ADVERTISEMENT

ಟೀಕೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ಅಜಿಂಕ್ಯ ರಹಾನೆ

ಏಜೆನ್ಸೀಸ್
Published 24 ಆಗಸ್ಟ್ 2021, 7:53 IST
Last Updated 24 ಆಗಸ್ಟ್ 2021, 7:53 IST
ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರಹಾನೆ ಅರ್ಧಶತಕ ದಾಖಲಿಸಿದ ಸಂದರ್ಭ – ರಾಯಿಟರ್ಸ್ ಚಿತ್ರ
ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ರಹಾನೆ ಅರ್ಧಶತಕ ದಾಖಲಿಸಿದ ಸಂದರ್ಭ – ರಾಯಿಟರ್ಸ್ ಚಿತ್ರ   

ಲಂಡನ್: ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಅವುಗಳನ್ನು ಅಭಿನಂದನೆಗಳನ್ನಾಗಿ ಸ್ವೀಕರಿಸಿ ಮುಂದಡಿಯಿಡುತ್ತಿದ್ದೇನೆ ಎಂದು ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಹೇಳಿದ್ದಾರೆ.

2021ರಲ್ಲಿ ರಹಾನೆ ಅವರಿಂದ ದೊಡ್ಡ ಇನ್ನಿಂಗ್ಸ್‌ ಮೂಡಿಬಂದಿಲ್ಲ. ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕನ ಸ್ಥಾನವನ್ನು ಅವರು ಕಳೆದುಕೊಳ್ಳಬೇಕಾಗಬಹುದೇ ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿವೆ.

ಕಳೆದ 15 ಇನ್ನಿಂಗ್ಸ್‌ಗಳಲ್ಲಿ ಅವರಿಂದ ಕೇವಲ 2 ಅರ್ಧಶತಕಗಳಷ್ಟೇ ದಾಖಲಾಗಿವೆ. ಈ ಪೈಕಿ ಎರಡನೇಯದ್ದು ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ಪಂದ್ಯದಲ್ಲಿ ದಾಖಲಾಗಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ರಹಾನೆ ಅವರು ದಾಖಲಿಸಿದ 61 ರನ್‌ ಲಾರ್ಡ್ಸ್‌ ಟೆಸ್ಟ್‌ನ ಐದನೇ ದಿನ ಭಾರತದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿತ್ತು.

‘ಜನರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ನನಗೆ ಸಂತಸವಿದೆ. ಜನರು ಯಾವಾಗಲೂ ಮುಖ್ಯ ವ್ಯಕ್ತಿಗಳ ಬಗ್ಗೆ ಮಾತನಾಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಆ ಕುರಿತು ನಾನು ಯೋಚಿಸುತ್ತಿಲ್ಲ. ತಂಡಕ್ಕೆ ಕೊಡುಗೆ ನೀಡುವ ಬಗ್ಗೆ ಮಾತ್ರ ಯೋಚಿಸುತ್ತೇನೆ. ಎಲ್ಲವೂ ನನಗೆ ಸ್ಫೂರ್ತಿ ನೀಡುತ್ತವೆ. ದೇಶಕ್ಕಾಗಿ ಆಡುವುದು ನನಗೆ ಹೆಚ್ಚು ಸ್ಫೂರ್ತಿ ನೀಡುತ್ತದೆ. ಟೀಕೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ರಹಾನೆ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಚೇತೇಶ್ವರ್ ಪೂಜಾರ ಸಹ ಲಾರ್ಡ್ಸ್‌ ಟೆಸ್ಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದರು.

‘ಚೇತೇಶ್ವರ್ ಮತ್ತು ನಾನು ದೀರ್ಘ ಅವಧಿಯಿಂದ ಆಡುತ್ತಿದ್ದೇವೆ. ಒತ್ತಡವನ್ನು ಹೇಗೆ ನಿಭಾಯಿಸಬೇಕೆಂಬುದು ನಮಗೆ ಗೊತ್ತಿದೆ. ನಿರ್ದಿಷ್ಟ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಎಂಬುದೂ ನಮಗೆ ತಿಳಿದಿದೆ’ ಎಂದು ರಹಾನೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.