈ ತಂಡದವರು ತಿರುಗೇಟು ನೀಡಲು ಪ್ರಯತ್ನಿಸಬೇಕು~ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡೇವಿಡ್ ವಾರ್ನರ್ ಹೇಳಿದ್ದಾರೆ.

`ವಿಶ್ವ ದರ್ಜೆಯ ಆಟಗಾರರು ಭಾರತ ತಂಡದಲ್ಲಿದ್ದಾರೆ. ಅಗ್ರ ಕ್ರಮಾಂಕ ಆರು ಮಂದಿ ಆಟಗಾರರು ಟೆಸ್ಟ್‌ನಲ್ಲಿ ಕಲೆಹಾಕಿರುವ ರನ್‌ಗಳ ರಾಶಿಯನ್ನೇ ನೋಡಿ. ಇದೊಂದು ಅದ್ಭುತ ಸಾಧನೆ. ಆದರೆ ಅವರೆಲ್ಲಾ ಈ ಸರಣಿಯಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಸಚಿನ್ ಕೆಲ ಅರ್ಧ ಶತಕಗಳ ಮೂಲಕ ಮಿಂಚಿದ್ದಾರೆ. ಹಾಗಾಗಿ ಉಳಿದ ಬ್ಯಾಟ್ಸ್ ಮನ್‌ಗಳು ಸರಣಿಯ ನಾಲ್ಕನೇ ಹಾಗೂ ಕೊನೆಯ ಪಂದ್ಯದಲ್ಲಾದರೂ ತಿರುಗೇಟು ನೀಡಲು ಪ್ರಯತ್ನಿಸಬೇಕು~ ಎಂದು ಅವರು ತಿಳಿಸಿದ್ದಾರೆ.

ಆದರೆ 4-0ರಲ್ಲಿ ಟೆಸ್ಟ್ ಸರಣಿ ಗೆಲ್ಲುವುದೇ ನಮ್ಮ ಗುರಿ ಎಂದು ವಾರ್ನರ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. `ಪರ್ತ್ ಟೆಸ್ಟ್ ಮುಗಿದ ಬಳಿಕ ನಮ್ಮ ನಾಯಕ ಮೈಕಲ್ ಕ್ಲಾರ್ಕ್ ಇದನ್ನು ನಮಗೆ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಪರ್ತ್ ಗೆಲುವನ್ನು ಸಂಭ್ರಮಿಸಿ, ಆದರೆ 4-0 ಗೆಲುವು ನಿಮ್ಮ ಮನದಲ್ಲಿರಲಿ ಎಂದು ಅವರು ಹೇಳಿದ್ದಾರೆ. ಹಾಗಾಗಿ 24ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಟೆಸ್ಟ್‌ನಲ್ಲೂ ಭಾರತ ತಂಡವನ್ನು ಕಾಡಲು ನಾವು ಸಿದ್ಧ~ ಎಂದು ವಾರ್ನರ್ ವಿವರಿಸಿದ್ದಾರೆ.

`ನಾವು ಮತ್ತೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರಪಟ್ಟ ಪಡೆಯಬೇಕು. 2013ರಲ್ಲಿ ನಡೆಯಲಿರುವ ಆ್ಯಷಸ್ ಸರಣಿ ವೇಳೆಗೆ ಈ ಸಾಧನೆ ಮಾಡಬೇಕು. ಈ ಸಾಧನೆ ಮಾಡುವ ವಿಶ್ವಾಸ ನಮ್ಮಲ್ಲಿದೆ. ಅದಕ್ಕೆ ಈಗಿನ ಕಠಿಣ ಪ್ರಯತ್ನ ಮುಂದುವರಿಸಬೇಕು~ ಎಂದರು.

ವಾರ್ನರ್ ಪರ್ತ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಅಬ್ಬರದ ಶತಕ (180) ಗಳಿಸಿದ್ದರು. ಹಾಗಾಗಿ ಅವರು `ಪಂದ್ಯ ಶ್ರೇಷ್ಠ~ ಗೌರವಕ್ಕೆ ಪಾತ್ರರಾಗಿದ್ದರು. ಆ ಪಂದ್ಯದಲ್ಲಿ ಉಮೇಶ್ ಯಾದವ್ ಎಸೆತವೊಂದು ವಾರ್ನರ್ ತಲೆಗೆ ಬಡಿದಿತ್ತು. ಹಾಗಾಗಿ ತಲೆಸುತ್ತಿನ ಸಮಸ್ಯೆಗೆ ಒಳಗಾಗಿದ್ದರು. ಆದರೆ ಇದೀಗ ಅವರು ಅಡಿಲೇಡ್ ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದಾರೆ. ಕಾಂಗರೂ ಪಡೆ ಈಗ 3-0ರಲ್ಲಿ ಮುನ್ನಡೆ ಹೊಂದಿದೆ.

ನನ್ನನ್ನು ಕೈಬಿಡಬೇಡಿ:  ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಡಲು ಕಣಕ್ಕಿಳಿಯುವ ತಂಡದಿಂದ ತಮ್ಮನ್ನು ಕೈಬಿಡದಿರುವಂತೆ ಆಸ್ಟ್ರೇಲಿಯಾದ ವೇಗದ ಬೌಲರ್ ರ‌್ಯಾನ್ ಹ್ಯಾರಿಸ್ ತಂಡದ ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಅಡಿಲೇಡ್ ಪಂದ್ಯಕ್ಕೆ ಒಬ್ಬ ವೇಗಿಯನ್ನು ಕೈಬಿಟ್ಟು ಆಫ್ ಸ್ಪಿನ್ನರ್ ನೇಥನ್ ಲಿಯೊನ್ ಅವರನ್ನು ಆಡಿಸುವ ಯೋಜನೆಯನ್ನು ತಂಡದ ಆಡಳಿತ ಹೊಂದಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವೇಗಿಗಳಾದ ಬೆನ್ ಹಿಲ್ಫೆನ್ಹಾಸ್ ಹಾಗೂ ಪೀಟರ್ ಸಿಡ್ಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಹಾಗಾಗಿ ಮತ್ತೊಬ್ಬ ವೇಗಿಯ ಸ್ಥಾನಕ್ಕೆ ಹ್ಯಾರಿಸ್ ಹಾಗೂ ಮಿಷೆಲ್ ಸ್ಟಾರ್ಕ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಆದರೆ ಗಾಯದ ಸಮಸ್ಯೆಗೆ ಒಳಗಾಗಿದ್ದ ಹ್ಯಾರಿಸ್ ಕೆಲವು ದಿನಗಳ ಹಿಂದೆಯಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.