ADVERTISEMENT

ಬಾಂಗ್ಲಾದೇಶ ಎದುರಿನ ಟೆಸ್ಟ್‌: ಪಾಕಿಸ್ತಾನಕ್ಕೆ ಭರ್ಜರಿ ಗೆಲುವು

ಬಾಂಗ್ಲಾದೇಶ ಎದುರಿನ ಟೆಸ್ಟ್‌: ಅಬಿದ್ ಅಲಿ, ಅಬ್ದುಲ್ ಶಫೀಕ್ 151 ರನ್‌ಗಳ ಜೊತೆಯಾಟ

ಏಜೆನ್ಸೀಸ್
Published 30 ನವೆಂಬರ್ 2021, 13:43 IST
Last Updated 30 ನವೆಂಬರ್ 2021, 13:43 IST
ಅಬಿದ್ ಅಲಿ ಅರ್ಧಶತಕದ ಸಂಭ್ರಮ –ಎಎಫ್‌ಪಿ ಚಿತ್ರ
ಅಬಿದ್ ಅಲಿ ಅರ್ಧಶತಕದ ಸಂಭ್ರಮ –ಎಎಫ್‌ಪಿ ಚಿತ್ರ   

ಚಿತ್ತಗಾಂಗ್‌, ಬಾಂಗ್ಲಾದೇಶ: ಸತತ ಎರಡು ಇನಿಂಗ್ಸ್‌ಗಳಲ್ಲಿ ಶತಕ ಗಳಿಸುವ ಅಬಿದ್ ಅಲಿ ಅವರ ಕನಸು ಭಗ್ನಗೊಂಡಿತು. ಆದರೂ ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಭರ್ಜರಿ ಗೆಲುವು ತಂದುಕೊಡಲು ಅವರು ನೆರವಾದರು.

ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ 202 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಾಕಿಸ್ತಾನ 58.3 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 203 ರನ್ ಗಳಿಸುವ ಮೂಲಕ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ನಾಲ್ಕನೇ ದಿನವಾದ ಸೋಮವಾರ ವಿಕೆಟ್ ಕಳೆದುಕೊಳ್ಳದೇ 109 ರನ್ ಗಳಿಸಿದ್ದ ಪಾಕಿಸ್ತಾನ ಜಯದ ಹೊಸ್ತಿಲಿನಲ್ಲಿತ್ತು. ಮಂಗಳವಾರವೂ ಅಬಿದ್ ಅಲಿ (91; 148 ಎಸೆತ, 12 ಬೌಂಡರಿ) ಮತ್ತು ಅಬ್ದುಲ್ ಶಫೀಕ್ (73; 129 ಎ, 8 ಬೌಂ, 1 ಸಿಕ್ಸರ್‌) ಅವರ ಬ್ಯಾಟಿಂಗ್ ವೈಭವ ಮುಂದುವರಿಯಿತು.

ADVERTISEMENT

151 ರನ್‌ಗಳ ಅವರ ಜೊತೆಯಾಟವನ್ನು ದಿನದ ಹತ್ತನೇ ಓವರ್‌ನಲ್ಲಿ ಮೆಹದಿ ಹಸನ್ ಮುರಿದರು.ಅಬ್ದುಲ್ ಶಫೀಕ್ ಅವರನ್ನು ಹಸನ್ ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿದರು. ಸ್ವಲ್ಪದರಲ್ಲೇ ಅಬಿದ್ ಅಲಿ ಕೂಡ ಔಟಾದರು. ನಂತರ ಅಜರ್ ಅಲಿ ಮತ್ತು ನಾಯಕ ಬಾಬರ್ ಆಜಂ ಅವರ ಆಟ ರಂಗೇರಿತು. ಮೂರನೇ ವಿಕೆಟ್‌ಗೆ ಅಜೇಯ 32 ರನ್‌ಗಳ ಜೊತೆಯಾಟವಾಡಿದ ಅವರು ಭೋಜನ ವಿರಾಮದ ವೇಳೆ ಜಯ ಗಳಿಸಿಕೊಟ್ಟರು.

ಮೊದಲ ಇನಿಂಗ್ಸ್‌ನಲ್ಲಿ ಅಲಿ 133 ರನ್ ಗಳಿಸಿದ್ದರು. ಇದರಿಂದಾಗಿ ತಂಡ ಉತ್ತಮ ಮೊತ್ತ ಕಲೆ ಹಾಕಿತ್ತು. ಎರಡನೇ ಇನಿಂಗ್ಸ್‌ನಲ್ಲೂ ಶತಕ ಗಳಿಸಿದ್ದರೆ ಆರು ವರ್ಷಗಳ ನಂತರ, ಒಂದೇ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಆಟಗಾರ ಎನಿಸುತ್ತಿದ್ದರು. ಮಿಸ್ಬಾ ಉಲ್ ಹಕ್ 2014ರಲ್ಲಿ ಆಸ್ಟ್ರೇಲಿಯಾ ಎದುರು ಈ ಸಾಧನೆ ಮಾಡಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌, ಬಾಂಗ್ಲಾದೇಶ: 330; ಪಾಕಿಸ್ತಾನ: 286; ಎರಡನೇ ಇನಿಂಗ್ಸ್‌, ಬಾಂಗ್ಲಾದೇಶ: 157; ಪಾಕಿಸ್ತಾನ (ಸೋಮವಾರ ವಿಕೆಟ್ ಕಳೆದುಕೊಳ್ಳದೆ 109): 58.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 203 (ಅಬಿದ್ ಅಲಿ 91, ಅಬ್ದುಲ್ಲ ಶಫೀಕ್ 73, ಅಜರ್ ಅಲಿ ಔಟಾಗದೆ 24, ಬಾಬರ್ ಆಜಂ ಔಟಾಗದೆ 13). ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಜಯ; ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.