ADVERTISEMENT

ಇಬ್ಬರು ವಿಕೆಟ್‌ಕೀಪರ್‌ಗಳ ಕಥೆ

ಗಿರೀಶದೊಡ್ಡಮನಿ
Published 23 ಏಪ್ರಿಲ್ 2019, 12:56 IST
Last Updated 23 ಏಪ್ರಿಲ್ 2019, 12:56 IST
ಮಹೇಂದ್ರಸಿಂಗ್ ಧೋನಿ ಮತ್ತು ಪಾರ್ಥಿವ್ ಪಟೇ್ಲ್  ಪಿಟಿಐ ಚಿತ್ರ
ಮಹೇಂದ್ರಸಿಂಗ್ ಧೋನಿ ಮತ್ತು ಪಾರ್ಥಿವ್ ಪಟೇ್ಲ್  ಪಿಟಿಐ ಚಿತ್ರ   

ಬೆಂಗಳೂರು: ಭಾನುವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಒಂದು ರನ್ ಅಂತರದ ರೋಚಕ ಜಯ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕೈಯಿಂದ ಅಕ್ಷರಶಃ ಆ ಜಯವನ್ನು ಕಿತ್ತುಕೊಂಡು ಬಂದು ವಿರಾಟ್ ಕೊಹ್ಲಿ ಮಡಿಲಿಗೆ ಹಾಕಿದ್ದು ಪಾರ್ಥಿವ್ ಪಟೇಲ್.

ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಪಂದ್ಯವು ಒಂದು ರೀತಿಯಲ್ಲಿ ಇಬ್ಬರು ವಿಕೆಟ್‌ಕೀಪರ್‌ಗಳ ಪೈಪೋಟಿಯಂತೆ ಭಾಸವಾಗಿದ್ದೂ ಹೌದು. ಮಹೇಂದ್ರಸಿಂಗ್ ಧೋನಿ ಮತ್ತು ಪಾರ್ಥಿವ್ ಅವರಿಬ್ಬರ ಆಟವೇ ಪಂದ್ಯದ ಹೈಲೈಟ್ ಆಗಿತ್ತು.

ಏಕೆಂದರೆ ಪಂದ್ಯದಲ್ಲಿ ಆರ್‌ಸಿಬಿಯ ಟ್ರಂಪ್ ಕಾರ್ಡ್‌ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್‌ ಮಿಂಚಲಿಲ್ಲ. ಟೂರ್ನಿಯಲ್ಲಿ ಬಹುತೇಕ ಅವರಿಬ್ಬರೇ ಸ್ಥಿರ ಬ್ಯಾಟಿಂಗ್ ಮಾಡಿದವರು. ಬಿಟ್ಟರೆ ಪಾರ್ಥಿವ್ ಪಟೇಲ್ ಮತ್ತು ಮೋಯಿನ್ ಅಲಿ ಅವರು ಜಿಗುಟುತನದ ಆಟವನ್ನು ಕೆಲವು ಪಂದ್ಯಗಳಲ್ಲಿ ತೋರಿದ್ದರು.

ADVERTISEMENT

ಆದರೆ ಈ ಪಂದ್ಯದಲ್ಲಿ ಪಾರ್ಥಿವ್ ಏಕಾಂಗಿ ಹೋರಾಟದಲ್ಲಿ ದಾಖಲಾದ ಅರ್ಧಶತಕವು ತಂಡಕ್ಕೆ 161 ರನ್‌ಗಳ ಗೌರವಯುತ ಮೊತ್ತ ಗಳಿಸಿಕೊಟ್ಟಿತ್ತು. ಅದಕ್ಕೆ ತಕ್ಕಂತೆ ವೇಗಿ ಡೇಲ್ ಸ್ಟೇನ್ ಆರಂಭದಲ್ಲಿಯೇ ಸಿಎಸ್‌ಕೆಗೆ ಬಲವಾದ ಆಘಾತ ನೀಡಿದ್ದರು. ಆದರೆ, ಫಿನಿಷರ್ ಧೋನಿ ಎಲ್ಲವನ್ನೂ ನುಚ್ಚುನೂರು ಮಾಡುವಂತಹ ಆಟವಾಡಿದ್ದರು. ಪಂದ್ಯದ ಒಂದು ಹಂತದಲ್ಲಿ ತಂಡದ ಗೆಲುವಿಗೆ ಏಳು ಓವರ್‌ಗಳಲ್ಲಿ 79 ರನ್‌ಗಳ ಅವಶ್ಯಕತೆ ಇತ್ತು. ಇದು ತುಸು ಕಠಿಣವೆಂಬಂತೆ ಕಂಡಿತ್ತು. ಆದರೆ ಧೋನಿಯ ಬೀಸಾಟದಿಂದಾಗಿ ಕೊನೆಯ ಒಂದು ಓವರ್‌ನಲ್ಲಿ 26 ರನ್‌ಗಳ ಅವಶ್ಯಕತೆಯ ಹಂತಕ್ಕೆ ಪಂದ್ಯ ಬಂದು ನಿಂತಿತ್ತು. ಅದನ್ನೂ ಅವರು ನಿಭಾಯಿಸಿಬಿಟ್ಟರು. ಉಮೇಶ್ ಯಾದವ್ ಹಾಕಿದ 20ನೇ ಓವರ್‌ನ ಮೊದಲ ಐದು ಎಸೆತಗಳಲ್ಲಿಯೇ 24 ರನ್‌ ಗಳಿಸಿಬಿಟ್ಟರು. ಆದರೆ ಕೊನೆಯ ಎಸೆತದಲ್ಲಿ ಎಡವಟ್ಟಾಯಿತು. ಕೇವಲ ಎರಡು ರನ್‌ ಗಳಿಸಿದ್ದರೆ ಗೆಲುವು ಧೋನಿ ಬಳಗದ ಮಡಿಲು ಸೇರುತ್ತಿತ್ತು. ಉಮೇಶ್ ಹಾಕಿದ ತುಸು ವೈಡ್ ಲೆಂಗ್ತ್‌ ಎಸೆತವನ್ನು ಕಟ್ ಮಾಡಲು ಧೋನಿಗೆ ಸಾಧ್ಯವಾಗಲಿಲ್ಲ.

ಚೆಂಡು ವಿಕೆಟ್‌ಕೀಪರ್ ಪಟೇಲ್ ಕೈ ಸೇರುವ ಮುನ್ನವೇ ಒಂದು ರನ್ ಗಳಿಸಿ, ಸ್ಕೋರ್ ಸಮ ಮಾಡಿಕೊಳ್ಳುವ ಇರಾದೆಯಲ್ಲಿ ಧೋನಿ ಬಹುತೇಕ ಸಫಲರಾಗಿದ್ದರು. ಆದರೆ ಇನ್ನೊಂದು ಬದಿಯಿಂದ ಓಡಿ ಬಂದ ಶಾರ್ದೂಲ್ ಠಾಕೂರ್ ವೇಗ ಸಾಕಾಗಲಿಲ್ಲ. ಪಾರ್ಥಿವ್ ಥ್ರೋಗೆ ಶಾರ್ದೂಲ್ ರನ್‌ಔಟ್ ಆದರು.

ಮೂರು ವರ್ಷಗಳ ಹಿಂದೆ ಇದೇ ಅಂಗಳದಲ್ಲಿ ನಡೆದಿದ್ದ ವಿಶ್ವ ಟ್ವೆಂಟಿ–20 ಪಂದ್ಯದಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಧೋನಿ ಇದೇ ರೀತಿ ಕೊನೆಯ ಎಸೆತದಲ್ಲಿ ತಂತ್ರ ಹೂಡಿದ್ದರು. ಆಗಲೂ ಭಾರತ ಒಂದು ರನ್‌ನಿಂದ ರೋಚಕ ಜಯ ಸಾಧಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಧೋನಿ–ಪಟೇಲ್ ಪೈಪೋಟಿ: 2004ರಲ್ಲಿ ಭಾರತ ತಂಡಕ್ಕೆ ಮಹೇಂದ್ರಸಿಂಗ್ ಧೋನಿ ಪದಾರ್ಪಣೆ ಮಾಡುವ ಮುನ್ನವೇ ಗುಜರಾತಿನ ಎಡಗೈ ಆಟಗಾರ ಪಾರ್ಥಿವ್ ಪಟೇಲ್ ತಂಡದಲ್ಲಿದ್ದರು. ಆಗ ಪಾರ್ಥಿವ್ ಮತ್ತು ತಮಿಳುನಾಡಿನ ದಿನೇಶ್ ಕಾರ್ತಿಕ್ ಅವರ ನಡುವೆ ತಂಡದಲ್ಲಿ ಸ್ಥಾನ ಪಡೆಯಲು ತುರುಸಿನ ಪೈಪೋಟಿ ಇತ್ತು. ಒಂದೊಮ್ಮೆ ಧೋನಿ ಕ್ಲಿಕ್ ಆದ ಮೇಲೆ ಇಬ್ಬರಿಗೂ ಬಹಳ ವರ್ಷಗಳ ಕಾಲ ತಂಡದಲ್ಲಿ ಸ್ಥಾನವೇ ಲಭಿಸಿರಲಿಲ್ಲ.

ಧೋನಿ ವಿಕೆಟ್‌ಕೀಪರ್, ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿಕೊಂಡು ಹೋದರು. ಪಾರ್ಥಿವ್ ತಮ್ಮ ತವರು ಗುಜರಾತ್ ತಂಡಕ್ಕೆ ಕಾಣಿಕೆ ನೀಡುವುದನ್ನು ಮುಂದುವರಿಸಿದರು. 2008ರಲ್ಲಿ ಐಪಿಎಲ್ ಶುರುವಾದಾಗ ಧೋನಿಯೊಂದಿಗೆ ಉಳಿದೆಲ್ಲ ತಂಡಗಳ ವಿಕೆಟ್‌ಕೀಪರ್‌ಗಳ ಪೈಪೋಟಿ ಆರಂಭವಾಯಿತು. ಅದರಲ್ಲೂ ಧೋನಿ, ಪಟೇಲ್ ಮತ್ತು ದಿನೇಶ್ ಅವರ ನಡುವಣ ತ್ರಿಕೋನ ಪೈಪೋಟಿ ಇಂದಿಗೂ ಮುಂದುವರೆದಿದೆ. ಬಹುಶಃ ಇದೇ ಛಲ ಬೆಂಗಳೂರು ಪಂದ್ಯದಲ್ಲಿ ಪಾರ್ಥಿವ್ ಮೇಲುಗೈ ಸಾಧಿಸಲು ಕಾರಣವಾಗಿರಬಹುದು.

ಧೋನಿ ಬಳಗವನ್ನು ಸೋಲಿಸುವುದೇ ಎಲ್ಲ ಎದುರಾಳಿ ತಂಡಗಳಿಗೂ ಒಂದು ರೀತಿಯ ಪ್ರತಿಷ್ಠೆಯ ವಿಷಯವಾಗಿದೆ. 30–35ರ ಆಸುಪಾಸಿನ ಹಿರಿಯ ಆಟಗಾರರ ತಂಡವಾಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಬಗ್ಗೆ ಆರಂಭದಲ್ಲಿ ಸಾಕಷ್ಟು ವ್ಯಂಗ್ಯಗಳು ವ್ಯಕ್ತವಾಗಿದ್ದವು. ಆದರೆ ಹೋದ ವರ್ಷ ಚಾಂಪಿಯನ್ ಆಗುವ ಮೂಲಕ ಎಲ್ಲರ ಬಾಯನ್ನೂ ತಂಡವು ಮುಚ್ಚಿಸಿತ್ತು. ಈ ಬಾರಿಯೂ ಪ್ಲೇ ಆಫ್‌ ಪ್ರವೇಶದ ಹಾದಿಯನ್ನು ಈಗಾಗಲೇ ಸುಗಮಗೊಳಿಸಿಕೊಂಡಿರುವ ತಂಡಕ್ಕೆ ಮಹಿಯೇ ಸ್ಫೂರ್ತಿಯ ಸೆಲೆ. ಯಾವುದೇ ಕ್ಷಣದಲ್ಲಿಯೂ ವಿಚಲಿತರಾಗದ ಅವರ ಮನೋಭಾವ, ನಿರ್ಧಾರ ತೆಗೆದುಕೊಳ್ಳುವ ಗುಣ, ದಿಟ್ಟತನ, ಆತ್ಮವಿಶ್ವಾಸಗಳು ಎದುರಾಳಿ ಬೌಲರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸದೇ ಬಿಡಲಾರವು.

ನಿನ್ನೆಯ ಪಂದ್ಯದಲ್ಲಿ ಡ್ವೇನ್ ಬ್ರಾವೊ ಸ್ನಾಯುಸೆಳೆತ ಅನುಭವಿಸಿದ್ದರಿಂದ ಅವರಿಗೆ ಹೆಚ್ಚು ಬ್ಯಾಟಿಂಗ್ ನೀಡದಿರಲು ನಿರ್ಧರಿಸಿದ್ದ ಧೋನಿ, ಒಂದು ಓವರ್‌ನ ಮೂರು ಎಸೆತಗಳಲ್ಲಿ ರನ್‌ ಪಡೆಯುವ ಅವಕಾಶ ಇದ್ದರೂ ಓಡಿರಲಿಲ್ಲ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಅವರ ಆಟದ ಗಮ್ಮತ್ತು ಎಲ್ಲರ ಮನಗೆದ್ದಿತ್ತು. ವಿರಾಟ್ ಬಳಗವು ಪಂದ್ಯ ಗೆದ್ದಿತು. ಆದರೆ, ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದು ಮಾತ್ರ ಮಹಿ ಎಂದೇ ಸಾಮಾಜಿಕ ಜಾಲತಾಣಗಳು ವಿಶ್ಲೇಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.