ADVERTISEMENT

ಜಯದ ನಿರೀಕ್ಷೆಯಲ್ಲಿ ಪೃಥ್ವಿ ಶಾ ಬಳಗ

ಕಳೆದ ಬಾರಿಯ ರನ್ನರ್ ಅಪ್‌ ಭಾರತ ತಂಡಕ್ಕೆ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ

ಪಿಟಿಐ
Published 13 ಜನವರಿ 2018, 19:30 IST
Last Updated 13 ಜನವರಿ 2018, 19:30 IST
ಪೃಥ್ವಿ ಶಾ ಬ್ಯಾಟಿಂಗ್ ವೈಖರಿ
ಪೃಥ್ವಿ ಶಾ ಬ್ಯಾಟಿಂಗ್ ವೈಖರಿ   

ಮೌಂಟ್‌ ಮಾಂಗನೂಯಿ : ಭರವಸೆಯ ಅಲೆಯಲ್ಲಿರುವ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಭಿಯಾನವನ್ನು ಭಾನುವಾರ ಆರಂಭಿಸಲಿದೆ.

ಕಳೆದ ಬಾರಿ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ತಂಡಕ್ಕೆ ಈ ಬಾರಿ ಬ್ಯಾಟಿಂಗ್ ಮಾಂತ್ರಿಕ ರಾಹುಲ್ ದ್ರಾವಿಡ್ ತರಬೇತಿ ನೀಡಿದ್ದಾರೆ. ಪೃಥ್ವಿ ಶಾ ನಾಯಕತ್ವದಲ್ಲಿ ಪ್ರತಿಭಾವಂತ ಆಟಗಾರರು ಇರುವುದರಿಂದ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದೇ ಬಿಂಬಿತವಾಗಿದೆ. ಟೂರ್ನಿ ಆರಂಭವಾಗುವುದಕ್ಕೂ ಒಂದು ವಾರ ಮೊದಲೇ ಇಲ್ಲಿಗೆ ಬಂದಿರುವ ತಂಡ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿರುವುದು ಕೂಡ ವಿಶ್ವಾಸ ಹೆಚ್ಚಲು ಕಾರಣವಾಗಿದೆ.

ವಿಶ್ವಕಪ್‌ನಲ್ಲಿ ಭಾರತ 19 ವರ್ಷದೊಳಗಿನವರ ತಂಡ ಮೂರು ಬಾರಿ ಚಾಂಪಿಯನ್ ಆಗಿದೆ. ಕೊನೆಯದಾಗಿ 2014ರಲ್ಲಿ ಪ್ರಶಸ್ತಿ ಗೆದ್ದಿರುವ ತಂಡ ಕಳೆದ ಬಾರಿ ಫೈನಲ್‌ನಲ್ಲಿ ಎಡವಿತ್ತು. ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿರುವ ಪೃಥ್ವಿ ಶಾ ಮತ್ತು ಹಿಮಾಂಶು ರಾಣ ಬ್ಯಾಟಿಂಗ್‌ ವಿಭಾಗದ ಬೆನ್ನೆಲುಬಾಗಿದ್ದು ಶುಭಂ ಗಿಲ್‌ ಕೂಡ ಭರವಸೆ ಮೂಡಿಸಿದ್ದಾರೆ.

ADVERTISEMENT

ಅಗ್ರ ಕ್ರಮಾಂಕದ ಬ್ಯಾಟಿಂಗ್‌ಗೆ ಈ ಮೂವರು ಬಲ ತುಂಬಲಿದ್ದು ಮಧ್ಯಮ ಕ್ರಮಾಂಕದಲ್ಲಿ ಅನುಕುಲ್ ರಾಯ್‌, ಅಭಿಷೇಕ್ ಶರ್ಮಾ ಮುಂತಾದವರು ಗಮನ ಸೆಳೆಯಲಿದ್ದಾರೆ.

ಬೌಲಿಂಗ್‌ನಲ್ಲಿ ಬಂಗಾಳದ ವೇಗಿ ಈಶಾನ್‌ ‍ಪೊರೆಲ್‌ ಅವರ ಮೇಲೆ ತಂಡ ಭರವಸೆ ಇರಿಸಿದೆ. ಅವರಿಗೆ ಉತ್ತಮ ಸಹಕಾರ ನೀಡಲು ಶಿವಂ ಮಾವಿ ಕೂಡ ತಂಡದಲ್ಲಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಬಲ್ಲ ಸಾಮರ್ಥ್ ಇರುವುದು ಶಿವ ಮಾವಿ ಅವರ ವೈಶಿಷ್ಟ್ಯ. ನ್ಯೂಜಿಲೆಂಡ್ ನೆಲದಲ್ಲೂ ಮಿಂಚಲು ಅವರು ಸಜ್ಜಾಗಿದ್ದಾರೆ.

‘ಕಣದಲ್ಲಿ ಅತ್ಯುತ್ತಮ ಸಾಮರ್ಥ್ಯ ಮೆರೆಯಲು ಭಾರತ ತಂಡದ ಆಟಗಾರರಿಗೆ ಸಾಧ್ಯವಿದೆ. ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಯಾವುದೇ ತಂಡಕ್ಕೂ ಸವಾಲೊಡ್ಡಬಲ್ಲ ಆಟಗಾರರು ತಂಡದಲ್ಲಿ ಇದ್ದಾರೆ’ ಎಂದು ಕೋಚ್‌ ರಾಹುಲ್ ದ್ರಾವಿಡ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಸ್ಟ್ರೇಲಿಯಾ ತಂಡ ಕೂಡ ‍ಪರಿಣಾಮಕಾರಿ ಆಟವಾಡಬಲ್ಲ ಸಾಮರ್ಥ್ಯ ಹೊಂದಿದೆ. ನಾಯಕ ಜೇಸನ್‌ ಸಂಘಾ ಯುವ ಕ್ರಿಕೆಟ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ಟೀವ್ ವಾ ಅವರ ಪುತ್ರ ಆಸ್ಟಿನ್‌ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜೇಮ್ಸ್ ಸುಥರ್ಲೆಂಡ್‌ ಅವರ ಪುತ್ರ ಕೂಡ ಆ ತಂಡದಲ್ಲಿದ್ದು ಮೊದಲ ಪಂದ್ಯದಲ್ಲೇ ಗಮನ ಸೆಳೆಯಲು ಸಜ್ಜಾಗಿದ್ದಾರೆ.

ಲಂಕಾಗೆ ಐರ್ಲೆಂಡ್ ಸವಾಲು
ಭಾರತೀಯ ಕಾಲಮಾನ ಮುಂಜಾನೆ 3 ಗಂಟೆಗೆ ವಾಂಘರೆಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಶ್ರೀಲಂಕಾ ತಂಡ ಐರ್ಲೆಂಡ್‌ ವಿರುದ್ಧ ಸೆಣಸಲಿದೆ. ಇದೇ ಸಮಯದಲ್ಲಿ ಲಿಂಕನ್‌ ನಂ–3ಯಲ್ಲಿ ನಡೆಯುವ ಪಂದ್ಯದಲ್ಲಿ ಕೆನ್ಯಾವನ್ನು ದಕ್ಷಿಣ ಆಫ್ರಿಕಾ ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.