ADVERTISEMENT

ಸೈನಾ ನೆಹ್ವಾಲ್‌ಗೆ ಕಠಿಣ ಸವಾಲು

ಆಲ್‌ ಇಂಗ್ಲೆಂಡ್‌ ಓಪನ್ ಬ್ಯಾಡ್ಮಿಂಟನ್‌ ಡ್ರಾ ಪ್ರಕಟ: ಶ್ರೀಕಾಂತ್‌ಗೆ ಲೆವರ್ಡೆಸ್‌, ಸಿಂಧುಗೆ ಪೊರ್ನಪವೆ ಎದುರಾಳಿ

ಪಿಟಿಐ
Published 22 ಫೆಬ್ರುವರಿ 2018, 19:30 IST
Last Updated 22 ಫೆಬ್ರುವರಿ 2018, 19:30 IST
ಸೈನಾ ನೆಹ್ವಾಲ್‌ಗೆ ಕಠಿಣ ಸವಾಲು
ಸೈನಾ ನೆಹ್ವಾಲ್‌ಗೆ ಕಠಿಣ ಸವಾಲು   

ಬರ್ಮಿಂಗ್‌ಹ್ಯಾಮ್‌ (ಪಿಟಿಐ): ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಆಲ್‌ ಇಂಗ್ಲೆಂಡ್ ಓಪನ್ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾ ನದಲ್ಲಿರುವ ತೈ ಜು ಯಿಂಗ್ ಅವರ ಸವಾಲು ಎದುರಿಸಲಿದ್ದಾರೆ. ಪಿ.ವಿ ಸಿಂಧು ಥಾಯ್ಲೆಂಡ್‌ನ ಪೊರ್ನಪವೆ ಚೊಚುವಾಂಗ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಮಾರ್ಚ್‌ 14ರಿಂದ 18ರವರೆಗೆ ನಡೆಯುವ ಟೂರ್ನಿಗೆ ಗುರುವಾರ ಡ್ರಾ ಪ್ರಕಟಿಸಲಾಗಿದೆ. ಸೈನಾಗೆ ಮೊದಲ ಸುತ್ತಿನಲ್ಲಿ ಕಠಿಣ ಸವಾಲು ಎದುರಾಗಿದೆ. 2015ರ ಫೈನಲ್‌ ಪಂದ್ಯದಲ್ಲಿ ತೈ ಜು ಎದುರು ಸೋತಿದ್ದರು.

ಎರಡನೇ ಸುತ್ತಿನಲ್ಲಿ ಸಿಂಧುಗೆ ಅಮೆರಿಕದ ಬೈವಾನ್ ಜಾಂಗ್ ಎದುರಾಗುವ ಸಾಧ್ಯತೆ ಇದೆ. ಇಂಡಿಯಾ ಓಪನ್‌ ಫೈನಲ್‌ನಲ್ಲಿ ಜಾಂಗ್‌ ಎದುರು ಸಿಂಧು ಸೋತಿದ್ದರು.

ADVERTISEMENT

ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಕಿದಂಬಿ ಶ್ರೀಕಾಂತ್‌ ಫ್ರಾನ್ಸ್‌ನ  ಬ್ರೈಸ್‌ ಲೆವರ್ಡೆಸ್‌ ಎದುರು ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಬಿ. ಸಾಯಿಪ್ರಣೀತ್ ಕೊರಿಯಾದ ಆಟಗಾರ ಸನ್‌ ವಾನ್ ಹೊ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಬಿಡಬ್ಲ್ಯುಎಫ್‌ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಪ್ರಣಯ್‌ ಎಂಟನೇ ಶ್ರೇಯಾಂಕದ ಚೀನಾದ ತೈಪೆ ಆಟಗಾರ ಚು ತಿನ್ ಚೆನ್ ವಿರುದ್ಧ ಆಡಲಿದ್ದಾರೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿ ಜಪಾನ್‌ನ ತಕುರೊ ಹೊಕಿ ಮತ್ತು ಯೂಗೊ ಕೊಬಾಯಶಿ ಮೇಲೂ, ಇಂಡಿಯಾ ಓಪನ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಪ್ರಣವ್ ಜೆರಿ ಚೋಪ್ರಾ ಮತ್ತು ಎನ್‌. ಸಿಕ್ಕಿ ರೆಡ್ಡಿ ಜೋಡಿಯು ಮಿಶ್ರ ಡಬಲ್ಸ್ ವಿಭಾಗದಲ್ಲಿ ಜರ್ಮನಿಯ ಮರ್ವಿನ್‌ ಎಮಿಲ್ ಶೆಡೆಲ್ ಮತ್ತು ಲಿಂಡಾ ಎಫ್ಲರ್‌ ವಿರುದ್ಧ ಆಡಲಿದೆ.

ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಇಂಗ್ಲೆಂಡ್‌ನ ಮಾರ್ಕಸ್‌ ಎಲಿಸ್‌ ಮತ್ತು ಕ್ರಿಸ್‌ ಲ್ಯಾನ್‌ಗ್ರಿಡ್ಜ್‌ ಮೇಲೂ, ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಎರಡನೇ ಶ್ರೇಯಾಂಕದ ಜಪಾನ್‌ನ ಮಿಸಾಕಿ ಮಸುಟೊಮೊ ಮತ್ತು ಅಯಾಕಾ ತಕಹಸಿ ವಿರುದ್ಧ ಆಡಲಿದ್ದಾರೆ.

ಜೆ.ಮೇಘನಾ ಮತ್ತು ಪೂರ್ವಿಶಾ ಎಸ್‌.ರಾಮ್‌ ಐದನೇ ಶ್ರೇಯಾಂಕದ ಜಪಾನ್‌ನ ಜೋಡಿ ಶಿಹಾ ತನಕಾ ಮತ್ತು ಕೊಹರೂ ಯೊನೆಮಟೊ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.