ADVERTISEMENT

ಅಪೌಷ್ಟಿಕತೆಯೇ ದೊಡ್ಡ ಸವಾಲು

ಪಿಟಿಐ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST

ನವದೆಹಲಿ: ಮಗು ಮತ್ತು ತಾಯಿಯ ಅಪೌಷ್ಟಿಕತೆಯೇ ಭಾರತವು ಆರೋಗ್ಯ ಕ್ಷೇತ್ರದಲ್ಲಿ ಎದುರಿಸುತ್ತಿರುವ ಅತಿ ದೊಡ್ಡ ಸವಾಲು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ವಾಯು ಮಾಲಿನ್ಯ, ಆಹಾರದ ಸಮಸ್ಯೆಗಳು, ಅತಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ದೇಶವನ್ನು ಕಾಡುತ್ತಿರುವ ಇತರ ಆರೋಗ್ಯ ಸಮಸ್ಯೆಗಳಾಗಿವೆ.

ವ್ಯಕ್ತಿಯ ಆರೋಗ್ಯ ಸ್ಥಿತಿಯಲ್ಲಿ ಗಣನೀಯ ಸುಧಾರಣೆ ಆಗಿದೆ ಎಂಬುದನ್ನು ಸಮೀಕ್ಷೆ ಗುರುತಿಸಿದೆ. 1990ರಿಂದ 2015ರ ಅವಧಿಯಲ್ಲಿ ವ್ಯಕ್ತಿಯ ಜೀವಿತಾವಧಿಯು ಸುಮಾರು ಹತ್ತು ವರ್ಷಗಳಷ್ಟು ಏರಿಕೆಯಾಗಿದೆ.

ADVERTISEMENT

ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ದೊರೆಯುತ್ತಿಲ್ಲ ಎಂಬುದು ಕಳವಳಕಾರಿ ಸಂಗತಿ. ಇದರಿಂದಾಗಿ ರೋಗ ನಿಯಂತ್ರಣ ವಿಳಂಬವಾಗುತ್ತದೆ ಅಥವಾ ಅಸಮರ್ಪಕ ಚಿಕಿತ್ಸೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಆರೋಗ್ಯ ಸೇವೆಗಳಿಗಾಗಿ ಜನರು ತಮ್ಮ ಆದಾಯದಿಂದ ಭರಿಸುವ ವೆಚ್ಚದ ಪ್ರಮಾಣ ಶೇ 62ರಷ್ಟಿದೆ. ಇದು ಬಡವರನ್ನು ಕಷ್ಟಕ್ಕೆ ದೂಡುವುದಲ್ಲದೆ, ಅಸಮಾನತೆ ಹೆಚ್ಚುವುದಕ್ಕೂ ಕಾರಣವಾಗುತ್ತದೆ.

ದರ ಅಸಮಾನತೆ: ಆರೋಗ್ಯ ಪರೀಕ್ಷೆಗಳು ಮತ್ತು ಚಿಕಿತ್ಸೆಗೆ ದೇಶದ ವಿವಿಧ ನಗರಗಳಲ್ಲಿ ನೀಡಬೇಕಿರುವ ಶುಲ್ಕದಲ್ಲಿ ಭಾರಿ ವ್ಯತ್ಯಾಸ ಇದೆ. ನಿರ್ದಿಷ್ಟ ಪರೀಕ್ಷೆಗೆ ನಿಗದಿತ ದರ ನಿಗದಿ ಮಾನದಂಡ ಅಭಿವೃದ್ಧಿಪಡಿಸಬೇಕಿದೆ. ಹಾಗೆಯೇ ಗುಣಮಟ್ಟದ ಮಾನದಂಡವನ್ನೂ ರೂಪಿಸಬೇಕಿದೆ.

ದೇಶದಲ್ಲಿನ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ನಿಯಂತ್ರಣಕ್ಕಾಗಿ ಚಿಕಿತ್ಸಾಲಯ (ನೋಂದಣಿ ಮತ್ತು ನಿಯಂತ್ರಣ) ಕಾಯ್ದೆ 2010ರ ಅಧಿಸೂಚನೆ ಹೊರಡಿಸಲಾಗಿದೆ. ಚಿಕಿತ್ಸಾಲಯ (ಕೇಂದ್ರ ಸರ್ಕಾರ) ನಿಯಮಗಳು 2012 ಜಾರಿಗೆ ಬಂದಿದೆ. ಈ ಕಾಯ್ದೆ ಮತ್ತು ನಿಯಮಗಳನ್ನು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಜಾರಿಗೆ ತಂದಿವೆ. ಉಳಿದ ರಾಜ್ಯಗಳು ಈ ಕಾಯ್ದೆ ಮತ್ತು ನಿಯಮಗಳಿಗೆ ಅನುಗುಣವಾದ ಕಾಯ್ದೆ ರೂಪಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.