ADVERTISEMENT

ಶುಭಾರಂಭಕ್ಕೆ ಭಾರತ ಕಾತರ

ದಕ್ಷಿಣ ಆಫ್ರಿಕಾ ಎದುರಿಸಲಿರುವ ಮಿಥಾಲಿ ರಾಜ್ ಪಡೆ

ಪಿಟಿಐ
Published 4 ಫೆಬ್ರುವರಿ 2018, 19:12 IST
Last Updated 4 ಫೆಬ್ರುವರಿ 2018, 19:12 IST
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಗೆಲ್ಲುವ ವಿಶ್ವಾಸ ಹೊಂದಿದೆ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ಗೆಲ್ಲುವ ವಿಶ್ವಾಸ ಹೊಂದಿದೆ   

ಕಿಂಬರ್ಲಿ: ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ  ಅಮೋಘ ಸಾಧನೆ ಮಾಡಿದ ಭಾರತ ಮಹಿಳಾ ತಂಡದವರು ಏಳು ತಿಂಗಳ ಅವಧಿಯ ನಂತರ ಮತ್ತೊಂದು ಸವಾಲಿಗೆ ಸಜ್ಜಾಗಿದ್ದಾರೆ. ದಕ್ಷಿಣ ಆಫ್ರಿಕಾ ಮಹಿಳೆಯರ ತಂಡದ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ಸೋಮವಾರ ನಡೆಯಲಿದ್ದು ಭಾರತ ಶುಭಾರಂಭದ ನಿರೀಕ್ಷೆಯಲ್ಲಿದೆ.

ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ಚಾಂಪಿಯನ್‌ಷಿಪ್‌ಗೆ ಸಂಬಂಧಿಸಿದ ಮೊದಲ ಸುತ್ತಿನ ಸರಣಿ ಇದಾಗಿದ್ದು ಮೂರು ಪಂದ್ಯಗಳ ಸರಣಿಯಲ್ಲಿ ಗೆಲ್ಲುವ ತಂಡ 2021ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯಲಿದೆ.

ಮಿಥಾಲಿರಾಜ್ ನೇತೃತ್ವದ ಭಾರತ ತಂಡಕ್ಕೆ ವಿಶ್ವಕಪ್‌ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಆದ್ದರಿಂದ ಲಯಕ್ಕೆ ಮರಳುವುದು ತಂಡಕ್ಕೆ ಸವಾಲಾಗಲಿದೆ. ವಿಶ್ವಕಪ್‌ನಲ್ಲಿ ರನ್ನರ್ ಅಪ್‌ ಆದ ತಂಡ ಎಂಬ ಕಾರಣಕ್ಕೆ ಉತ್ತಮ ಸಾಮರ್ಥ್ಯ ತೋರಬೇಕಾದ ಹೊಣೆ ತಂಡಕ್ಕಿದೆ.

ADVERTISEMENT

‘ಮಹಿಳಾ ಕ್ರಿಕೆಟ್, ಅದರಲ್ಲೂ ಭಾರತ ತಂಡವನ್ನು ಜನರು ಈಗ ವಿಶೇಷವಾಗಿ ಗಮನಿಸುತ್ತಿದ್ದಾರೆ. ಆದ್ದರಿಂದ ಪ್ರತಿ ಪಂದ್ಯದಲ್ಲೂ ಉತ್ತಮ ಆಟ ಆಡಬೇಕಾದ ಅಗತ್ಯವಿದೆ’ ಎಂದು ಮಿಥಾಲಿ ರಾಜ್ ಅಭಿಪ್ರಾಯಪಟ್ಟರು.

‘ವಿಶ್ವಕಪ್‌ ನಂತರದ ಮೊದಲ ಟೂರ್ನಿ ಇದು. ಬಲಿಷ್ಠ ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಸಾಧನೆ ಮಾಡುವ ಭರವಸೆ ಇದೆ’ ಎಂದು ಅವರು ಹೇಳಿದರು.

ವಿಶ್ವಕಪ್‌ನ ಲೀಗ್ ಹಂತದಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ 115 ರನ್‌ಗಳಿಂದ ಮಣಿಸಿತ್ತು. ಈ ಸೋಲಿಗೆ ಪ್ರತೀಕಾರ ತೀರಿಸುವ ಅವಕಾಶ ಈಗ ಭಾರತ ತಂಡಕ್ಕೆ ಒದಗಿದೆ.

‘ಹಿಂದಿನ ಪಂದ್ಯದ ಸೋಲು–ಗೆಲು ವಿನ ಲೆಕ್ಕಾಚಾರ ಈಗ ಅನಗತ್ಯ. ಈಗ ಹೊಸದಾಗಿ ಸರಣಿಗೆ ಸಜ್ಜಾಗಬೇಕಿದೆ. ವಿಶ್ವಕಪ್‌ನಲ್ಲಿ ಆಡಿದ ಅನುಭವಿ ಆಟಗಾರ್ತಿಯರು ತಂಡದಲ್ಲಿದ್ದು ಭರವಸೆಯಲ್ಲಿ ದ್ದಾರೆ’ ಎಂದು ದಕ್ಷಿಣ ಆಫ್ರಿಕಾ ನಾಯಕಿ ಡೇನ್ ವ್ಯಾನ್ ನೀಕರ್ಕ್‌ ಹೇಳಿದರು.

ಜೆಮಿಮಾ ರಾಡ್ರಿಗಸ್‌ ಮೇಲೆ ಕಣ್ಣು: ಮುಂಬೈನ 17ರ ಹರಯದ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಮೇಲೆ ಸರಣಿಯಲ್ಲಿ ಎಲ್ಲರ ಕಣ್ಣು ನೆಟ್ಟಿದೆ. ದೇಶಿ ಕ್ರಿಕೆಟ್‌ನಲ್ಲಿ  ಉತ್ತಮ ಸಾಧನೆ ಮಾಡಿರುವ ಅವರು ಭಾರತ ತಂಡದ ಪರವಾಗಿ ಮಿಂಚುವರೇ ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.