ADVERTISEMENT

ದಕ್ಷಿಣ ಆಫ್ರಿಕಾ ಆಟಗಾರರು ಗೆಲುವಿಗೆ ಅರ್ಹರು: ಕೊಹ್ಲಿ

ಪಿಟಿಐ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಜೊಹಾನ್ಸ್‌ಬರ್ಗ್‌: ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಗೆದ್ದಿದೆ. ಉತ್ತಮ ಪೈಪೋಟಿ ನಡೆಸಿದ ತಂಡದ ಆಟಗಾರರು ಗೆಲುವಿಗೆ ಅರ್ಹರು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಮೊದಲ ಮೂರು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದ್ದ ಭಾರತ ನಾಲ್ಕನೇ ಪಂದ್ಯವನ್ನು ಕೂಡ ಗೆಲ್ಲುವ ನೆಚ್ಚಿನ ತಂಡ ಎನಿಸಿತ್ತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಎದುರಾಳಿ ತಂಡ ಅದರ ಲಾಭ ಪಡೆದುಕೊಂಡಿತು. ಇದರಿಂದ ಆರು ಪಂದ್ಯಗಳ ಸರಣಿಯನ್ನು ಸಮಬಲ ಮಾಡಿಕೊಳ್ಳುವ ಅವಕಾಶ ದಕ್ಷಿಣ ಆಫ್ರಿಕಾ ತಂಡಕ್ಕೆ ಸಿಕ್ಕಿದೆ.

‘ಎದುರಾಳಿ ತಂಡ ಗುಣಮಟ್ಟದ ಆಟ ಆಡಿತು. ಮೊದಲ ವಿರಾಮದ ವೇಳೆ ಭಾರತ 16.3 ಓವರ್‌ಗಳಲ್ಲಿ ಕೇವಲ 89ರನ್‌ ದಾಖಲಿಸಿತ್ತು. ಆ ನಂತರ ಅಜಿಂಕ್ಯ ರಹಾನೆ ಹಾಗೂ ಶಿಖರ್ ಧವನ್ ಉತ್ತಮ ಇನಿಂಗ್ಸ್ ಕಟ್ಟಿದ್ದರು’ ಎಂದು ಕೊಹ್ಲಿ ಹೇಳಿದ್ದಾರೆ.

ADVERTISEMENT

ಮಳೆಯಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ 28 ಓವರ್‌ಗಳಲ್ಲಿ 202 ರನ್ ದಾಖಲಿಸುವ ಗುರಿ ನೀಡಲಾಗಿತ್ತು. ಈ ಗುರಿಯನ್ನು ಎದುರಾಳಿ ತಂಡ 25.3 ಓವರ್‌ಗಳಲ್ಲಿಯೇ 5 ವಿಕೆಟ್‌ ಕಳೆದುಕೊಂಡು ತಲುಪಿತ್ತು.

‘ದಕ್ಷಿಣ ಆಫ್ರಿಕಾ ತಂಡ ಅಭೂತಪೂರ್ವವಾಗಿ ಗುರಿಯನ್ನು ಬೆನ್ನಟ್ಟಿತು. ಟ್ವೆಂಟಿ–20 ಮಾದರಿಯಲ್ಲಿ ಆಡುತ್ತಿದ್ದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ನಮ್ಮ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಡೇವಿಡ್ ಮಿಲ್ಲರ್ ಪ್ರಭಾವಶಾಲಿಯಾಗಿ ಆಡಿದರು’ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪಿಂಕ್‌ಡೇಯಲ್ಲಿ ದಕ್ಷಿಣ ಆಫ್ರಿಕಾ ಅಜೇಯ

ನಿಧಾನಗತಿಯ ಓವರ್‌ ದಕ್ಷಿಣ ಆಫ್ರಿಕಾಗೆ ದಂಡ
ಜೊಹಾನ್ಸ್‌ಬರ್ಗ್‌:
  ಭಾರತ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಆರೋಪಕ್ಕೆ ಒಳ ಗಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ದಂಡ ವಿಧಿಸಲಾಗಿದೆ.

ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಐದು ವಿಕೆಟ್‌ಗಳಿಂದ ಗೆದ್ದಿತ್ತು. ಆರು ಪಂದ್ಯಗಳ ಸರಣಿಯಲ್ಲಿ ಈ ತಂಡಕ್ಕೆ ಸಿಕ್ಕ ಮೊದಲ ಗೆಲುವು ಇದಾಗಿದೆ.

ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್‌ ಅವರು ಏಡನ್‌ ಮಾರ್ಕರಮ್‌ ಬಳಗಕ್ಕೆ ದಂಡ ವಿಧಿಸಿದ್ದಾರೆ. ನಿಗಧಿತ ಸಮಯಕ್ಕೆ ಸರಿಯಾಗಿ ಪಂದ್ಯ ಮುಗಿಸಲು ಸಾಧ್ಯವಾಗಿಲ್ಲ.

ಒಂದು ಓವರ್‌ ತಡವಾಗಿ ಬೌಲಿಂಗ್ ಮಾಡಲಾಗಿದೆ ಎಂದು ರೆಫರಿ ದೂರು ನೀಡಿದ್ದಾರೆ. ಐಸಿಸಿ ನಿಯಮದ ಪ್ರಕಾರ ತಂಡದ ನಾಯಕನಿಗೆ ಪಂದ್ಯ ಸಂಭಾವನೆಯ ಶೇ 20ರಷ್ಟು ಹಾಗೂ ಉಳಿದ ಆಟಗಾರರ ಮೇಲೆ ಶೇ 10ರಷ್ಟು ದಂಡ ವಿಧಿಸಲಾಗಿದೆ.

ತಮ್ಮದೇ ನಾಯಕತ್ವದಲ್ಲಿ ಮಾರ್ಕರಮ್‌ ಅವರು ಒಂದು ವರ್ಷದೊಳಗೆ ಮತ್ತೊಮ್ಮೆ ಇದೇ ತಪ್ಪು ಮರುಕಳಿಸಿದರೆ ಅಮಾನತು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.