ADVERTISEMENT

ಮೊದಲ ಟೆಸ್ಟ್‌ನಲ್ಲಿ ಸಹಾಗೆ ಅವಕಾಶ ಸಾಧ್ಯತೆ

ಪಿಟಿಐ
Published 14 ಡಿಸೆಂಬರ್ 2020, 18:40 IST
Last Updated 14 ಡಿಸೆಂಬರ್ 2020, 18:40 IST
ರಿಷಭ್ ಪಂತ್
ರಿಷಭ್ ಪಂತ್   

ನವದೆಹಲಿ: ಅಡಿಲೇಡ್‌ನಲ್ಲಿ ಇದೇ 17ರಿಂದ ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಹಗಲು–ರಾತ್ರಿ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ವೃದ್ಧಿಮಾನ ಸಹಾ ಅವರಿಗೆ ವಿಕೆಟ್‌ಕೀಪಿಂಗ್ ಹೊಣೆ ನೀಡುವ ಸಾಧ್ಯತೆ ಇದೆ.

ಪಂದ್ಯದಲ್ಲಿ ಕಣಕ್ಕಿಳಿಯಲಿರುವ ತಂಡದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಆದರೆ ರಿಷಭ್ ಪಂತ್ ಅವರಿಗಿಂತ ಹೆಚ್ಚು ಅನುಭವಿಯಾಗಿರುವ 36 ವರ್ಷದ ಸಹಾ ಅವರಿಗೆ ಕೀಪಿಂಗ್ ಹೊಣೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ.

ಸಿಡ್ಡಿಯಲ್ಲಿ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್ ವೇಗದ ಶತಕ ದಾಖಲಿಸಿದ್ದರು ಅದೇ ಪಂದ್ಯದಲ್ಲಿ ಶತಕ ಬಾರಿಸಿದ್ದ ಹನುಮವಿಹಾರಿ ಅವರನ್ನೂ ಕಣಕ್ಕಿಳಿಸುವ ಬಗ್ಗೆ ತಂಡದ ಆಡಳಿತಕ್ಕೆ ಒಲವು ಇದೆ ಎನ್ನಲಾಗಿದೆ.

ADVERTISEMENT

ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ, ಸಹಾಯಕ ಕೋಚ್‌ ವಿಕ್ರಂ ರಾಥೋಡ್, ಭರತ್ ಅರುಣ್ ಮತ್ತು ಆಯ್ಕೆಗಾರ ಹರವಿಂದರ್ ಸಿಂಗ್ ಅವರು ಪಂತ್ ಮತ್ತು ಸಹಾ ಅವರ ಸಾಧನೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.

ಪಂದ್ಯದ ವಿವಿಧ ಹಂತಗಳಲ್ಲಿ ಅವರಿಬ್ಬರೂ ಇದುವರೆಗೆ ನೀಡಿರುವ ಕಾಣಿಕೆ ಮತ್ತು ಆಟದ ವೈಖರಿಯ ಕುರಿತು ಹೆಚ್ಚು ಅವಲೋಕನ ನಡೆಸಲಾಗುತ್ತಿದೆ. ಸಹಾ 37 ಟೆಸ್ಟ್‌ಗಳಲ್ಲಿ 1238 ರನ್‌ಗಳನ್ನು ಗಳಿಸಿದ್ದಾರೆ. ಕೀಪಿಂಗ್‌ನಲ್ಲಿ 92 ಕ್ಯಾಚ್ ಮತ್ತು 11 ಸ್ಟಂಪಿಂಗ್ ಗಳನ್ನು ಮಾಡಿದ್ದಾರೆ.

ಆಸ್ಟ್ರೇಲಿಯಾ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಚೆನ್ನಾಗಿ ಆಡಿದ್ದ ಯುವ ಆಟಗಾರ ಶುಭಮನ್ ಗಿಲ್ ಅವರಿಗೆ ಅವಕಾಶ ಕೊಡುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.