ADVERTISEMENT

ಕಾಶ್ವಿ 10 ವಿಕೆಟ್‌ ದಾಖಲೆ

ಪಿಟಿಐ
Published 25 ಫೆಬ್ರುವರಿ 2020, 19:24 IST
Last Updated 25 ಫೆಬ್ರುವರಿ 2020, 19:24 IST

ಕಡಪ, ಆಂಧ್ರಪ್ರದೇಶ : ಬೌಲಿಂಗ್‌ ಮಾಡಿದ್ದು 4.5 ಓವರ್‌. ಬಿಟ್ಟುಕೊಟ್ಟಿದ್ದು 12 ರನ್‌. ಉರುಳಿಸಿದ್ದು ಎದುರಾಳಿ ತಂಡದ ಎಲ್ಲಾ 10 ವಿಕೆಟ್‌.

ಚಂಡೀಗಡ ತಂಡದ ನಾಯಕಿ ಕಾಶ್ವಿ ಗೌತಮ್‌ ಅವರಿಂದ ಮೂಡಿಬಂದ ದಾಖಲೆ ಇದು.

ಇಲ್ಲಿನ ಕೆಎಸ್‌ಆರ್‌ಎಂ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ 19 ವರ್ಷದೊಳಗಿನವರ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕಾಶ್ವಿ ಅವರಿಂದ ಈ ಸಾಧನೆ ಅರಳಿತು. ಅವರು ಸೀಮಿತ ಓವರ್‌ಗಳ ಪಂದ್ಯದಲ್ಲಿ ಈ ದಾಖಲೆ ಬರೆದ ಭಾರತದ ಮೊದಲ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾದರು.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಚಂಡೀಗಡ ತಂಡವು ಕಾಶ್ವಿ (49; 68ಎ, 6ಬೌಂ) ಅವರ ಉತ್ತಮ ಆಟದ ಬಲದಿಂದ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 186ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಅರುಣಾಚಲ ಪ್ರದೇಶ 8.5 ಓವರ್‌ಗಳಲ್ಲಿ 25ರನ್‌ಗಳಿಗೆ ಆಲೌಟ್‌ ಆಯಿತು.

ಅರುಣಾಚಲ ಪ್ರದೇಶ ತಂಡದ ಎಂಟು ಮಂದಿ ಶೂನ್ಯಕ್ಕೆ ಔಟಾದರು. ಈ ತಂಡದ ಆಟಗಾರ್ತಿಯರು ಗಳಿಸಿದ್ದು 17ರನ್‌ ಮಾತ್ರ. ಉಳಿದ ಎಂಟು ರನ್‌ಗಳು ಇತರೆ ರೂಪದಲ್ಲಿ ತಂಡದ ಖಾತೆಗೆ ಸೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.