ADVERTISEMENT

ಜಯಭೇರಿ ಮೊಳಗಿಸಿದ ಬಿಎಫ್‌ಸಿ

ಜಿ.ಶಿವಕುಮಾರ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಜಯಭೇರಿ ಮೊಳಗಿಸಿದ ಬಿಎಫ್‌ಸಿ
ಜಯಭೇರಿ ಮೊಳಗಿಸಿದ ಬಿಎಫ್‌ಸಿ   

ಬೆಂಗಳೂರು: ನಾಯಕ ಸುನಿಲ್‌ ಚೆಟ್ರಿ ಗಳಿಸಿದ ಏಕೈಕ ಗೋಲು ಮತ್ತು ಗುರುಪ್ರೀತ್‌ ಸಿಂಗ್‌ ಸಂಧು ಅವರ ಅಮೋಘ ಗೋಲ್‌ಕೀಪಿಂಗ್‌ ಉದ್ಯಾನನಗರಿಯ ಫುಟ್‌ಬಾಲ್‌ ಪ್ರಿಯರ ಮನಗೆದ್ದಿತ್ತು.

ಇವರ ಅಪೂರ್ವ ಆಟದ ಬಲದಿಂದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಎಟಿಕೆ ಸವಾಲು ಮೀರಿನಿಂತಿತು. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಫ್‌ಸಿ 1–0 ಗೋಲಿನಿಂದ ಜಯಭೇರಿ ಮೊಳಗಿಸಿತು.

17,922 ಮಂದಿ ಅಭಿಮಾನಿಗಳ ಬೆಂಬಲದೊಂದಿಗೆ ಅಂಗಳಕ್ಕಿಳಿದಿದ್ದ ಬಿಎಫ್‌ಸಿ ಮೊದಲ ಎರಡು ನಿಮಿಷಗಳಲ್ಲಿ ಗೋಲು ಗಳಿಸುವ ಎರಡು ಅವಕಾಶಗಳನ್ನು ಸೃಷ್ಟಿಸಿಕೊಂಡಿತ್ತು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಆತಿಥೇಯ ಆಟಗಾರರು ವಿಫಲರಾದರು.

ADVERTISEMENT

11ನೇ ನಿಮಿಷದಲ್ಲಿ ಎಟಿಕೆ ಆಟಗಾರ ಬಿಎಫ್‌ಸಿ ಆವರಣದ ಎಡತುದಿಯಿಂದ ಬಾರಿಸಿದ ಚೆಂಡನ್ನು ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಸಂಧು ತಡೆದರು. 15ನೇ ನಿಮಿಷದಲ್ಲಿ ಎಟಿಕೆಯ ದಾಸ್‌ ಸ್ಯಾಂಟೋಸ್‌ ಪ್ರಯತ್ನವೂ ವಿಫಲವಾಯಿತು. 19ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಿಎಫ್‌ಸಿ ನಾಯಕ ಚೆಟ್ರಿ ಕೈಚೆಲ್ಲಿದರು. ಈ ವೇಳೆ ಅಭಿಮಾನಿಗಳು ‘ಕಮ್‌ ಆನ್‌ ಬಿಎಫ್‌ಸಿ, ನಮ್ಮ ಊರು ಬೆಂಗಳೂರು’ ಎಂದು ಕೂಗುತ್ತಾ ತವರಿನ ಆಟಗಾರರನ್ನು ಹುರಿದುಂಬಿಸಿದರು.

21ನೇ ನಿಮಿಷದಲ್ಲಿ ಚೆಟ್ರಿ ಬಾರಿಸಿದ ಚೆಂಡನ್ನು ಎರಿಕ್‌ ಪಾರ್ಟಲು, ಉದಾಂತ್‌ ಸಿಂಗ್‌ ಕುಮಾಮ ಅವರತ್ತ ತಳ್ಳಿದರು ಚೆಂಡನ್ನು ಡ್ರಿಬಲ್‌ ಮಾಡುತ್ತಾ ಎದುರಾಳಿ ಆವರಣ ಪ್ರವೇಶಿಸಿದ ಉದಾಂತ್‌ ಇನ್ನೇನು ಗುರಿ ಮುಟ್ಟಿಸಿಯೇ ಬಿಟ್ಟರು ಎಂದುಕೊಳ್ಳುವಾಗ ಎಟಿಕೆ ಆಟಗಾರ ಅವರ ಪ್ರಯತ್ನಕ್ಕೆ ಅಡ್ಡಿಯಾದರು.

32ನೇ ನಿಮಿಷದಲ್ಲಿ ಸಹ ಆಟಗಾರ ತಮ್ಮತ್ತ ಒದ್ದ ಚೆಂಡನ್ನು ಬಿಎಫ್‌ಸಿಯ ವುವಾನ್‌ ಆ್ಯಂಟೋನಿಯೊ ತಲೆತಾಗಿಸಿ ಗುರಿ ಮುಟ್ಟಿಸಲು ಪ್ರಯತ್ನಿಸಿದರು. ಆದರೆ ಚೆಂಡು ಎಟಿಕೆ ಗೋಲು ಕಂಬಕ್ಕೆ ಬಡಿದು ಅಂಗಳದ ಆಚೆ ಹೋಯಿತು.
36ನೇ ನಿಮಿಷದಲ್ಲಿ ಚೆಟ್ರಿ ಮತ್ತೊಂದು ಅವಕಾಶ ಹಾಳು ಮಾಡಿದರು. 38ನೇ ನಿಮಿಷದಲ್ಲೂ ಬಿಎಫ್‌ಸಿ ಖಾತೆ ತೆರೆಯುವ ಅವಕಾಶ ಕಳೆದುಕೊಂಡಿತು. ಆದರೆ 39ನೇ ನಿಮಿಷದಲ್ಲಿ ಚೆಟ್ರಿ ಮೋಡಿ ಮಾಡಿದರು.

ಸಹ ಆಟಗಾರ ಒದ್ದ ಚೆಂಡನ್ನು ತಡೆದ ಅವರು ಚಾಕಚಕ್ಯತೆಯಿಂದ ಒದ್ದರು. ಅವರು ಬಾರಿಸಿದ ಚೆಂಡು ಎಟಿಕೆ ಗೋಲು ಪೆಟ್ಟಿಗೆಯ ಬಲೆಗೆ ಮುತ್ತಿಕ್ಕುತ್ತಿದ್ದಂತೆ ಅಂಗಳದಲ್ಲಿ ಮೆಕ್ಸಿಕನ್‌ ಅಲೆ ಎದ್ದಿತು. ಆ ನಂತರ ಎದುರಾಳಿಗಳ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದ ಬಿಎಫ್‌ಸಿ 1–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ಎಟಿಕೆ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿತ್ತು. ಶಂಕರ್‌ ಸಂಪಂಗಿರಾಜ್‌ ಬದಲು ಬಿಪಿನ್‌ ಸಿಂಗ್‌ ಅಂಗಳಕ್ಕಿಳಿದರು. 59ನೇ ನಿಮಿಷದಲ್ಲಿ ಎಟಿಕೆಗೆ ಸಮಬಲದ ಗೋಲು ಗಳಿಸುವ ಉತ್ತಮ ಅವಕಾಶ ಸಿಕ್ಕಿತ್ತು. ಈ ತಂಡದ ಮುಂಚೂಣಿ ವಿಭಾಗದ ಆಟಗಾರ ರಾಬರ್ಟ್‌ ಕೀನ್‌ ಬಾರಿಸಿದ ಚೆಂಡನ್ನು ಗುರುಪ್ರೀತ್‌ ಬಲಕ್ಕೆ ಜಿಗಿದು ತಡೆದಾಗ ಅಭಿಮಾನಿಗಳು ಚಪ್ಪಾಳೆ ತಟ್ಟಿ ಅವರನ್ನು ಬೆಂಬಲಿಸಿದರು. 69ನೇ ನಿಮಿಷದಲ್ಲಿ ಮಿಕು ಚೆಂಡಿನೊಂದಿಗೆ ಎದುರಾಳಿ ಗೋಲುಪೆಟ್ಟಿಗೆಯ ಸನಿಹಕ್ಕೆ ಹೋದರು ಆದರೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ.

72ನೇ ನಿಮಿಷದಲ್ಲಿ ಮಿಕು ಎದುರಾಳಿ ಆಟಗಾರನನ್ನು ಬೀಳಿಸಿದ್ದರಿಂದ ಪಂದ್ಯದ ರೆಫರಿ ಅವರಿಗೆ ಹಳದಿ ಕಾರ್ಡ್‌ನ ದರ್ಶನ ಮಾಡಿದರು. ಮಿಕು ಬದಲಿಗೆ ಅಂಗಳಕ್ಕಿಳಿದಿದ್ದ ಸ್ಪೇನ್‌ನ ಬ್ರೌಲಿಯೊ ನೊಬ್ರೆಗಾ ರಾಡ್ರಿಗಸ್‌ ಕಾಲ್ಚಳಕ ತೋರಿದರು. 78ನೇ ನಿಮಿಷದಲ್ಲಿ ಅವರು ಬಾರಿಸಿದ ಚೆಂಡು ಗೋಲುಪೆಟ್ಟಿಗೆಯ ಕಂಬಕ್ಕೆ ತಾಗಿ ಅಂಗಳದ ಆಚೆ ಸಾಗಿತು ಹೀಗಾಗಿ ಬಿಎಫ್‌ಸಿಯ ಮುನ್ನಡೆಯ ಕನಸು ಕೈಗೂಡಲಿಲ್ಲ. ಆ ನಂತರ ಎಟಿಕೆ ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಆದರೆ ಬಿಎಫ್‌ಸಿಯ ರಕ್ಷಣಾಕೋಟೆ ಭೇದಿಸಲು ಈ ತಂಡದ ಆಟಗಾರರಿಗೆ ಆಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.