ADVERTISEMENT

ಪ್ರಶಸ್ತಿ ಮುಡಿಗೇರಿಸಿಕೊಂಡ ಪಂಜಾಬ್ ನ್ಯಾಷನಲ್‌ ಬ್ಯಾಂಕ್‌

ಪಿಟಿಐ
Published 21 ಜನವರಿ 2018, 19:30 IST
Last Updated 21 ಜನವರಿ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂಫಾಲ: ಕೆನರಾ ಬ್ಯಾಂಕ್‌ ತಂಡವನ್ನು ಏಕಪಕ್ಷೀಯ ಎರಡು ಗೋಲುಗಳಿಂದ ಮಣಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ತಂಡ (ಪಿಎನ್‌ಬಿ) ಹಾಕಿ ಇಂಡಿಯಾದ ಸೀನಿಯರ್‌ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನ ಬಿ ಡಿವಿಷನ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಉಭಯ ತಂಡಗಳು ರಕ್ಷಣೆಗೆ ಒತ್ತು ನೀಡಿದ ಕಾರಣ ಗೋಲುಗಳು ಮೂಡಿಬರಲಿಲ್ಲ. ಹೀಗಾಗಿ 0–0 ಸಮಬಲದಿಂದ ವಿರಾಮಕ್ಕೆ ತೆರಳಿದವು. ಆದರೆ 38ನೇ ನಿಮಿಷದಲ್ಲಿ ಸುಖ್‌ಜೀತ್ ಸಿಂಗ್‌ ಗೋಲು ಗಳಿಸಿ ಪಿಎನ್‌ಬಿಗೆ ಮುನ್ನಡೆ ಗಳಿಸಿಕೊಟ್ಟರು. ಪ್ರತಿ ದಾಳಿ ನಡೆಸಲು ಕೆನರಾ ಬ್ಯಾಂಕ್ ನಡೆಸಿದ ಶ್ರಮಕ್ಕೆ ಪಿಎನ್‌ಬಿಯ ರಕ್ಷಣಾ ವಿಭಾಗ ಅನುವು ಮಾಡಿಕೊಡಲಿಲ್ಲ.

ಆದರೆ ಈ ತಂಡದ ಆಕ್ರಮಣ ವಿಭಾಗ ಮತ್ತಷ್ಟು ‍ಪ್ರಬಲ ಆಕ್ರಮಣ ನಡೆಸಲು ಮುಂದಾಯಿತು. ಹೀಗಾಗಿ 57ನೇ ನಿಮಿಷದಲ್ಲಿ ತಂಡಕ್ಕೆ ಮತ್ತೊಂದು ಗೋಲು ಗಳಿಸಲು ಸಾಧ್ಯವಾಯಿತು. ಸತೇಂದರ್ ದಲಾಲ್‌ ಮೋಹಕ ಗೋಲು ಗಳಿಸಿ ಮುನ್ನಡೆಯನ್ನು 2–0ಗೆ ಏರಿಸಿದರು.

ADVERTISEMENT

ಬಿಎಚ್‌ಎಗೆ ನಾಲ್ಕನೇ ಸ್ಥಾನ: ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸೆಂಟ್ರಲ್ ಸೆಕ್ರೆಟರಿಯೇಟ್ ತಂಡ ಬೆಂಗಳೂರು ಹಾಕಿ ಅಸೋಷಿಯೇಷನ್‌ ವಿರುದ್ಧ 10–1 ಅಂತರದ ಜಯ ದಾಖಲಿಸಿತು. ಮೊದಲ ಕ್ವಾರ್ಟರ್‌ನಲ್ಲಿ ಉಭಯ ತಂಡದವರು ಸಮಬಲದಿಂದ ಕಾದಾಡಿದರು. ಅವಕಾಶಗಳನ್ನೂ ಕೈಚೆಲ್ಲಿದರು.

ಎರಡನೇ ಕ್ವಾರ್ಟರ್‌ನಲ್ಲಿ ಶಂಕರ್‌ ಸಿದ್ಧಾರ್ಥ್‌ (22ನೇ ನಿಮಿಷ), ಶಂಕರ್‌ ಪಾಟೀಲ್‌ (23) ಹಾಗೂ ತಿಮ್ಮಣ್ಣ ಎಸ್‌.ಪುಲಿಯಂಡ (30) ಸೆಂಟ್ರಲ್ ಸೆಕ್ರೆಟರಿಯೇಟ್‌ಗೆ ಗೋಲು ತಂದಿತ್ತರು. ಮೂರನೇ ಕ್ವಾರ್ಟರ್‌ನಲ್ಲೂ ತಿಮ್ಮಣ್ಣ ಎರಡು ಗೋಲು ಗಳಿಸಿದರು. 31 ಮತ್ತು 39ನೇ ನಿಮಿಷಗಳಲ್ಲಿ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದ ಅವರು ತಂಡದ ಮುನ್ನಡೆಯನ್ನು 5–0ಗೆ ಏರಿಸಿದರು.

57ನೇ ನಿಮಿಷದಲ್ಲೂ ತಿಮ್ಮಣ್ಣ ಗೋಲು ಗಳಿಸಿದರು. ಧರಂಬೀರ್ ಯಾದವ್‌ (44, 54 ಹಾಗೂ 58) ಮತ್ತು ಮುತ್ತಣ್ಣ ಬೊವೆರಿಯಂಡ (51) ಇತರ ನಾಲ್ಕು ಗೋಲುಗಳನ್ನು ಗಳಿಸಿದರು. ಬೆಂಗಳೂರು ತಂಡದ ಪರ ಏಕೈಕ ಗೋಲು ರಮಾಶಂಕರ್‌ 56ನೇ ನಿಮಿಷದಲ್ಲಿ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.