ADVERTISEMENT

ಅಫ್ಗಾನಿಸ್ತಾನಕ್ಕೆ ಜಯದ ವಿಶ್ವಾಸ

ಪಿಟಿಐ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
   

ಲೀಡ್ಸ್‌: ವಿಶ್ವಕಪ್‌ ಸೆಮಿಫೈನಲ್‌ ರೇಸ್‌ನಿಂದ ಹೊರಬಿ ದ್ದಿರುವ ವೆಸ್ಟ್‌ ಇಂಡೀಸ್‌ ಮತ್ತು ಆಫ್ಗಾನಿಸ್ತಾನ ತಂಡಗಳು ಗುರುವಾರ ಇಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಮೊದಲ ವಿಜಯ ಎದುರುನೋಡುತ್ತಿರುವ ಅಫ್ಗಾನಿಸ್ತಾನ ಈ ಪಂದ್ಯದಲ್ಲಿ ಅನುಭವಿ ವೆಸ್ಟ್‌ ಇಂಡೀಸ್‌ಗಿಂತ ಮಾನಸಿಕವಾಗಿ ಹೆಚ್ಚು ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಇನ್ನೊಂದೆಡೆ ವೆಸ್ಟ್‌ ಇಂಡೀಸ್‌ಗೂ ಗೆಲ್ಲುವುದು ಮರ್ಯಾದೆ ಪ್ರಶ್ನೆ.

ಗೇಲ್‌, ಬ್ರಾತ್‌ವೇಟ್‌, ಶಾಯ್‌ ಹೋಪ್‌ ಮುಂತಾದ ಪವರ್‌ ಹಿಟ್ಟರ್‌ಗಳನ್ನು ಒಳಗೊಂಡ ವೆಸ್ಟ್‌ ಇಂಡೀಸ್‌ ತಂಡವನ್ನು, ಅಫ್ಗಾನಿಸ್ತಾನ ಹರಾರೆಯಲ್ಲಿ ಕಳೆದ ವರ್ಷ ನಡೆದ ವಿಶ್ವಕಪ್‌ ಅರ್ಹತಾ ಪಂದ್ಯದಲ್ಲಿ ಎರಡು ಬಾರಿ ಸೋಲಿಸಿತ್ತು. ಇತ್ತೀಚೆಗೆ ಕೆಲವು ಘಟಾನುಘಟಿ ತಂಡಗಳಿಗೆ ಸೋತರೂಅಫ್ಗಾನಿಸ್ತಾನ ತೋರಿದ ಹೋರಾಟ ಗಮನ ಸೆಳೆದಿತ್ತು. ತಮ್ಮನ್ನು ‘ಕ್ರಿಕೆಟ್‌ನ ಕೂಸು’ ಎಂದು ಪರಿಗಣಿಸುವಂತಿಲ್ಲ ಎಂದು ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ನೀಡಿದ ಪ್ರದರ್ಶನಗಳ ಮೂಲಕ ಎಚ್ಚರಿಕೆ ನೀಡಿದೆ. ಮೊಹಮ್ಮದ್‌ ನಬಿ, ಮುಜಿಬುರ್‌ ರೆಹಮಾನ್‌ ಮತ್ತು ರಶೀದ್‌ ಖಾನ್‌ ಅವರನ್ನೊಳಗೊಂಡ ಬೌಲಿಂಗ್ ಪಡೆ ಬಲವಾಗಿದೆ. ಆದರೆ ಅದಕ್ಕೆ ತಕ್ಕಂತೆ ಬ್ಯಾಟಿಂಗ್ ಸ್ಥಿರವಾಗಿಲ್ಲ.

ಹಾಗೆ ನೋಡಿದರೆ, ಪ್ರತಿಭಾನ್ವಿತ ಯುವ ಆಟಗಾರರ ಪಡೆಯನ್ನೇ ಹೊಂದಿರುವ ವೆಸ್ಟ್‌ ಇಂಡೀಸ್‌ ಕೂಡ ವಿಶ್ವಕಪ್‌ನ ಕೆಲವು ಪಂದ್ಯಗಳಲ್ಲಿ ಪ್ರಬಲ ತಂಡಗಳ ವಿರುದ್ಧ ಗೆಲುವಿನ ಮೆಟ್ಟಿಲಲ್ಲೇ ಮುಗ್ಗರಿಸಿದೆ. ಲಂಕಾ ವಿರುದ್ಧ ಕೊನೆಯ ಪಂದ್ಯದಲ್ಲೂ ಕೆರಿಬಿಯನ್ನರು ಹೋರಾಟ ತೋರಿದ್ದರು. ನ್ಯೂಜಿಲೆಂಡ್‌ ವಿರುದ್ಧ ಕಾರ್ಲೋಸ್‌ ಬ್ರಾತ್‌ವೇಟ್‌ ಬಾರಿಸಿದ ಶತಕ ತಂಡವನ್ನು ಹೆಚ್ಚುಕಮ್ಮಿ ಗೆಲುವಿನ ಅಂಚಿಗೆ ಒಯ್ದಿತ್ತು.

ADVERTISEMENT

‘ಕೆಲವು ಪಂದ್ಯಗಳಲ್ಲಿ ಗೆಲುವಿನ ಹತ್ತಿರ ಹೋಗಿ ಸೋತಿರುವುದು ನಿರಾಶೆ ಉಂಟು ಮಾಡಿದೆ’ ಎಂದು ಲಂಕಾ ವಿರುದ್ಧ ಪಂದ್ಯದ ನಂತರ ನಾಯಕ ಜೇಸನ್‌ ಹೋಲ್ಡರ್‌ ಹತಾಶೆ ತೋಡಿಕೊಂಡಿದ್ದರು. 1975 ಮತ್ತು 1979ರಲ್ಲಿ ವಿಶ್ವ ವಿಜೇತರಾಗಿದ್ದ ವೆಸ್ಟ್‌ ಇಂಡೀಸ್‌ ಈ ಟೂರ್ನಿಯ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ತಂಡವನ್ನು ಬಗ್ಗುಬಡಿದಿತ್ತು. ನಂತರ ಏಳು ಪಂದ್ಯಗಳಲ್ಲಿ ಆ ತಂಡಕ್ಕೆ ಗೆಲುವು ಮರೀಚಿಕೆಯಾಗಿದೆ. ಕೊನೆಯ ಪಂದ್ಯದ ಗೆಲುವು ಸ್ವಲ್ಪವಾದರೂ ಮರ್ಯಾದೆ ಉಳಿಸಿಕೊಳ್ಳಲು ನೆರವಾಗಬಲ್ಲದು.

ವೆಸ್ಟ್‌ ಇಂಡೀಸ್‌ ಪಾಯಿಂಟ್‌ ಪಟ್ಟಿಯಲ್ಲಿ 9ನೇ ಮತ್ತು ಅಫ್ಗಾನಿಸ್ತಾನ ಹತ್ತನೇ ಸ್ಥಾನದಲ್ಲಿವೆ. ಈ ಪಂದ್ಯದ ನಂತರವೂ ಅವುಗಳ ‘ಸ್ಥಾನಮಾನ’ದಲ್ಲಿ ಬದಲಾವಣೆಯಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.