ADVERTISEMENT

ಫೈನಲ್‌ ಕನಸಿನಲ್ಲಿ ಭಾರತ

ಪಾಕಿಸ್ತಾನ ವಿರುದ್ಧದ ಸೆಮಿಫೈನಲ್‌ ಪಂದ್ಯ ಇಂದು

ಪಿಟಿಐ
Published 29 ಜನವರಿ 2018, 19:30 IST
Last Updated 29 ಜನವರಿ 2018, 19:30 IST
ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿರುವ ಶುಭ್‌ಮನ್‌ ಗಿಲ್ ಮೇಲೆ ಭಾರತ ತಂಡ ಭರವಸೆ ಇರಿಸಿದೆ
ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಮಾಡಿರುವ ಶುಭ್‌ಮನ್‌ ಗಿಲ್ ಮೇಲೆ ಭಾರತ ತಂಡ ಭರವಸೆ ಇರಿಸಿದೆ   

ಕ್ರೈಸ್ಟ್ ಚರ್ಚ್‌, ನ್ಯೂಜಿಲೆಂಡ್‌: ಅಜೇಯ ಓಟ ಮುಂದುವರಿಸಿರುವ ಭಾರತ ತಂಡದವರು 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಮಂಗಳವಾರ ಪಾಕಿಸ್ತಾನವನ್ನು ಎದುರಿಸುವರು.

ಐಪಿಎಲ್‌ಗೆ ಸಂಬಂಧಿಸಿ ಭಾನು ವಾರ ಮುಕ್ತಾಯಗೊಂಡ ಹರಾಜು ಪ್ರಕ್ರಿಯೆಯಲ್ಲಿ ವಿವಿಧ ಫ್ರಾಂಚೈಸ್‌ಗಳ ಪಾಲಾದ ಭಾರತದ ಯುವ ಆಟಗಾರರು ಹೆಚ್ಚು ಮಿಂಚಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಪಂದ್ಯದ ಬಗ್ಗೆ ಕುತೂಹಲ ಹೆಚ್ಚಿದೆ.

ಮೂರು ಬಾರಿ ಚಾಂಪಿಯನ್ ಆಗಿ ರುವ ಭಾರತ ತಂಡ ಪೃಥ್ವಿ ಶಾ ನಾಯಕತ್ವದಲ್ಲಿ ಇಲ್ಲಿಯ ವರೆಗೆ ಅತ್ಯುತ್ತಮ ಆಟ ಆಡಿದ್ದು ಲೀಗ್ ಹಂತದ ಮೂರು ಪಂದ್ಯಗಳು ಮತ್ತು ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏಕಪಕ್ಷೀಯ ಜಯ ಸಾಧಿಸಿದೆ.

ADVERTISEMENT

ಎರಡು ಬಾರಿ ಚಾಂಪಿಯನ್ ಆಗಿರುವ ಪಾಕಿಸ್ತಾನ ಈ ಬಾರಿಯ ಟೂರ್ನಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಅಫ್ಗಾನಿಸ್ಥಾನ ವಿರುದ್ಧದ ಸೋಲಿನೊಂದಿಗೆ ಅಭಿಯಾನ ಆರಂಭಿಸಿದ ತಂಡ ನಂತರ ಮೂರು ಪಂದ್ಯಗಳನ್ನು ಗೆದ್ದು ಸೆಮಿಗೆ ಪ್ರವೇಶಿ ಸಿತ್ತು. ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಪ್ರಯಾಸದಿಂದ ಗೆದ್ದಿತ್ತು. ಹೀಗಾಗಿ ಭಾರತಕ್ಕೆ ಪಾಕಿಸ್ತಾನ ಸುಲಭ ತುತ್ತಾಗುವ ಸಾಧ್ಯತೆ ಇದೆ.

ಪರಿಣಾಮ ಬೀರುವುದೇ ಐಪಿಎಲ್‌ ಹರಾಜು?: ವಿಶ್ವಕಪ್ ಆಡುತ್ತಿರುವವರ ಪೈಕಿ ಆರು ಮಂದಿಗೆ ಐಪಿಎಲ್ ಹರಾಜಿನಲ್ಲಿ ಉತ್ತಮ ಬೆಲೆ ಸಿಕ್ಕಿದೆ.

ನಾಗರಕೋಟಿ ಮತ್ತು ಮಾವಿ ಅವರನ್ನು ಕೆ.ಕೆ.ಆರ್‌ ಫ್ರಾಂಚೈಸ್‌ ತಲಾ ₹ 3.2 ಮತ್ತು ₹ 3 ಕೋಟಿ ನೀಡಿ ಖರೀದಿಸಿದೆ. ಎಡಗೈ ಸ್ಪಿನ್ನರ್‌ಗಳಾದ ಅನುಕೂಲ್ ರಾಯ್ ಮತ್ತು ಅಭಿಷೇಕ್ ಶರ್ಮಾ, ಆರಂಭಿಕ ಬ್ಯಾಟ್ಸ್‌ಮನ್‌ ಮನೋಜ್ ಕಾರ್ಲಾ ಅವರನ್ನು ಕ್ರಮವಾಗಿ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಡೇರ್‌ ಡೆವಿಲ್ಸ್‌ ಖರೀದಿಸಿದೆ.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 86 ರನ್‌ ಗಳಿಸಿ ಪಂದ್ಯ ಗೆಲ್ಲಿಸಿದ ಶುಭ್‌ಮನ್ ಗಿಲ್ ಟೂರ್ನಿಯಲ್ಲಿ ತಂಡದ ಪರ ಅತಿ ಹೆಚ್ಚು (239)  ಕಲೆ ಹಾಕಿದ ಆಟಗಾರ ಎನಿಸಿದ್ದಾರೆ. ಅವರಿಗೆ ಕೆ.ಕೆ.ಆರ್‌ ₹ 1.8 ಕೋಟಿ ನೀಡಿದೆ. ನಾಯಕ ಪೃಥ್ವಿ ಶಾಗೆ ಮುಂಬೈ ಇಂಡಿಯನ್ಸ್‌ ₹ 1.2 ಕೋಟಿ ನೀಡಿದೆ. ಈಗಾಗಲೇ ಟೂರ್ನಿಯಲ್ಲಿ ಮಿಂಚು ಹರಿಸಿರುವ ಈ ಆಟಗಾರರು ಮಿಫೈನಲ್‌ನಲ್ಲಿ ಯಾವ ರೀತಿ ಸಾಮರ್ಥ್ಯ ಮೆರೆಯುವರು ಎಂಬುದನ್ನು ಕಾದು ನೋಡಬೇಕು.

ಆರಂಭ: ಮುಂಜಾನೆ 3.00 (ಭಾರತೀಯ ಕಾಲಮಾನ).
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.
**
ಫೈನಲ್‌ಗೆ ಆಸ್ಟ್ರೇಲಿಯಾ

ಕ್ರೈಸ್ಟ್‌ ಚರ್ಚ್‌: ಅಫ್ಗಾನಿಸ್ತಾನದ ಕನಸನ್ನು ನುಚ್ಚುನೂರು ಮಾಡಿದ ಆಸ್ಟ್ರೇಲಿಯಾ ತಂಡ 19 ವರ್ಷದೊಳಗಿನವರ ವಿಶ್ವಕಪ್‌ನ ಫೈನಲ್‌ಗೆ ಪ್ರವೇಶಿಸಿತು.

ಸಂಕ್ಷಿಪ್ತ ಸ್ಕೋರ್‌ ಅಫ್ಗಾನಿಸ್ತಾನ: 48 ಓವರ್‌ಗಳಲ್ಲಿ 181 (ಇಕ್ರಂ ಅಲಿ ಖಿಲ್‌ 80, ಗುರ್ಬಾಜ್‌ 29; ಜೆ.ಮೆರ್ಲೊ 24ಕ್ಕೆ4, ಇವಾನ್ಸ್‌ 26ಕ್ಕೆ2); ಆಸ್ಟ್ರೇಲಿಯಾ: 37.3 ಓವರ್‌ಗಳಲ್ಲಿ 4ಕ್ಕೆ182 (ಎಡ್ವರ್ಡ್ಸ್‌ 72, ಪಿ. ಉಪ್ಪಲ್‌ 32; ಅಹಮ್ಮದ್‌ 35ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾಗೆ 6 ವಿಕೆಟ್ ಜಯ; ಫೈನಲ್‌ಗೆ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.