ADVERTISEMENT

ಅಫ್ಗಾನಿಸ್ತಾನ ತಂಡದ ಚೊಚ್ಚಲ ಟೆಸ್ಟ್ ಜಯ

ಐರ್ಲೆಂಡ್ ವಿರುದ್ಧ 1-0ಯಿಂದ ಗೆಲುವು

ಪಿಟಿಐ
Published 18 ಮಾರ್ಚ್ 2019, 19:02 IST
Last Updated 18 ಮಾರ್ಚ್ 2019, 19:02 IST
ಡೆಹ್ರಾಡೂನ್‌ನಲ್ಲಿ ನಡೆದ ಐರ್ಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಗೆದ್ದ ಅಫ್ಗಾನಿಸ್ತಾನ ತಂಡ   –ಪಿಟಿಐ ಚಿತ್ರ
ಡೆಹ್ರಾಡೂನ್‌ನಲ್ಲಿ ನಡೆದ ಐರ್ಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಗೆದ್ದ ಅಫ್ಗಾನಿಸ್ತಾನ ತಂಡ   –ಪಿಟಿಐ ಚಿತ್ರ   

ಡೆಹ್ರಾಡೂನ್: ಅಫ್ಗಾನಿಸ್ತಾನ ಕ್ರಿಕೆಟ್ ತಂಡವು ಮೊತ್ತಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಜಯದ ಸಂಭ್ರಮ ಆಚರಿಸಿತು.

ಸೋಮವಾರ ಇಲ್ಲಿ ಮುಕ್ತಾಯವಾದ ಐರ್ಲೆಂಡ್ ಎದುರಿನ ಏಕೈಕ ಟೆಸ್ಟ್‌ನಲ್ಲಿ ಏಳು ವಿಕೆಟ್‌ಗಳ ಜಯ ದಾಖಲಿಸಿದ ಅಫ್ಗನ್ ತಂಡವು ಇತಿಹಾಸ ರಚಿಸಿತು.

ಗೆಲುವಿಗಾಗಿ 147 ರನ್‌ಗಳ ಗುರಿ ಬೆನ್ನಟ್ಟಿದ ತಂಡವು 47.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 149 ರನ್‌ ಗಳಿಸಿ ಗೆದ್ದಿತು. ರೆಹಮತ್ ಶಾ (76; 122ಎಸೆತ) ಮತ್ತು ಇಹಸಾನುಲ್ಲಾ ಜನತ್ (65; 129ಎಸೆತ) ಅವರು ಎರಡನೇ ವಿಕೆಟ್‌ ಜೊತೆಯಾಟದಲ್ಲಿ 139 ರನ್‌ಗಳನ್ನು ಸೇರಿಸಿ ಗೆಲುವಿಗೆ ಕಾರಣರಾದರು.

ADVERTISEMENT

ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಐರ್ಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ತಲಾ ಮೂರು ವಿಕೆಟ್ ಕಬಳಿಸಿದ ಅಹಮದ್‌ಝಾಯ್ ಮತ್ತು ನಬಿ ಐರ್ಲೆಂಡ್ ತಂಡವನ್ನು 172 ರನ್‌ಗಳಿಗೆ ನಿಯಂತ್ರಿಸಿದ್ದರು. ರೆಹಮತ್ ಶಾ (98 ರನ್) ಅವರ ಮೋಹಕ ಬ್ಯಾಟಿಂಗ್‌ ಬಲದಿಂದ ಅಫ್ಗನ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 142 ರನ್‌ಗಳ ಮುನ್ನಡೆ ಗಳಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಆ್ಯಂಡಿ ಬಾಲ್ಬಿರ್ನಿ (82; 149ಎಸೆತ, 11ಬೌಂಡರಿ) ಮತ್ತು ಕೆವಿನ್ ಒಬ್ರೇನ್ (56; 78ಎ, 7ಬೌಂ) ಅವರ ಉತ್ತಮ ಬ್ಯಾಟಿಂಗ್‌ನಿಂದ 288 ರನ್‌ಗಳನ್ನು ಗಳಿಸಿತು. ಆದರೆ ರಶೀದ್ ಖಾನ್ (82ಕ್ಕೆ5) ಅವರ ಚುರುಕಿನ ಬೌಲಿಂಗ್‌ನಿಂದಾಗಿ ಐರ್ಲೆಂಡ್ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳ ಆಟ ನಡೆಯಲಿಲ್ಲ. ಇದರಿಂದಾಗಿ ದೊಡ್ಡ ಮೊತ್ತದ ಗುರಿಯನ್ನು ನೀಡುವ ತಂಡದ ಉದ್ದೇಶಕ್ಕೆ ಹಿನ್ನಡೆಯಾಯಿತು.

ತಾಲಿಬಾನ್ ಭಯೋತ್ಪಾದಕರ ಕರಿನೆರಳಿನಿಂದ ಮುಕ್ತವಾದ ನಂತರ ಅಫ್ಗಾನಿಸ್ತಾನದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಬಿಸಿಸಿಐ ಸಹಾಯಹಸ್ತ ಚಾಚಿತ್ತು. ಉತ್ತರಾಖಂಡದ ಡೆಹ್ರಾಡೂನ್‌ ಅಫ್ಗನ್ ತಂಡಕ್ಕೆ ತವರಿನ ಅಂಗಳವಾಗಿದೆ. ಹೋದ ವರ್ಷವಷ್ಟೇ ತಂಡಕ್ಕೆ ಐಸಿಸಿಯು ಟೆಸ್ಟ್ ಮಾನ್ಯತೆ ನೀಡಿತ್ತು. ಅಫ್ಗನ್ ತಂಡವು ತನ್ನ ಚೊಚ್ಚಲ ಟೆಸ್ಟ್‌ ಪಂದ್ಯವನ್ನು ಬೆಂಗಳೂರಿನಲ್ಲಿ ಭಾರತದ ಎದುರು ಆಡಿತ್ತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಐರ್ಲೆಂಡ್: 172 (ಮರ್ಟಾಗ್ 54, ಅಹಮದ್‌ಝಾಯ್ 41ಕ್ಕ3‌, ನಬಿ 36ಕ್ಕೆ 3), ಅಫ್ಗಾನಿಸ್ತಾನ: 314 (ರೆಹಮತ್ ಶಾ 98, ಅಸ್ಗರ್ 67, ಅಸ್ಗರ್ ಅಫ್ಗಾನ್ 67, ಕ್ಯಾಮರಾನ್ ಡೋ 94ಕ್ಕೆ2, ಥಾಂಪ್ಸನ್ 28ಕ್ಕೆ3) ; ಎರಡನೇ ಇನಿಂಗ್ಸ್: ಐರ್ಲೆಂಡ್: 288 (ಬಾಲ್ಬಿರ್ನಿ 82, ಒಬ್ರೇನ್ 56, ರಶೀದ್ 82ಕ್ಕೆ5, ಅಹಮದ್‌ಝಾಯ್ 52ಕ್ಕೆ3), ಅಫ್ಗಾನಿಸ್ತಾನ: 3 ವಿಕೆಟ್‌ಗಳಿಗೆ 149 (ರೆಹಮತ್ ಶಾ 76, ಇಹಾಸಾನುಲ್ಲಾ ಔಟಾಗದೆ 65), ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 7 ವಿಕೆಟ್‌ಗಳ ಜಯ ಮತ್ತು 1–0ಯಲ್ಲಿ ಸರಣಿ ಗೆಲವು. ಪಂದ್ಯಶ್ರೇಷ್ಠ: ರೆಹಮತ್ ಶಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.