ಮುಂಬೈ: ಔಟ್ ಕೊಟ್ಟು ಐದು ನಿಮಿಷದ ಬಳಿಕ ಅಂಪೈರ್‌ಗಳು ಬ್ಯಾಟರ್ ಅಜಿಂಕ್ಯ ರಹಾನೆಯನ್ನು ಡ್ರೆಸಿಂಗ್ ಕೊಠಡಿಯಿಂದ ಮೈದಾನಕ್ಕೆ ಕರೆದಿರುವ ಘಟನೆ ಮುಂಬೈ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ರಣಜಿ ಪಂದ್ಯದಲ್ಲಿ ನಡೆದಿದೆ.
ಈ ಸಂಬಂಧ ದೇಶೀಯ ಕ್ರಿಕೆಟ್‌ನಲ್ಲಿ ಅಂಪೈರ್‌ಗಳ ಕಾರ್ಯನಿರ್ವಹಣೆ ಕುರಿತಂತೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮುಂಬೈನ ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಎರಡನೇ ಇನಿಂಗ್ಸ್‌ನ 25ನೇ ಓವರಿನಲ್ಲಿ ಜಮ್ಮುವಿನ ವೇಗಿ ಉಮರ್ ನಾಜಿರ್ ಎಸೆತದಲ್ಲಿ ರಹಾನೆ ಗ್ಲೌಸ್‌ಗೆ ಬಡಿದ ಚೆಂಡು ವಿಕೆಟ್ ಕೀಪರ್ ಕೈ ಸೇರಿತ್ತು. ಔಟ್ ಎಂದು ಅಂಪೈರ್ ನಿರ್ಣಯಿಸಿದ್ದರು. ರಹಾನೆ ಡ್ರೆಸಿಂಗ್ ಕೊಠಡಿಗೂ ತೆರಳಿದ್ದರು. ಅದಾದ ಐದು ನಿಮಿಷದ ಬಳಿಕ ಉಮರ್. ನೋ ಬಾಲ್ ಎಸೆದಿರುವುದನ್ನು ಮೂರನೇ ಅಂಪೈರ್ ಮೈದಾನದ ಅಂಪೈರ್‌ಗಳ ಗಮನಕ್ಕೆ ತಂದಿದ್ದಾರೆ. ಬಳಿಕ, ಮೈದಾನಕ್ಕೆ ಬಂದಿದ್ದ ಶಾರ್ದೂಲ್ ಠಾಕೂರ್ ಅವರನ್ನು ಕಳುಹಿಸಿ ರಹಾನೆಯನ್ನು ಮತ್ತೆ ಮೈದಾನಕ್ಕೆ ಕರೆಸಿಕೊಳ್ಳಲಾಗಿದೆ.
ರಹಾನೆ ಮತ್ತೆ ಕ್ರೀಸಿಗೆ ಬಂದಾಗ, ನಾವು ನೋಬಾಲ್ ಚೆಕ್ ಮಾಡುತ್ತಿದ್ದೆವು. ಕಾಯುವಂತೆ ಹೇಳಿದರೂ ನೀವು ಹೋಗಿದ್ದೇಕೆ? ಎಂದು ಅಂಪೈರ್‌ಗಳು ಪ್ರಶ್ನಿಸುತ್ತಿದ್ದ ದೃಶ್ಯ ಕಂಡುಬಂದಿದೆ.
ಎಂದಾದರೂ ಈ ರೀತಿಯ ಘಟನೆ ನೋಡಿದ್ದೀರ?. ಔಟೆಂದು ನಿರ್ಣಯಿಸಿದ ಬಳಿಕ ಡ್ರೆಸಿಂಗ್ ಕೊಠಡಿಗೆ ತೆರಳಿದ್ದ ಬ್ಯಾಟರ್ ಅನ್ನು ಮತ್ತೆ ಮೈದಾನಕ್ಕೆ ಕರೆಸಿಕೊಳ್ಳಲಾಗಿದೆ ಎಂದು ವಿಡಿಯೊ ಸಹಿತ ಮನೋಜ್ ಯಾದವ್ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.