ADVERTISEMENT

ಅರ್ಚನಾ ಕಾಮತ್‌ಗೆ ಎರಡು ಚಿನ್ನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಪ್ರಶಸ್ತಿಯೊಂದಿಗೆ ಅರ್ಚನಾ ಕಾಮತ್‌
ಪ್ರಶಸ್ತಿಯೊಂದಿಗೆ ಅರ್ಚನಾ ಕಾಮತ್‌   

ಬೆಂಗಳೂರು: ಕರ್ನಾಟಕದ ಅರ್ಚನಾ ಕಾಮತ್‌ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದ 79ನೇ ರಾಷ್ಟ್ರೀಯ ಜೂನಿಯರ್ ಮತ್ತು ಯೂತ್ ನ್ಯಾಷನಲ್ ಅಂತರ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

17 ವರ್ಷದ ಅರ್ಚನಾ ಇಲ್ಲಿ ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್‌ (ಪಿಎಸ್‌ಪಿಬಿ) ತಂಡವನ್ನು ಪ್ರತಿನಿಧಿಸಿದ್ದರು. ಜೂನಿಯರ್ ಬಾಲಕಿಯರು ಹಾಗೂ ಯೂತ್ ಬಾಲಕಿಯರ ವಿಭಾಗಗಳಲ್ಲಿ ಚಿನ್ನ ಗೆಲ್ಲುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

18 ವರ್ಷದೊಳಗಿನವರ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಅರ್ಚನಾ 4–3ರಲ್ಲಿ ಪಶ್ಚಿಮ ಬಂಗಾಳದ ಸುರಭಿ ಪತ್ವಾರಿ ಅವರನ್ನು ಮಣಿಸಿದರು. ಹೋದ ವರ್ಷ ವಡೋದರಾದಲ್ಲಿ ನಡೆದ ಟೂರ್ನಿಯಲ್ಲಿಯೂ ಅರ್ಚನಾ ಈ ವಿಭಾಗದಲ್ಲಿ ಚಾಂಪಿಯನ್ ಆಗಿದ್ದರು.

ADVERTISEMENT

21 ವರ್ಷದೊಳಗಿನವರ ಯೂತ್ ಬಾಲಕಿಯರ ವಿಭಾಗದಲ್ಲಿ ಅರ್ಚನಾ 4–1ರಲ್ಲಿ ಪಶ್ಚಿಮ ಬಂಗಾಳದ ಹಾಲಿ ಚಾಂಪಿಯನ್‌ ಮೌಮಿತಾ ದತ್ತಾ ಎದುರು ಗೆದ್ದರು.

ಯೂತ್ ಬಾಲಕಿಯರ ವಿಭಾಗದಲ್ಲಿ ಅರ್ಚನಾ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಎರಡೂ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಅಪರೂಪದ ಸಾಧನೆಯನ್ನು ಅವರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.