ADVERTISEMENT

ಪಾಕ್ ಕ್ರಿಕೆಟಿಗ ಆತ್ಮಹತ್ಯೆ

ಪಿಟಿಐ
Published 20 ಫೆಬ್ರುವರಿ 2018, 19:30 IST
Last Updated 20 ಫೆಬ್ರುವರಿ 2018, 19:30 IST

ಕರಾಚಿ (ಪಿಟಿಐ): ಆಯ್ಕೆ ಪ್ರಕ್ರಿಯೆಗೆ ಅಸಮಾಧಾನಗೊಂಡು ಕೋಚ್‌ಗಳ ಜೊತೆ ಜಗಳವಾಡಿದ 19 ವರ್ಷದೊಳಗಿನವರ ವಿಭಾಗದ ಕ್ರಿಕೆಟ್ ಆಟಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‌ಮಾಜಿ ಕ್ರಿಕೆಟಿಗ ಅಮೀರ್ ಹನೀಫ್‌ ಅವರ ಪುತ್ರ ಮುಹಮ್ಮದ್ ಜರ್ಯಾಬ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದವರು. ಇವರು ರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿ ಕರಾಚಿ ನಗರವನ್ನು ಪ್ರತಿನಿಧಿಸಿದ್ದರು.

‘ಕಳೆದ ರಾತ್ರಿ ಜೊತೆಯಾಗಿ ಊಟ ಮಾಡಿದ್ದೆವು. ಮುಹಮ್ಮದ್‌ ತುಂಬ ಒತ್ತಡಕ್ಕೆ ಒಳಗಾಗಿದ್ದ. ಕ್ರಿಕೆಟಿಗರು ನಾಲಾಯಕ್ ವ್ಯಕ್ತಿಗಳು ಎಂದು ಆತ ದೂರಿದ್ದ. ಆಗ ಅವನ ಮನಸ್ಸಿನಲ್ಲಿ ಏನಿತ್ತು ಎಂದು ನನಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ’ ಎಂದು ಅಮೀರ್ ಹನೀಫ್‌ ಹೇಳಿದ್ದಾರೆ.

‘ಎರಡು ತಿಂಗಳ ಹಿಂದೆ ಕರಾಚಿ ಜೂನಿಯರ್ ತಂಡದ ಜೊತೆ ಆತ ಲಾಹೋರ್‌ಗೆ ತೆರಳಿದ್ದ. ಆದರೆ ತೋಳಿನಲ್ಲಿ ನೋವು ಇದೆ ಎಂದು
ಹೇಳಿ ಆತನನ್ನು ವಾಪಸ್ ಕಳುಹಿಸಲಾಗಿತ್ತು. ಇದರಿಂದ ಆತ ಬೇಸರಗೊಂಡಿದ್ದ’ ಎಂದು ಹನೀಫ್‌ ದೂರಿದರು.

ADVERTISEMENT

‘ಕ್ರಿಕೆಟ್‌ ಅನ್ನು ಆಟವಾಗಿ ಕಾಣಬೇಕು. ನನ್ನ ಮಗನಿಗೆ ಆದ ಗತಿ ಬೇರೆ ಯಾರಿಗೂ ಆಗಬಾರದು’ ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.